ವಿಧಾನಸಭೆ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಇಲ್ಲ : ಹೆಚ್‌ಡಿಕೆ

Social Share

ಬೆಂಗಳೂರು, ಜ.27- ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪಕ್ಷಗಳ ಮನೆ ಬಾಗಿಲಿಗೆ ಈತನಕ ಹೋಗಿಲ್ಲ, ಮುಂದೆಯೂ ಹೋಗುವುದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಪಕ್ಷದ ಮೊದಲ ಕೋರ್ ಕಮಿಟಿ ಸಭೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಂತ್ರ ವಿಧಾನಸಭೆ ನಿರ್ಮಾಣವಾದಾಗ ರಾಷ್ಟ್ರೀಯ ಪಕ್ಷಗಳು ನಮ್ಮ ಮನೆ ಬಾಗಿಲಿಗೆ ಬಂದಿವೆ. 2023ರ ವಿಧಾನಸಭೆ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂಬ ಗುರಿ ತಲುಪಲು ಶ್ರಮಿಸುತ್ತೇವೆ ಎಂದರು.
2023ಕ್ಕೆ ಕಾರ್ಯಕರ್ತರ ಶ್ರಮ ಸಾಬೀತು ಮಾಡುತ್ತೇವೆ. ಆಗ ಜೆಡಿಎಸ್ ಗೆ ಶಕ್ತಿ ಏನು, ಜೆಡಿಎಸ್ ಬಿಟ್ಟು ಏನು ಮಾಡಲು ಆಗಲ್ಲ ಅನ್ನೋದು ಹೇಳಿದ್ದಾ ಎಂದು ಸ್ಪಷ್ಟೀಕರಣ ನೀಡಿದರು. ಕೊರೊನಾ ಇರುವುದರಿಂದ ಪಕ್ಷ ಸಂಘಟನೆಗೆ ವೇಗ ನೀಡಿಲ್ಲ. ನಮ್ಮ ಸಂಘಟನೆಯಿಂದ ಜನರಿಗೆ ತೊಂದರೆ ಆಗಬಾರದು ಎಂದು ಸಂಘಟನೆಗೆ ಹೆಚ್ಚು ಒತ್ತು ಕೊಟ್ಟಿಲ್ಲ. ಆದರೆ ಆಂತರಿಕವಾಗಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ.
ಜೆಡಿಎಸ್ ಅಂತಂತ್ರ ಆದಾಗ ಸ್ವತಂತ್ರರಾಗ್ತಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ನಾವೆಂದೂ ಅತಂತ್ರರಾಗಿಲ್ಲ. ಅವರಿಗೆ ಅಂತಂತ್ರವಾದಾಗ ಜೆಡಿಎಸ್ ಬಾಗಿಲು ಬಡಿದಿದ್ದಾರೆ. ಬಿಜೆಪಿ ನಾಯಕರಲ್ಲೇ ಕಡಿವಾಣ ಹಾಕುವ ಸ್ಥಿತಿ ಇಲ್ಲ. ಗೊಂದಲ ಸೃಷ್ಟಿ ಮಾಡುವುದಕ್ಕೆ ನಾವು ಅವಕಾಶ ಕೊಟ್ಟಿಲ್ಲ. ಅವರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಿಕ್ಕೆ ಆಗಿಲ್ಲ ಬಿಜೆಪಿಗೆ ಎಂದು ಟೀಕಿಸಿದರು. ಅವರ ಪಕ್ಷದ ಉಳಿವಿಗಾಗಿ ಏನು ಮಾಡುತ್ತಿದ್ದಾರೋ ಹಾಗೇ ನಾವು ಮಾಡುತ್ತಿದ್ದೇವೆ ಎಂದರು.
ನಮಗೆ ಸವಾಲಿದೆ, ಗುರಿ ಇದೆ. ಪ್ರತ್ಯುತ್ತರ ಕೊಡಲು ನಾವು ಸಿದ್ದರಿದ್ದೇವೆ ಎಂದ ಅವರು, ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರು ಹಿರಿಯರು ಇದ್ದಾರೆ. ನಮ್ಮ ಪಕ್ಷ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಏಳು ಬೀಳುವಿನಲ್ಲಿಯೂ ಜೊತೆಯಾದವರು. ಮೇಲ್ಮನೆ ವಿರೋಧ ಪಕ್ಷದ ನಾಯಕರ ಸ್ಥಾನಕ್ಕೆ ಅವರ ಹೆಸರು ಕೇಳಿ ಬಂದಿತ್ತು. ಆ ಸ್ಥಾನ ಸಿಕ್ಕಿದರೆ ಉಪಯೋಗ ಮಾಡಿಕೊಳ್ಳಿ.ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳಲ್ಲ ಎಂದಿದ್ದ.
ಅವರಿಗೆ ಇನ್ನೂ ದೇವೇಗೌಡರು ಹಾಗೂ ನಮ್ಮ ಪಕ್ಷದ ಬಗ್ಗೆ ವ್ಯಾಮೋಹ ಇದೆ. ಅವರು ಪಕ್ಷಕ್ಕೆ ಬಂದರೆ ಸ್ವಾಗತ. ನಾವು ಕದ್ದು ಮುಚ್ಚಿ ಯಾವುದನ್ನೂ ಮಾಡಿಲ್ಲ. ಇಂದೂ ಕೂಡ ನಾನು ಕರೆ ಮಾಡಿ ಮಾತಾಡಿದ್ದೇನೆ. ಅವರು ನಮ್ಮ ಪಕ್ಷಕ್ಕೆ ಬಂದರೆ ಸೂಕ್ತ ಸ್ಥಾನಮಾನ ಕೊಡುತ್ತೇವೆ ಎಂದು ಹೇಳಿದರು.
ನೀರಾವರಿ, ನದಿ ವಿಚಾರವಾಗಿ ರಾಜ್ಯದ ಜನರಿಗೆ ಎರಡು ರಾಷ್ಟ್ರೀಯ ಪಕ್ಷಗಳು ದ್ರೋಹ ಮಾಡಿರುವುದನ್ನು ವಿಧಾನಸಭೆ ಅವೇಶನದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದರು. ಈ ಪಕ್ಷ ಮುಗಿದೇ ಹೋಯ್ತು ಅಂತಾರೆ. ಕಾರ್ಯಕರ್ತರ ಶ್ರಮ ನಮ್ಮ ಪಕ್ಷಕ್ಕೆ ಇದೆ.ನಾಡಿನ ನೀರಾವರಿ ಯೋಜನೆ ಜಾರಿ ಆಗಬೇಕು ಎಂದ ಅವರು, ಜನತಾ ಪರಿವಾರದ ನಾಯಕರು ಸೆಟ್ಟಲ್ ಆಗಿದ್ದಾರೆ.
ಅವರನ್ನು ವಾಪಸ್ ತರುವ ನಿರೀಕ್ಷೆ ಇಟ್ಟುಕೊಂಡಿಲ್ಲ. ಯುವ ನಾಯಕತ್ವ ತರುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ. ಹೊಸ ನಾಯಕರಿಗೆ ಜವಾಬ್ದಾರಿ ನೀಡಲಾಗುತ್ತಿದೆ. ಹೊಸ ನಾಯಕರ ಸೃಷ್ಟಿ ಮೊದಲಿನಿಂದಲೂ ನಮಗೆ ಗುರು ಮನೆ ಇದ್ದಂತೆ. ಹಲವಾರು ಜನ ನಾಯಕರಾಗಿ ಬೆಳೆದು ಹೋಗಿದ್ದಾರೆ ಎಂದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಶೆಂಪೂರ್, ಶಾಸಕರಾದ ಮಂಜುನಾಥ್, ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Articles You Might Like

Share This Article