ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗುವುದು ದೈವಾನುಗ್ರಹ : ಇಬ್ರಾಹಿಂ

Social Share

ಹಾಸನ, ಸೆ.13- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದ್ದು, ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದು ದೈವಾನುಗ್ರಹ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಭವಿಷ್ಯ ನುಡಿದರು.

ನಗರದಲ್ಲಿ ಮಾಜಿ ಶಾಸಕ ದಿ.ಎಚ್.ಎಸ್.ಪ್ರಕಾಶ್ ಅವರ ಸವಿನೆನಪು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, 1994ರ ಜನತಾ ದಳ ಪಕ್ಷ ನಿರ್ಮಾಣವಾಗುವ ಸಂದರ್ಭದಲ್ಲಿದ್ದ ಪರಿಸ್ಥಿತಿ ಇದೀಗ ಉದ್ಭವವಾಗುತ್ತಿದೆ. 2023ಕ್ಕೆ ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು.

ರಾಜ್ಯದಲ್ಲಿ ಜೆಡಿಎಸ್ ಪಕ್ಷ ನಂಬರ್ ಒನ್ ಸ್ಥಾನದಲ್ಲಿದ್ದು, ಎರಡನೇ ಸ್ಥಾನಕ್ಕೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿ ನಡೆಸುತ್ತಿವೆ. ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂಬ ಮುನ್ಸೂಚನೆ ಅರಿತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ತಳಮಳ ಸೃಷ್ಟಿಯಾಗಿದೆ ಎಂದರು.

ಜೆಡಿಎಸ್ ಪಕ್ಷಕ್ಕೆ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಕೊರತೆ ಇಲ್ಲ; ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿ ಅವರ ನಡುವೆಯೇ ಪೈಪೋಟಿ ಆರಂಭವಾಗಿದೆ. ಅವರನ್ನು ಸಮಾಧಾನಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಶಕ್ತಿ ಇಲ್ಲ, ಆದ್ದರಿಂದ ಭಾರತ್ ಜೋಡೊ ಯಾತ್ರೆ ಮಾಡುತ್ತಿದ್ದಾರೆ. ಮೊದಲು ಅವರು ತಮ್ಮ ಪಕ್ಷದಲ್ಲಿರುವಂತಹ ಭಿನ್ನಾಭಿಪ್ರಾಯದ ನಾಯಕರನ್ನು ಒಂದೂ ಗೂಡಿಸುವ ಮೂಲಕ ಪಕ್ಷವನ್ನು ಗಟ್ಟಿಗೊಳಿಸಬೇಕಿದೆ ಎಂದು ಟೀಕಿಸಿದರು.

ಜನರ ಸಮಸ್ಯೆ ಆಲಿಸಬೇಕಾದ ಬಿಜೆಪಿ ಜನಸ್ಪಂದನ ಕಾರ್ಯಕ್ರಮದ ವೇದಿಕೆಯಲ್ಲಿ ಬಿಜೆಪಿ ಶಾಸಕರು ಡ್ಯಾನ್ಸ್ ಮಾಡುವ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ದೇವೇಗೌಡರು ನಾಯಕರನ್ನು ತಯಾರು ಮಾಡುವಂತಹ ಯಂತ್ರವಾಗಿದ್ದಾರೆ. ಹಾಸನ ಜಿಲ್ಲೇ ರಾಜಕೀಯ ಶಕ್ತಿ ಕೇಂದ್ರವಾಗಿದ್ದು, ಇಲ್ಲಿ ನಾನಾ ಪಕ್ಷಗಳ ಪರಿಚಯ ಆಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಯಾರು ಮಾಡಿದ್ದು ಯಾರು, ಜೆ.ಎಚ್.ಪಟೇಲ್ ಅವರನ್ನು ರಾಜಕೀಯಕ್ಕೆ ತಂದವರು ಯಾರು ಎಂದು ಪ್ರಶ್ನಿಸಿದರು.

Articles You Might Like

Share This Article