ಬೆಂಗಳೂರು, ಫೆ.8- ನಾಡಿನ ನೆಲ, ಜಲ ಮತ್ತು ಭಾಷೆ ವಿಚಾರದಲ್ಲಿ ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಾಳೆ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಕನ್ನಡ ಮನಸ್ಸುಗಳ ಮುಕ್ತ ಮಾತುಕತೆ ಕಾರ್ಯಕ್ರಮ ಆಯೋಜಿಸಲಾಗಿದೆ.
ನಗರದ ಪುರಭವನದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಲಿದ್ದಾರೆ. ನಾಡು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕನ್ನಡಪರ ಸಂಘಟನೆಗಳ ಮುಖಂಡರಿಂದ ಅಭಿಪ್ರಾಯವನ್ನು ಕುಮಾರಸ್ವಾಮಿ ಸಂಗ್ರಹಿಸಲಿದ್ದಾರೆ.
ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಈ ಸಂವಾದದಿಂದ ಹೊರಬರುವ ನಿರ್ಧಾರವನ್ನು ಸೇರಿಸಲಾಗುತ್ತದೆ. ನಾಳೆ ನಡೆಯುವ ಮುಕ್ತ ಸಂವಾದ ಜೆಡಿಎಸ್ ಪ್ರಣಾಳಿಕೆಯ ದಿಕ್ಸೂಚಿಯಾಗಲಿದೆ ಎಂದೇ ಭಾವಿಸಲಾಗಿದೆ. ಹೀಗಾಗಿ ನಾಳೆ ವಿವಿಧ ಕನ್ನಡಪರ ಮುಖಂಡರ ಜತೆ ಮಹತ್ವದ ಸಮಾಲೋಚನೆಯನ್ನು ನಡೆಸಲಾಗುತ್ತದೆ.
ರಾಜ್ಯವು ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ಎದುರಾಗುವ ಅನೇಕ ಕಠಿಣ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುವುದು. ಈಗಾಗಲೇ 150ಕ್ಕೂ ಹೆಚ್ಚು ಕನ್ನಡ ಮುಖಂಡರ ಜತೆ ಚರ್ಚೆ ನಡೆಸಿದ್ದಾರೆ. ಕನ್ನಡಿಗರ ನಿರುದ್ಯೋಗ ಸಮಸ್ಯೆ, ಖಾಸಗಿ ಹಾಗೂ ಕೇಂದ್ರ ಸರ್ಕಾರದ ಮಟ್ಟದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಇತ್ಯಾದಿ ವಿಷಯಗಳ ಬಗ್ಗೆ ಮುಖಂಡರಿಂದ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ರಾಜ್ಯವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂಬ ನಿಟ್ಟಿನಲ್ಲಿ ಮುಕ್ತ ಸಮಾಲೋಚನೆ ನಡೆಸಲು ಉದ್ದೇಶಿಸಲಾಗಿದೆ.
ಬೆಳಗಾವಿ ಸೇರಿದಂತೆ ಗಡಿ ವಿವಾದ, ಕೃಷ್ಣಾ, ಕಾವೇರಿ, ಮಹದಾಯಿ, ಮೇಕೆದಾಟು ಸೇರಿದಂತೆ ವಿವಿಧ ನೀರಾವರಿ ಯೋಜನೆಗಳು, ಬ್ಯಾಂಕ್ ಸೇರಿದಂತೆ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಉದ್ಯೋಗ ನೀಡುವುದರಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಮೊದಲಾದ ಜ್ವಲಂತ ವಿಷಯಗಳ ಬಗ್ಗೆ ಮುಕ್ತ ಸಂವಾದ ನಡೆಸಲಿದ್ದಾರೆ.
ಸಂವಾದ ಪಕ್ಷಾತೀತವಾಗಿದ್ದು, ಮಾಜಿ ಮುಖ್ಯಮಂತ್ರಿಯೊಬ್ಬರು ಕನ್ನಡಪರ ವಿಚಾರದಲ್ಲಿ ಮೊದಲ ಬಾರಿಗೆ ಇಂತಹ ಸಂವಾದದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ತೋಟದಲ್ಲಿ ಇತ್ತೀಚೆಗೆ ತಮ್ಮನ್ನು ಭೇಟಿಯಾದ ಕನ್ನಡ ಸಂಘಟನೆಗಳ ಮುಖಂಡರ ಜತೆ ಮಾತುಕತೆ ನಡೆಸಿದ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಸಭೆ ನಡೆಸುವ ಭರವಸೆ ನೀಡಿದ್ದರು.
