ಸೋನಿಯಾ ಗಾಂಧಿ ಒಪ್ಪಿದರೆ ಮೈತ್ರಿಗೆ ಸಿದ್ದ : ದೇವೇಗೌಡ

Spread the love

ಹಾಸನ,ಆ.24- ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಒಪ್ಪಿದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋನಿಯಾಗಾಂಧಿ ಅವರು ಹೊಸ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಹೋಗೋಣ ಎಂದಿದ್ದಾರೆ. ಮುಂದೆ ಯಾವ ತೀರ್ಮಾನ ಮಾಡುತ್ತಾರೆ ಕಾದು ನೋಡೋಣ ಎಂದರು.

ಈ ದೇವೇಗೌಡರನ್ನು ಮುಗಿಸಲು ಎಲ್ಲರೂ ಪ್ರಯತ್ನ ಮಾಡಿದ್ದಾರೆ. ಆದರೆ, ಮುಗಿಸಲು ಬಂದವರೆಲ್ಲ ಮುಗಿದು ಹೋಗಿದ್ದಾರೆ. ನಾನು ದೇವರನ್ನು ನಂಬಿದ್ದು, ಜನರಿಗಾಗಿ ಹೋರಾಟ ಮಾಡುತ್ತಿದ್ದೇನೆ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿಗೆ ಏಕೆ ಚಿಂತಿಸಬೇಕು. ಜನರಿಗೆ ಎಲ್ಲವೂ ಗೊತ್ತಿದೆ. ಸಿದ್ದರಾಮಯ್ಯ ಅವರ ಹೇಳಿಕೆಗೆ ಉತ್ತರಿಸುವುದಿಲ್ಲ.

ಪಕ್ಷ ಕಟ್ಟುವಾಗ ಏನೇನು ಆಗಿದೆ ಎಂಬುದು ಗೊತ್ತು. ಹಲವು ರೀತಿಯ ಸಮಸ್ಯೆಗಳಿವೆ. ಪಕ್ಷಕ್ಕೆ ಪೆಟ್ಟು ಬಿದ್ದಿದೆ. ಮುಂದೆ ಜನರೇ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಾದೇಶಿಕ ಪಕ್ಷ ಉಳಿಸಲು ತಳಮಟ್ಟದಿಂದ ಹೋರಾಟ ಅನಿವಾರ್ಯವಾಗಿದ್ದು, ಪಕ್ಷ ಸಂಘಟನೆಗೆ ಒತ್ತು ಕೊಡುವುದಾಗಿ ಹೇಳಿದರು. ಜಾತ್ಯಾತೀತ ಪಕ್ಷಗಳ ಸಭೆ ನಡೆದರೆ ದೆಹಲಿಗೆ ಹೋಗುವೆ. ಆದರೆ, ರಾಷ್ಟ್ರೀಯ ರಾಜಕಾರಣಕ್ಕೆ ಈಗ ಸಮಯವಿಲ್ಲ. ರಾಜ್ಯದಲ್ಲೇ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಗೌಡರು ತಿಳಿಸಿದರು.

# ಕೇಂದ್ರದ ನೆರವು ತರಲು ಬಿಎಸ್‍ವೈಗೆ ಶಕ್ತಿ ಇದೆ:
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ನೆರೆ, ಬರ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರದಿಂದ ಸಾಕಷ್ಟು ಹಣ ಬಿಡುಗಡೆ ಮಾಡಿಸಲು ಸಕ್ತರಾಗಿದ್ದಾರೆ ರಾಜ್ಯ ಸರ್ಕಾರ ಮುಂದಿನ ಮೂರು ವರ್ಷ 8 ತಿಂಗಳು ಆಳಿತ ನಡೆಸಲು ನಮ್ಮದೇನು ತಕರಾರು ಇಲ್ಲ. ಒಳ್ಳೆಯ ಕೆಲಸ ಮಾಡಿದರೆ ಸಂತೋಷ ಪಡುತ್ತೇವೆ. ವಿರೋಧ ಪಕ್ಷದ ಸ್ಥಾನದಲ್ಲಿದ್ದು, ಜನರ ಸಮಸ್ಯೆಗಳಿಗೆ ಹೋರಾಟ ಮಾಡುತ್ತೇವೆ ಎಂದರು.

ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಬರ ಪರಿಹಾರಕ್ಕಾಗಿ ರಾಜ್ಯದ ರೈತರನ್ನು ದೆಹಲಿಗೆ ಕರೆದೊಯ್ದಿದ್ದೆ. ಲೋಕಸಭೆ, ವಿಧಾನಸಭೆಯಲ್ಲಿ ತಾವು ಇಲ್ಲದಿದ್ದರೂ ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಮುಖ್ಯಮಂತ್ರಿ, ಪ್ರಧಾನಿಯಾಗಿ ಏನೇನು ಕೆಲಸ ಮಾಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ನ್ನು ಉಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ದೈವಾನುಗ್ರಹಕ್ಕಾಗಿ ಪ್ರತಿ ವರ್ಷವೂ ದೇವರ ಬಳಿ ಹೋಗುತ್ತೇನೆ ಎಂದು ಹೇಳಿದರು.

ಕಳೆದ 15 ದಿನಗಳಿಂದ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಪ್ರತಿ ಜಿಲ್ಲೆಯ ಪದಾಧಿಕಾರಿಗಳನ್ನು ಗುರುತಿಸುವ ಕೆಲಸವನ್ನು ಹಾಗೂ ಪಕ್ಷ ಕಟ್ಟುವ ಕಾರ್ಯವನ್ನು ಮಾಡಿದ್ದೇನೆ ಎಂದರು.

ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ಜೆಡಿಎಸ್ ಬಿಟ್ಟು ಹೋದ ಮೇಲೆ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಮಧ್ಯಂತರ ಚುನಾವಣೆ ನಡೆಯಬಹುದು ಅಥವಾ ನಡೆಯದೇ ಇರಬಹುದು. ಪಕ್ಷದ ಕಾರ್ಯಕರ್ತರು ತಮ್ಮ ಅಸಮಾಧಾನವನ್ನು ತೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

Facebook Comments