ಸರ್ಕಾರಕ್ಕೆ ಕಿವಿ ಹಿಂಡುವಂತೆ ರಾಜ್ಯಪಾಲರಿಗೆ ಎಚ್‍ಡಿಕೆ ಆಗ್ರಹ

Social Share

ಬೆಂಗಳೂರು, ಫೆ.23- ರಾಜ್ಯದಲ್ಲಿ ಶಾಂತಿ, ಭದ್ರತೆ ನಿರ್ವಹಣೆಯಲ್ಲಿ ವಿಫಲವಾಗಿರುವ ಸರ್ಕಾರಕ್ಕೆ ರಾಜ್ಯಪಾಲರು ಕಿವಿ ಹಿಂಡಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶ ಮಾಡಬೇಕು. ಅವರು ಯಾರ ಕೈಗೊಂಬೆಯೂ ಆಗಬಾರದು ಎಂದು ಆಗ್ರಹಿಸಿದ್ದಾರೆ.
ರಾಜ್ಯಪಾಲರ ಭೇಟಿಗೆ ಸಮಯವನ್ನು ಕೇಳಿದ್ದು, ಈ ಸಂಬಂಧ ದೂರು ನೀಡಲಿದ್ದಾರೆ. ರಾಜ್ಯದಲ್ಲಿ ಶಾಂತಿ-ಭದ್ರತೆಗೆ ಅಪಾಯ ಎದುರಾಗಿದೆ. ಅಭಿವೃದ್ಧಿ, ಆವಿಷ್ಕಾರ, ಸೃಜನಶೀಲ, ವಿಜ್ಞಾನ-ತಂತ್ರಜ್ಞಾನಕ್ಕೆ ಹೆಸರಾದ ಕರ್ನಾಟಕ ಈಗ ವಿರುದ್ಧ ದಿಕ್ಕಿನಲ್ಲಿ ಜಗತ್ತಿನ ಗಮನ ಸೆಳೆದು ಕೃತಾರ್ಥವಾಗುತ್ತಿದೆ. ರಾಷ್ಟ್ರೀಯ ಪಕ್ಷಗಳೆರಡೂ ಕರ್ನಾಟಕದ ಪ್ರತಿಷ್ಠೆಗೆ ಕೊಳ್ಳಿ ಇಟ್ಟು ವಿಕೃತ ಕೇಕೆ ಹಾಕುತ್ತಿವೆ ಎಂದು ಆರೋಪಿಸಿದ್ದಾರೆ.
ಶಿಕ್ಷಣದ ಕಾಶಿ ಕರ್ನಾಟಕದ ಶಾಲೆ-ಕಾಲೇಜುಗಳಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಸಿ ಮಕ್ಕಳಲ್ಲಿ ದ್ವೇಷದ ವಿಷವುಕ್ಕಿಸಲಾಗುತ್ತಿದೆ. ಎರಡು ವರ್ಷದಿಂದ ಕೋವಿಡ್ ಹೊಡೆತದಿಂದ ಮಲಗಿರುವ ವಿದ್ಯಾರಂಗವನ್ನು ಸರ್ವನಾಶ ಮಾಡುವ ಹುನ್ನಾರವಷ್ಟೇ ಇದು ಎಂದು ಟೀಕಿಸಿದ್ದಾರೆ. ಬಡವರ ಮಕ್ಕಳು ಓದಿ ವಿದ್ಯಾವಂತರಾಗಬಾರದೇ?
ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯಾಯದ್ಯಂತ ರಾಜಕೀಯ ಕೊರೊನಾವನ್ನು ಹಬ್ಬಿಸುತ್ತಿವೆ. ಆ ಮೂಲಕ ಜನರ ಮನಸ್ಸುಗಳನ್ನು ಹಾಳು ಮಾಡುತ್ತಿವೆ. ಈ ಮಹಾಮಾರಿಗೆ ಲಸಿಕೆ ಇಲ್ಲ. ಜನರು ಈ ಹುನ್ನಾರವನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದಿದ್ದಾರೆ. ಅಕೃತ ಪ್ರತಿಪಕ್ಷದ ಸ್ವಪ್ರತಿಷ್ಠೆ, ಆಡಳಿತ ಪಕ್ಷದ ಅಸಮರ್ಥತೆಗೆ ವಿಧಾನ ಕಲಾಪ ಆಪೋಶನವಾಯಿತು. ನಾನು ಹೊಡೆದಂಗೆ ಮಾಡುತ್ತೇನೆ, ನೀನು ಅತ್ತಂಗೆ ಮಾಡು ಎನ್ನುವಂತೆ ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಕುಮ್ಮಕ್ಕಾಗಿ ಕಲಾಪಕ್ಕೆ ಕುಣಿಕೆ ಬಿಗಿದು ಜನರ ಆಶೋತ್ತರಗಳನ್ನು ಸದನದಲ್ಲೇ ಸಮಾಧಿ ಮಾಡಿದವು ಎಂದು ಆಪಾದಿಸಿದ್ದಾರೆ.
ನಿಗದಿತ ವೇಳಾಪಟ್ಟಿಗಿಂತ ಮೂರು ದಿನ ಮೊದಲೇ ಮುಗಿದ ಅವೇಶನದಲ್ಲಿ ಆರೂವರೆ ಕೋಟಿ ಕನ್ನಡಿಗರಿಗೆ ಸೊನ್ನೆ ಸುತ್ತಲಾಗಿದೆ. ಜನಪ್ರತಿನಿಗಳು ಕೇವಲ ಟಿಎ-ಡಿಎಗಾಗಿ ಮತ್ತು ವೇತನ, ಭತ್ಯೆ ಏರಿಸಿಕೊಳ್ಳಲಷ್ಟೇ ಅವೇಶನ ನಡೆದಿದೆ. ಜನರು ಏನೆಂದುಕೊಂಡಾರು? ಎಂಬ ಕನಿಷ್ಠ ಭಯವೂ ಇಲ್ಲದ ಆತ್ಮವಂಚನೆಯ ಪರಾಕಾಷ್ಠೆ ಇದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಜಾಬï, ಕೇಸರಿ ಶಾಲು ಮತ್ತು ಶಿವಮೊಗ್ಗದಲ್ಲಿ ನಡೆದ ಯುವಕನ ಕೊಲೆ, ಇವೆಲ್ಲಾಯಾರಿಂದ ಯಾರಿಗಾಗಿ ನಡೆಯುತ್ತಿವೆ? ಈ ಟೂಲ್ ಕಿಟ್ ರೂವಾರಿಗಳು ಯಾರು? ಅಧಿವೇಶನವನ್ನು ಹಳ್ಳ ಹಿಡಿಸಿದ್ದಕ್ಕೂ ಈ ಎಲ್ಲಾಪ್ರತಿಗಾಮಿ ಘಟನೆಗಳಿಗೆ ಸಂಬಂಧ ಇದೆ ಎನ್ನುವ ಅನುಮಾನ ನನ್ನದು. ಸತ್ಯವೇನೆಂಬುದು ಜನರಿಗೆ ಗೊತ್ತಾಗಬೇಕು ಎಂದು ಒತ್ತಾಯಿಸಿದ್ದಾರೆ.
ಸಾವಿನ ಮನೆಯಲ್ಲಿ ಮತಫಸಲು ತೆಗೆಯುವ ನಿರ್ಲಜ್ಜ ನಡೆ ಅಸಹನೀಯ. ಶಾಂತಿಯನ್ನು ಕದಡಿದ ಪಾಪ ಸುಮ್ಮನೆ ಬಿಡುವುದಿಲ್ಲ. ಹಚ್ಚಹಸರಿನ ನಿರ್ಮಲ ಮಲೆನಾಡಿನಲ್ಲಿ ಹೊತ್ತಿ ಉರಿಯುತ್ತಿರುವ ದ್ವೇಷದಳ್ಳುರಿ ಇಡೀ ರಾಜ್ಯಕ್ಕೇ ಶಾಪವಾಗಿ ಪರಿಣಮಿಸಲಿದೆ ಎಂದು ಹೆಚ್.ಡಿ.ಕೆ. ಹೇಳಿದ್ದಾರೆ.
 

Articles You Might Like

Share This Article