ಬೆಂಗಳೂರು, ಫೆ.3- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಸಿದಂತೆ ಎಸ್‍ಐಟಿ ತನಿಖಾ ಅಂತಿಮ ವರದಿ ಸಲ್ಲಿಸಲು ಹೈಕೋರ್ಟ್ ಅನುಮತಿ ನೀಡಿದೆ. ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ನಡೆಸಿರುವ ತನಿಖಾ ವರದಿಯನ್ನು ಸಕ್ಷಮ ನ್ಯಾಯಾಲಯದಲ್ಲಿ ಅಂತಿಮ ವರದಿ ಸಲ್ಲಿಸುವಂತೆ ಹೈಕೋರ್ಟ್ ಅನುಮತಿ ನೀಡಿದೆ.
ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ತನಿಖೆ ಪ್ರಶ್ನಿಸಿದ್ದ ಯುವತಿಯ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ವಿಭಾಗೀಯ ಪೀಠ ವಿಚಾರಣೆಯ ಅಂತಿಮ ತನಿಖಾ ವರದಿಯನ್ನು ತಡೆಹಿಡಿಯಲು ನಿರಾಕರಿಸಿ ವರದಿ ಸಲ್ಲಿಸಲು ಅನುಮತಿ ನೀಡಿ ಈ ಬಗ್ಗೆ ಅರ್ಜಿದಾರರು ಎತ್ತಿರುವ ಪ್ರಶ್ನೆಗಳನ್ನು ಮುಕ್ತವಾಗಿರಿಸಲಾಗಿದೆ ಎಂದು ಹೇಳಿದೆ.
ಅರ್ಜಿದಾರರು ಮ್ಯಾಜಿಸ್ಟ್ರೇಟ್ ಕೋರ್ಟ್‍ನಲ್ಲಿ ಆಕ್ಷೇಪಗಳನ್ನು ಸಕ್ಷಮ ಮ್ಯಾಜಿಸ್ಟ್ರೇಟ್ ಮುಂದೆ ಸಲ್ಲಿಸಲು ಅನುಮತಿ ನೀಡಿದೆ. ಎಸ್‍ಐಟಿ ಮುಖ್ಯಸ್ಥರಾದ ಸೌಮೇಂದು ಮುಖರ್ಜಿ ಅವರು ತನಿಖೆಯ ಎಲ್ಲ ಅಂಶಗಳನ್ನೂ ಪರಿಶೀಲಿಸಿ ವರದಿ ಅನುಮೋದಿಸಿದ್ದಾರೆ. ಈ ಹಂತದಲ್ಲಿ ತಡೆಹಿಡಿಯಲು ಸಾಧ್ಯವಿಲ್ಲ. ಹಾಗಾಗಿ ನಿರ್ರ್ಬಂಸಲು ಯಾವುದೇ ಕಾರಣ ಇಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ಅಂತಿಮ ವರದಿ ಸಲ್ಲಿಸಲು ಅನುಮತಿ ನೀಡಿ, ತಕರಾರಿದ್ದರೆ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಎಂದು ಸೂಚಿಸಿದೆ.
ಇದಕ್ಕೂ ಮುನ್ನ ಯುವತಿ ಪರ ಹಿರಿಯ ವಕೀಲರು ವಾದ ಮಂಡಿಸಿ ಮಾಜಿ ಸಚಿವರಿಗೆ ಅನುಕೂಲ ಕಲ್ಪಿಸಲು ಎಸ್‍ಐಟಿ ರಚನೆ ಮಾಡಲಾಗಿದೆ. ಸರ್ಕಾರದ ಬದಲು ಪೊಲೀಸ್ ಆಯುಕ್ತರು ಎಸ್‍ಐಟಿ ರಚಿಸಿದ್ದಾರೆ. ಪೊಲೀಸ್ ಆಯುಕ್ತರಿಗೆ ಎಸ್‍ಐಟಿ ರಚಿಸುವ ಅಧಿಕಾರವಿಲ್ಲ. ಹೀಗಾಗಿ ಎಸ್‍ಐಟಿಗೆ ಅಂತಿಮ ತನಿಖಾ ವರದಿ ಸಲ್ಲಿಸಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಎಸ್‍ಐಟಿ ಪರ ಹಿರಿಯ ಅಶೋಕ್ ಹಾರನಹಳ್ಳಿ ಅವರು ವಾದ ಮಂಡಿಸಿ ಅಂತಿಮ ತನಿಖಾ ವರದಿ ಸಲ್ಲಿಸದಂತೆ ಹೈಕೋರ್ಟ್ ಸೂಚಿಸಿದೆ. ಈ ಆದೇಶ ತೆರವಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಅಂತಿಮ ತನಿಖಾ ವರದಿಗೆ ಅನುಮತಿಸಿದೆ.
