ಎಚ್‌ಡಿಕೆ ಮನೆಗೆ ಗಿರ್ ತಳಿಯ ನಾಲ್ಕು ಗೋವುಗಳ ಆಗಮನ

ಬೆಂಗಳೂರು, ಮೇ 15- ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ತಾಲ್ಲೂಕಿನ ಕೇತಗಾನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ಹಸುಗಳನ್ನು ಸಾಕಲು ಆರಂಭಿಸಿದ್ದಾರೆ. ನಿನ್ನೆ ನಾಲ್ಕು ಗೋವುಗಳನ್ನು ತೋಟದ ಮನೆಗೆ ತಂದಿದ್ದಾರೆ. ಕುಟುಂಬದ ಸದಸ್ಯರೊಂದಿಗೆ ಪೂಜೆ ಮಾಡಿದ ಕುಮಾರಸ್ವಾಮಿ ಅವರು ಗಿರ್ ತಳಿಯ ಗೋವುಗಳನ್ನು ಮನೆಗೆ ಬರ ಮಾಡಿಕೊಂಡಿದ್ದಾರೆ.

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಅವರು ಗೋವಿನ ಪೂಜೆ ಹಾಗೂ ಗೋವುಗಳನ್ನು ಸಾಕಲು ಆರಂಭಿಸಿದ್ದಾರೆ‌‌. ಈ ಸಂಬಂಧ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, ರಾಜಕೀಯ ಮತ್ತು ಕೃಷಿ ದೃಷ್ಟಿಯಿಂದ ರಾಮನಗರ ನನ್ನ ಕರ್ಮಭೂಮಿ. ಕೇತಗಾನಹಳ್ಳಿಯ ನನ್ನ ಕೃಷಿ ಭೂಮಿಗೆ ಬಸವ ಜಯಂತಿಯ ಶುಭ ದಿನದಂದು ಕಪಿಲ, ಸ್ವರ್ಣಕಪಿಲ, ಗಿರ್ ತಳಿಯ ನಾಲ್ಕು ಗೋವುಗಳನ್ನು ಪ್ರೀತಿಪೂರ್ವಕವಾಗಿ ಬರಮಾಡಿಕೊಂಡಿರುವುದಾಗಿ ಹೇಳಿದ್ದಾರೆ.
ಹಸುಗಳನ್ನು ನನ್ನ ಕುಟುಂಬ ಭಕ್ತಿಪೂರ್ವಕವಾಗಿ ಪೂಜಿಸಿದ ಸಂಭ್ರಮದ ಕ್ಷಣಗಳು ಎಂದು ಅವರು ಹೇಳಿದ್ದಾರೆ‌.