ರಾಮನಗರ ಹೆಸರು ಬದಲಾಯಿಸಿದರೆ ಹೋರಾಟ ಅನಿವಾರ್ಯ : ಕುಮಾರಸ್ವಾಮಿ

ಬೆಂಗಳೂರು, ಜ.5- ರಾಮನಗರ ಜಿಲ್ಲೆಯ ಹೆಸರು ಬದಲಿಸುವ ನಿರ್ಧಾರದಿಂದ ಸರ್ಕಾರ ಕೂಡಲೇ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ರಾಮನಗರದ ಹೆಸರನ್ನು ಬದಲಿಸಿದರೆ ಬಿಜೆಪಿಯೇ ಪ್ರತಿಪಾದಿಸುವ ಸಿದ್ಧಾಂತಗಳಿಗೆ ಅಪಚಾರ ಮಾಡಿದಂತೆ. ಅದು ರಾಮನ ಹೆಸರಿಗೆ ಆಗುವ ಅಪಚಾರ ಎಂದು ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ರಾಮನಗರ ಜಿಲ್ಲೆಯ ಸುತ್ತ ಸಪ್ತ ಬೆಟ್ಟಗಳಿವೆ. ಏಳು ಬೆಟ್ಟಗಳ ನಡುವೆ ಇರುವುದೇ ಶ್ರೀರಾಮದೇವರ ಬೆಟ್ಟ. ಅದಕ್ಕಾಗಿಯೇ ರಾಮನಗರ ತಾಲ್ಲೂಕು ಆಗಿದೆ. ರಾಮನ ಹೆಸರನ್ನೇ ರಾಮನಗರ ಜಿಲ್ಲೆಗೂ ಇಡಲಾಗಿದೆ. ಇದನ್ನು ಮೀರಿ ಹೆಸರು ಬದಲಿಸಿದರೆ ರಾಮನ ಹೆಸರಿಗೆ ಮಾಡುವ ಅಪಮಾನವಾಗಲಿದೆ ಎಂದಿದ್ದಾರೆ.

ಈ ಜಿಲ್ಲೆ ಗಂಗರು ಆಳಿದ ನಾಡು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಪದ್ಮಭೂಷಣ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಜನ್ಮ ತಾಳಿದ ಭೂಮಿ. ರಾಜ್ಯಕ್ಕೆ ನಾಲ್ವರು ಮುಖ್ಯಮಂತ್ರಿ ಗಳನ್ನು ಕೊಟ್ಟ ಶಕ್ತಿ ಸ್ಥಳವಿದು. ರಾಮನಗರದ ಬದಲಾಗಿ ನವ ಬೆಂಗಳೂರು ಎಂದು ಮರುನಾಮಕರಣ ಮಾಡಿದರೆ ಜಿಲ್ಲೆಯ ಐತಿಹ್ಯ ಅಳಿಯಲಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ರಾಮನಗರ ತಾಲ್ಲೂಕು ಈ ಹಿಂದೆ ಕ್ಲೋಸ್‍ಪೇಟೆ ಎಂದು ಕರೆಯಲ್ಪಡುತ್ತಿತ್ತು. ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರು ಕ್ಲೋಸ್‍ಪೇಟೆಯನ್ನು ರಾಮನಗರ ತಾಲ್ಲೂಕನ್ನಾಗಿ ಮಾಡಿದರು. ಅದೇ ಹೆಸರನ್ನು ಜಿಲ್ಲೆಗೂ ಇಡಲಾಗಿದೆ. ಹೆಸರು ಬದಲಾವಣೆ ಮಾಡಿದರೆ ಹನುಮಂತಯ್ಯ ಅವರಿಗೆ ಅಪಮಾನವಾಗಲಿದೆ ಎಂದಿದ್ದಾರೆ.

