ಬೆಂಗಳೂರು, ಜ.29- ಕಾಂಗ್ರೆಸ್ ತೊರೆಯುವುದಾಗಿ ಘೋಷಣೆ ಮಾಡಿರುವ ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಇಬ್ರಾಹಿಂ ಅವರ ನಿವಾಸಕ್ಕೆ ಭೇಟಿ ನೀಡಿ ಕೆಲಕಾಲ ಸಮಾಲೋಚನೆ ನಡೆಸಿದ್ದಾರೆ. ಆದರೆ, ಇಬ್ರಾಹಿಂ ಅವರು ಯಾವಾಗ ಜೆಡಿಎಸ್ ಸೇರಲಿದ್ದಾರೆ ಎಂಬುದನ್ನು ಬಹಿರಂಗಗೊಳಿಸಿಲ್ಲ. ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಬ್ರಾಹಿಂ ಕಾಂಗ್ರೆಸ್‍ನಲ್ಲೇ ಇರುತ್ತಾರೆ ಎಂದಿದ್ದಾರೆ.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಇಬ್ರಾಹಿಂ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಒತ್ತಡದಿಂದ ತೀರ್ಮಾನ ತೆಗೆದುಕೊಳ್ಳಲು ಆಗಲ್ಲ. ಹಿಂದಿನ ಕೆಲವು ಘಟನೆಗಳನ್ನು ಇಬ್ರಾಹಿಂ ನೋವಿನಿಂದ ಹೇಳಿಕೊಂಡಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೂ, ಇಬ್ರಾಹಿಂ ಅವರಿಗೆ ಸಿದ್ದರಾಮಯ್ಯ ರಾಜಕೀಯಕ್ಕೆ ಬರುವ ಮುಂಚಿನಿಂದಲೂ ನಂಟಿದೆ. 1972ರಿಂದ ಗೌಡರ ಜೊತೆ ಇಬ್ರಾಹಿಂ ಸಂಬಂಧ ಇದೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಜನ ತಿರಸ್ಕಾರ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಯಾವಾಗ ತೀರ್ಮಾನ ಮಾಡಿದರೂ ತುಂಬು ಹೃದಯದ ಸ್ವಾಗತ ಇರುತ್ತದೆ ಎಂದರು.
ತೀರ್ಮಾನ ತೆಗೆದುಕೊಳ್ಳಲು ಸೂಕ್ತ ಸಮಯ ಹತ್ತಿರದಲ್ಲಿದೆ. ಸಿದ್ದರಾಮಯ್ಯ ಹೋರಾಟ ಮಾಡಿ, ಇಬ್ರಾಹಿಂಗೆ ರಾಜ್ಯಮಟ್ಡದ ಸ್ಥಾನ ಕೊಡಿಸಬಹುದಿತ್ತು. ಆದರೆ, ಸಿದ್ದರಾಮಯ್ಯ ತಾವು ಬೆಳೆದರೆ ಹೊರತು ನಂಬಿಸಿ ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಹೋದವರನ್ನು ಬೆಳೆಸಲಿಲ್ಲ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಟೀಕಿಸಿದರು.
ಮಾಜಿ ಸಚಿವ ಪುಟ್ಟರಾಜು ಹಾಗೂ ಸಿದ್ದರಾಮಯ್ಯ ಭೇಟಿಯಲ್ಲಿ ವಿಶೇಷ ಬೆಳವಣಿಗೆ ಏನಿಲ್ಲ. ಅದಕ್ಕೆ ಬೇರೆ ಅರ್ಥ ಕಲಿಸುವುದು ಬೇಡ. 2023ಕ್ಕೆ ಜೆಡಿಎಸ್ ಸರ್ಕಾರ ಬರುತ್ತದೆ ಎಂದು ಇಬ್ರಾಹಿಂ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ನಮ್ಮ ಪಕ್ಷ ತಪ್ಪದೇ ಅಧಿಕಾರಕ್ಕೆ ಬರುತ್ತದೆ ಎಂದು ಹೆಚ್.ಡಿ.ಕೆ. ಸಮರ್ಥಿಸಿಕೊಂಡಿದ್ದಾರೆ.
