ಕೇಂದ್ರ ತಾರತಮ್ಯ ಮಾಡದೆ ಅನುದಾನ ಬಿಡುಗಡೆ ಮಾಡಲಿ : ಹೆಚ್ಡಿಕೆ

Spread the love

ಬೆಂಗಳೂರು,ಜು.29- ಕೇಂದ್ರ ಸರ್ಕಾರ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸದೆ ಜಿಎಸ್‍ಟಿ ಹಣ ಸೇರಿದಂತೆ ಹಲವು ಇಲಾಖೆಗಳ ಮೂಲಕ ನೀಡಬೇಕಿರುವ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎರಡು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ಸರಿಯಾದ ಸಹಕಾರ ಕೊಡಲಿಲ್ಲ. ರಾಜ್ಯಕ್ಕೆ ನೀಡಬೇಕಾದ ನೆರವು ಕೂಡ ಸರಿಯಾಗಿ ನೀಡಲಿಲ್ಲ. ಈಗಿನ ಮುಖ್ಯಮಂತ್ರಿಗೂ ಅದೇ ರೀತಿ ಮಾಡಬಾರದು ಎಂದರು.

ಹಲವು ಇಲಾಖೆಗಳ ಮೂಲಕ ರಾಜ್ಯಕ್ಕೆ ಬಿಡುಗಡೆ ಮಾಡಬೇಕಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿರುವ ಬೊಮ್ಮಾಯಿ ಅವರಿಗೆ ನೀರಾವರಿ ಯೋಜನೆಗಳ ಆದ್ಯತೆ ಏನೆಂಬುದು ಅರಿವಿದೆ. ಅವರ ಇತಿಮಿತಿ ಏನು ಎಂಬುದು ನಮಗೂ ಗೊತ್ತಿದೆ. ಬಿಜೆಪಿ ನಾಯಕರೆಲ್ಲರೂ ಮುಖ್ಯಮಂತ್ರಿಗೆ ಸಹಕಾರ ನೀಡಬೇಕು ಎಂದರು.

ನಿನ್ನೆ ಸಂಧ್ಯಾ ಸುರಕ್ಷಾ ಯೋಜನೆಯ ಮಾಶಾಸನವನ್ನು 1000ದಿಂದ 1200ಕ್ಕೆ, ವಿಧವಾ ವೇತನ, ವಿಕಲಚೇತನವನ್ನು ಹೆಚ್ಚಿಸಿದ್ದಾರೆ. ಆದರೆ ಆರೇಳು ತಿಂಗಳಿನಿಂದ ಮಾಶಾಸನವೇ ಬಿಡುಗಡೆಯಾಗಿಲ್ಲ. ಇದು ಘೋಷಣೆಯಾಗಿ ಉಳಿಯಬಾರದು ಎಂದು ಹೇಳಿದರು. ತಾವು 2ನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಸಂಧ್ಯಾ ಸುರಕ್ಷಾ ಯೋಜನೆಯನ್ನು 2000ಕ್ಕೆ ಹೆಚ್ಚಳ ಮಾಡಿ ಬಜೆಟ್ ಅನುಮೋದನೆ ಪಡೆಯಲಾಗಿತ್ತು. ಆದರೆ ಅದು ಸಾಕಾರಗೊಳ್ಳಲಿಲ್ಲ ಎಂದರು.

ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹೆಚ್ಚಿಸುವ ಘೋಷಣೆ ಮಾಡಿದ್ದಾರೆ. ಆದರೆ ಕಳೆದೆರಡು ವರ್ಷಗಳಿಂದ ಚಾಲ್ತಿಯಲ್ಲಿರುವ ವಿದ್ಯಾರ್ಥಿ ವೇತನವನ್ನೇ ಸರಿಯಾಗಿ ನೀಡಿಲ್ಲ ಎಂದು ಆರೋಪಿಸಿದರು. ಕೋವಿಡ್‍ನಿಂದ ಮೃತಪಟ್ಟಿರುವ ಬಿಪಿಎಲ್‍ದಾರರ ಕುಟುಂಬದವರಿಗೆ ಒಂದು ಲಕ್ಷ ರೂ. ಪರಿಹಾರ ಕೊಡುವುದಾಗಿ ಹಿಂದಿನ ಮುಖ್ಯಮಂತ್ರಿ ಘೋಷಣೆ ಮಾಡಿದ್ದರು. ಅದು ಇನ್ನೂ ಆದೇಶವಾಗಿ ಹೊರಬಿದ್ದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. 2019ರಲ್ಲಿ ಸಂಭವಿಸಿದ ನೆರೆಹಾವಳಿ, ಬೆಳೆ ಪರಿಹಾರ ನೀಡಿಲ್ಲ. ಮನೆ ನಿರ್ಮಾಣಕ್ಕೆ ಹಣ ಕೊಟ್ಟಿಲ್ಲ. ಹೀಗಾಗಿ ಹೆಚ್ಚಿನ ಹೊರೆ ಸರ್ಕಾರದ ಮೇಲಿದೆ. ಬಿಜೆಪಿ ಜನರಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಬಸವರಾಜ್ ಬೊಮ್ಮಾಯಿ ಅವರು ಮೂಲತಃ ಜನತಾಪರಿವಾರದವರು. ಈಗ ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ಹಳೆಯ ಸ್ನೇಹಿತರು, ಹಿತೈಷಿಗಳು. ಅವರು ಒಳ್ಳೆಯ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.

Facebook Comments