” ಸರ್ಕಾರದ ಸಚಿವರುಗಳೇ ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದಾರೆ” : ದೇವೇಗೌಡರು
ಕೇರಳ : ಮಂಗಳೂರಿನಲ್ಲಿ ನಡೆದಿರುವ ಘಟನೆ ದುರದೃಷ್ಟಕರ. ಅಮಾಯಕ ಯುವಕರಿಬ್ವರು ಪೊಲೀಸರ ಗೋಲಿಬಾರ್ ಗೆ ಬಲಿಯಾಗಿದ್ದಾರೆ. ಸರ್ಕಾರದ ಸಚಿವರುಗಳೇ ಗಲಭೆಗೆ ಕುಮ್ಮಕ್ಕು ಕೊಡುವಂತಹ ಹೇಳಿಕೆ ನೀಡಿ ಜನರನ್ನು ಪ್ರಚೋದಿಸುತ್ತಿರುವುದು ಖಂಡನಾರ್ಹ ಎಂದು ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾನು ಕೇರಳದಲ್ಲಿ ಚಿಕಿತ್ಸೆಯಲ್ಲಿದ್ದೇನೆ. ಪಕ್ಷದ ರಾಷ್ಟ್ರೀಯ ನಾಯಕರಾದ ಬಿಎಂ ಫಾರೂಕ್ ಅವರು ಮಂಗಳೂರಿನಲ್ಲಿದ್ದು ಜನರಿಗೆ ನೆರವಾಗುತ್ತಿದ್ದಾರೆ. ಅಲ್ಲಿಂದ ಎಲ್ಲ ಮಾಹಿತಿಗಳನ್ನೂ ನನಗೆ ತಿಳಿಸಿದ್ದಾರೆ. ಜನರು ಶಾಂತಿ ಕಾಪಾಡಬೇಕು. ಸರ್ಕಾರ ಕೂಡಾ ಶಾಂತಿ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು.
ಎನ್ ಆರ್ ಸಿ ಮತ್ತು ಸಿಎಎ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಇರುವುದನ್ನು ನಿವಾರಿಸುವುದು ಸರ್ಕಾರದ ಕರ್ತವ್ಯ. ಅದನ್ನು ಅಧಿಕಾರಿಗಳ ಮೂಲಕ ಮಾಡುವುದು ಬಿಟ್ಟು ಪೊಲೀಸ್ ಬಲ ಪ್ರಯೋಗಿಸಿ ಜನರನ್ನು ಹೆದರಿಸಿ ಸೆಕ್ಷನ್ ವಿಧಿಸಿ ನಾಗರಿಕರ ಪ್ರತಿಭಟನೆಯ ಹಕ್ಕು ಕಸಿದುಕೊಳ್ಳಬೇಡಿ.ಸರಕಾರ ಇರುವುದು ಪ್ರಜೆಗಳ ರಕ್ಷಣೆಗೆ. ಕಾನೂನು ಶಿಸ್ತು ಪರಿಸ್ಥಿತಿ ಕಾಪಾಡಲು ಆದ್ಯತೆ ನೀಡಿ. ಶಾಂತಿ ಕದಡುವವರನ್ನು ಗುರುತಿಸಿ ಬಂಧಿಸಿ. ಆದರೆ ಅಮಾಯಕರನ್ನು ಕೊಲ್ಲಬೇಡಿ.
ಸಾರ್ವಜನಿಕರು ಪ್ರಚೋದನೆಗೆ ಒಳಗಾಗದೆ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡುತ್ತೇನೆ. ಮೃತರಾದವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೃತರಾದವರ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸಲು ಸರ್ಕಾರ ಸೂಕ್ತ ಬಂದೋಬಸ್ತ್ ಒದಗಿಸಬೇಕುಎಂದಿದ್ದಾರೆ .
# ಪೇಜಾವರ ಶ್ರೀಗಳು ಶೀಘ್ರ ಗುಣಮುಖರಾಗಲಿ :
ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಶೀಘ್ರ ಗುಣಮುಖರಾಗಲಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಹಾರೈಸಿದ್ದಾರೆ.ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಶ್ರೀಗಳು ಶೀಘ್ರವಾಗಿ ಗುಣಮುಖರಾಗಲಿ. ಅವರ ಆರೋಗ್ಯ ಸುಧಾರಿಸಿ ಶ್ರೀಕೃಷ್ಣನ ಸೇವೆಯನ್ನು ಇನ್ನಷ್ಟು ದಿನ ಮಾಡುವಂತಾಗಲಿ ಎಂದು ಟ್ವಿಟರ್ ಮೂಲಕ ಪ್ರಾರ್ಥಿಸಿದ್ದಾರೆ.