ಬೆಂಗಳೂರಿನಿಂದ 100 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಜಮೀನು ಹೊಂದಬೇಕೆಂಬುದು ಇಂದಿನ ಹಣವಂತರ ಬಯಕೆ. ಇದರಲ್ಲಿ ಉತ್ತರ ಭಾರತೀಯರೇ ಹೆಚ್ಚು. ಹಾಗಾಗಿ ಸಾಕಷ್ಟು ಭೂಮಿಯು ಫಾರಂಹೌಸ್‍ಗಳ ಪಾಲಾಗಿದೆ. ಕೃಷಿ ಕಡಿಮೆಯಾಗಿದೆ. ರಾಮನಗರದ ಹೆಸರು ಬದಲಿಸುತ್ತಿರುವುದು ಇಂತಹವರಿಗಾಗಿಯೇ ಹೊರತು ರೈತರಿಗಲ್ಲ. ಅಷ್ಟಕ್ಕೂ ಹೆಸರಲ್ಲೇನಿದೆ. ಬೆಂಗಳೂರು ಎಂದ ಮಾತ್ರಕ್ಕೆ ಅಭಿವೃದ್ಧಿ ಸಾಧ್ಯವೆ? ಹಾಗಿದ್ದರೆ ರಾಜ್ಯದ ಇತರೆ ಜಿಲ್ಲೆಗಳಿಗೂ ಇದೇ ಹೆಸರಿಡಬಹುದಲ್ಲವೆ? ಅದು ನಿಮಗೆ ಸಾಧ್ಯವೆ? ರಾಮನಗರ ಹೆಸರು ಬದಲಿಸುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಿವಮೊಗ್ಗಕ್ಕೆ, ದಕ್ಷಿಣ ಕನ್ನಡಕ್ಕೆ ಬೆಂಗಳೂರು ಎಂದು ಹೆಸರಿಡಬಲ್ಲರೆ ಎಂದು ಪ್ರಶ್ನಿಸಿದ್ದಾರೆ.

ಅಭಿವೃದ್ಧಿ ಹೆಸರಿನಲ್ಲಿ ಸಮಸ್ಯೆಗಳನ್ನು ರಾಮನಗರಕ್ಕೆ ವಿಸ್ತರಿಸುವುದು ಬೇಡ. ಕೋಟಿ ಕುಳಗಳು ಬಾರದಿದ್ದರೂ ಪರವಾಗಿಲ್ಲ. ಭೂಮಿ ಲೂಟಿಯಾಗದೆ ಇರಲಿ, ಕೆರೆಗಳು ಮುಚ್ಚದೆ ಇರಲಿ. ಸಮೃದ್ಧ ಜನಪದ ಸಂಸ್ಕøತಿ ಅಳಿಯದಿರಲಿ. ಜನರ ಮುಗ್ಧತೆ ಬಲಿಯಾಗದಿರಲಿ ಎಂಬುದೇ ತಮ್ಮ ಆಶಯ ಎಂದಿದ್ದಾರೆ.

ನಾಡಪ್ರಭು ಕೆಂಪೇಗೌಡರು ಬೆಂಗಳೂರು ಕಟ್ಟಿದಾಗ ಊರು ಮುಂದೆ ಹೋಗಬಾರದು ಎಂದು ನಾಲ್ಕು ದಿಕ್ಕುಗಳಿಗೂ ಗಡಿ-ಗೋಪುರಗಳನ್ನು ನಿರ್ಮಿಸಿದ್ದರು. ಅದನ್ನು ಮೀರಿ ಬೆಳೆದಿದ್ದರಿಂದ ಸಮಸ್ಯೆಗಳು ಬೆಂಗಳೂರಿಗೆ ಆವರಿಸಿವೆ. ರಾಮನಗರವನ್ನು ಅಭಿವೃದ್ಧಿ ಪಡಿಸುವ ಇಚ್ಛೆ ಮುಖ್ಯಮಂತ್ರಿಗಿದ್ದರೆ ನಾನು ಮುಖ್ಯಮಂತ್ರಿಯಾಗಿದ್ದಾಗ ಆಯವ್ಯಯದಲ್ಲಿ ಮೀಸಲಿಟ್ಟ ಹಣವನ್ನು ಪ್ರಾಮಾಣಿಕವಾಗಿ ಬಿಡುಗಡೆ ಮಾಡಲಿ, ಅದಕ್ಕೆ ಸಹಕಾರ ನೀಡಲಾಗುವುದು. ಆದರೆ, ಹೆಸರು ಬದಲಿಸಿ ಸಂಸ್ಕøತಿ, ಆಸ್ಮಿತೆಗೆ ಬೆಂಕಿ ಇಡಬೇಡಿ ಎಂದು ಹೇಳಿದ್ದಾರೆ.

ಬೆಂಗಳೂರು ಪಕ್ಕದಲ್ಲೇ ಇರುವ ಸಂಪದ್ಭರಿತ ಭೂಮಿಯನ್ನು ಕಿತ್ತುಕೊಂಡು ಬಂಡವಾಳಶಾಹಿಗಳಿಗೆ ಹಂಚಲು ಹೆಸರೊಂದು ಅಡ್ಡಿಯಾಗಿದೆ. ಅಲ್ಲದೆ ನನ್ನ ಮೇಲಿನ ರಾಜಕೀಯ ವೈಷಮ್ಯವೂ ಇದಕ್ಕೆ ಕಾರಣವಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.