ಬೆಂಗಳೂರು, ಜ.23- ಬಿಜೆಪಿಯ ಬಿ ಟೀಮ್ ಯಾವ ಪಕ್ಷ ಎಂಬ ಬಹಿರಂಗ ಚರ್ಚೆಗೆ ನಾನು ಸಿದ್ದ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ವಿಧಾನಸೌಧದ ಮುಂದೆಯೇ ಚರ್ಚೆ ನಡೆಯಲಿ. ನಿಮ್ಮ ಸಿದ್ದಪುರಷರ ಜತೆ ನೀವೂ ಬನ್ನಿ. ಸಮಯ, ದಿನಾಂಕ ನಾನು ನಿಗದಿ ಮಾಡಲಾ? ಅಥವಾ ನೀವು ಮಾಡುತ್ತೀರಾ? ಉತ್ತರಕ್ಕೆ ಕಾಯುತ್ತಿರುತ್ತೇನೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನುದ್ದೇಶಿಸಿ ಹೇಳಿದ್ದಾರೆ.
ಇಡೀ ರಾಜ್ಯವನ್ನೇ ಕೋಮುದಳ್ಳುರಿಯಲ್ಲಿ ಬೇಯುವಂತೆ ಮಾಡಿದ ರಾಜ್ಯ ಬಿಜೆಪಿ ಸರ್ಕಾರ ಬರಲು ಮೂಲ ಕಾರಣಕರ್ತರೇ ನಿಮ್ಮ ಶಾಸಕಾಂಗ ಪಕ್ಷದ ನಾಯಕರು. ಆಪರೇಷನ್ ಕಮಲವೆಂಬ ಕೆಟ್ಟ ಕೊಳಕು ರಾಜಕೀಯಕ್ಕೆ ಸಿದ್ದಪುರುಷರೂ ಇವರೇ. ಈಗ ಹೇಳಿ, ಬಿಜೆಪಿ ಬಿ ಟೀಮ್ ಯಾವ ಪಕ್ಷ? ಅದರ ಕ್ಯಾಪ್ಟನ್ ಯಾರು? ಎಂದು ಆರೋಪ ಮಾಡಿದ್ದಾರೆ.
ಬಿ ಟೀಮ್ ಭಾಗವತಿಕೆ ಇಲ್ಲಿಗೇ ನಿಲ್ಲಿಸಿದರೆ ಉತ್ತಮ. ಇಲ್ಲವಾದರೆ ಮುಂದಿನ ಪರಿಣಾಮಗಳಿಗೆ ನೀವೇ ಹೊಣೆ. ರಾಜ್ಯದಲ್ಲಿ ಜಾತ್ಯತೀತ ಶಕ್ತಿಗಳು ದುರ್ಬಲವಾದರೆ ಆ ಪಾಪಕ್ಕೂ ನೀವೇ ಹೊಣೆ ಎಂದು ಹೇಳಿದ್ದಾರೆ.
ಗರ್ಭ ಮುಂದುವರೆಸುವ, ತೆಗೆಸುವ ಅಧಿಕಾರ ಮಹಿಳೆಗೆ ಮಾತ್ರ ಸೇರಿದೆ : ಬಾಂಬೆ ಹೈಕೋರ್ಟ್
ಸುರ್ಜೆವಾಲ ಅವರೇ, ಹೊಸ ಬಾಟಲಿಗೆ ಹಳೆಯ ಮದ್ಯ ತುಂಬುವ ವ್ಯರ್ಥದ ಕೆಲಸ ಏಕೆ? ರಾಜ್ಯ ಕಾಂಗ್ರೆಸ್ ಪಕ್ಷದ ಸಿದ್ದಹಸ್ತರ ಪ್ರಭಾವಕ್ಕೆ ಒಳಗಾಗಿ ಸವಕಲು ಸುಳ್ಳುಗಳನ್ನೇ ಹೇಳುವ ಕರ್ಮ ನಿಮಗೇಕೆ ಬಂತು ಎಂದು ಪ್ರಶ್ನಿಸಿದ್ದಾರೆ.
ನಮ್ಮ ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಮ್ ಎಂದು ಹಾಸನದಲ್ಲಿ ದೂರಿದ್ದಿರಿ. ಪಾಪ, ನಿಮ್ಮನ್ನು ಪ್ರಜ್ಞಾವಂತ ರಾಜಕಾರಣಿ ಎಂದು ಭಾವಿಸಿದ್ದೆ. ನೀವು ನೋಡಿದರೆ ಸಿದ್ದ ಭಾಷಣವನ್ನೇ ನಕಲು ಮಾಡಿ ನಗೆಪಾಟಲಿಗೆ ಒಳಗಾಗಿದ್ದಿರಿ. ಸತ್ಯ ಅರಿತು ಮಾತನಾಡಿದ್ದರೆ ನಾನೂ ಖುಷಿ ಪಡುತ್ತಿದ್ದೆ ಎಂದಿದ್ದಾರೆ.
ಬಿಜೆಪಿ ಬಾಲಂಗೋಚಿಯನ್ನು ಪಕ್ಕದಲ್ಲೇ ಕೂರಿಸಿಕೊಂಡು ಜೆಡಿಎಸ್ ಅನ್ನು ಬಿಜೆಪಿ ಬಿ ಟೀಮ್ ಎಂದು ದೂರಿದ್ದೀರಿ, ನಿಜಕ್ಕೂ ಆ ಬಿ ಟೀಮ್ ಯಾವುದು? ಆ ಟೀಮ್ ಕ್ಯಾಪ್ಟನ್ ಯಾರು? ಎನ್ನುವುದನ್ನು ನಿಮ್ಮ ಪಕ್ಕದಲ್ಲೇ ಇದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕೇಳಬಾರದಿತ್ತೆ? ಅರಬರೆ ಆಲಾಪದಿಂದ ಅಪಹಾಸ್ಯಕ್ಕೆ ಈಡಾಗಿದ್ದಿರಿ ಎಂದು ವ್ಯಂಗ್ಯವಾಡಿದ್ದಾರೆ.
ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಮ್ ಎಂದು 2018ರಲ್ಲಿ ಹಾಸನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಂದ ಹೇಳಿಸಿದ್ದ ನಿಮ್ಮ ಪಕ್ಷದ ಶಾಸಕಾಂಗ ನಾಯಕರು, 2008ರಲ್ಲಿ ಮಾಡಿದ್ದೇನು? ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತಿಪಕ್ಷ ನಾಯಕ ಸ್ಥಾನದಿಂದ ಕೆಳಗಿಸಲು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ನೇರ ಡೀಲ್ ಕುದುರಿಸಿದ್ದವರ ಬಗ್ಗೆ ಗೊತ್ತಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
ದಲಿತ ನಾಯಕ ಖರ್ಗೆ ಅವರನ್ನು ಸಿಎಲ್ ಪಿ ನಾಯಕ ಸ್ಥಾನದಿಂದ ಅಪಮಾನಕರವಾಗಿ ಇಳಿಸಲು ಹಾಲಿ ಸಿಎಲ್ ಪಿ ನಾಯಕ ಮಹಾಶಯರು ಹಣೆದ ಸಿದ್ದ ವ್ಯೂಹದ ಬಗ್ಗೆ ನಿಮಗೆ ಮಾಹಿತಿ ಇಲ್ಲ. ಹೋಗಲಿ. ಸಿದ್ದಪೀಡಿತ ನಿಮ್ಮ ಎಐಸಿಸಿ ಅಧ್ಯಕ್ಷರನ್ನೇ ಒಮ್ಮೆ ಕೇಳಿ ತಿಳಿದುಕೊಳ್ಳಿ ಸುರ್ಜೇವಾಲ ಅವರೇ ಎಂದಿದ್ದಾರೆ.
ಕಾಂಗ್ರೆಸ್ನಿಂದ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಿಯದರ್ಶಿನಿ ಪ್ರಣಾಳಿಕೆ
2008ರಲ್ಲಿ ಉಪ ಚುನಾವಣೆ ನಡೆದ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಯಡಿಯೂರಪ್ಪರಿಂದ ಕೋಟಿ ಕೋಟಿ ಥೈಲಿ ಪಡೆದದ್ದು, ಆ ಹಣವನ್ನು ಯಾರು ಪಡೆದು ಯಾರಿಗೆ ತಂದುಕೊಟ್ಟರು ಎನ್ನುವ ಕುರಿತೂ ಮಾಹಿತಿ ಪಡೆದುಕೊಳ್ಳಿ ಸುರ್ಜೇವಾಲರೇ. ಅನೇಕ ಸಲ ಈ ಬಗ್ಗೆ ಪ್ರಶ್ನಿಸಿದ್ದೇನೆ. ಉತ್ತರವೇ ಇಲ್ಲ. ಕೊನೆಪಕ್ಷ ನೀವಾದರೂ ಉತ್ತರಿಸಿ ಎಂದು ಹೇಳಿದ್ದಾರೆ.
ಇಷ್ಟೆಲ್ಲಾ ಮಾತೃಪಕ್ಷ ದ್ರೋಹ ಮಾಡಿದ ನಿಮ್ಮ ಶಾಸಕಾಂಗ ಪಕ್ಷದ ನಾಯಕರ ನೇತೃತ್ವದಲ್ಲಿ 5 ವರ್ಷ ಆಡಳಿತ ನಡೆಸಿದ ನಿಮ್ಮ ಪಕ್ಷ, 2018ರಲ್ಲಿ 78 ಕ್ಷೇತ್ರಗಳಿಗೆ ಕುಸಿಯಿತೇಕೆ? ಬಿಜೆಪಿ ಜತೆ ಅವರು ನಡೆಸುತ್ತಿರುವ ಮುಂದುವರಿದ ಕಳ್ಳಾಟ ಏನೆಂದು ನಿಮಗೆ ಮಾಹಿತಿ ಇಲ್ಲವೆ?
2018ರಲ್ಲಿ ನಿಮ್ಮವರೇ ನಮ್ಮ ಮನೆಗೆ ಬಂದು ಗೊಗರೆದು ಮೈತ್ರಿ ಸರ್ಕಾರ ಮಾಡಿದರು. ಆಮೇಲೆ ಶುರುವಾಗಿದ್ದೇ ಕುತ್ಸಿತ ರಾಜಕಾರಣ. ಬಾಂಬೆಗೆ ಹೋದವರ ಬೆನ್ನ ಹಿಂದೆ ಇದ್ದ ಆ ನಿಗೂಢ ಬೇತಾಳ ಯಾವುದು? ನಿಮ್ಮ ಶಾಸಕಾಂಗ ಪಕ್ಷದ ನಾಯಕರು ಮಾಡಿದ್ದೇನು ಎಂದು ವಾಗ್ದಾಳಿ ನಡೆಸಿದ್ದಾರೆ.
ಧರ್ಮಸ್ಥಳದ ಸಿದ್ದವನ, ಕಾವೇರಿ ನಿವಾಸದಲ್ಲಿ ನನ್ನ ವಿರುದ್ಧ ಹಾಗೂ ನಿಮ್ಮ ಕೇಂದ್ರ ನಾಯಕರೇ ರಚಿಸಿದ ಮೈತ್ರಿ ಸರ್ಕಾರ ಕೆಡವಲು ಮಹೂರ್ತ ಇಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ.
HD Kumaraswamy, Congress, BJP, B team,