ಕೊಪ್ಪ,ಫೆ.26- ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಗೊಂದಲ ಶೀಘ್ರವೇ ಬಗೆಹರಿಯಲಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾನ ಮನಸ್ಕರ ಅಭಿಪ್ರಾಯ ಪಡೆಯಲು ನಿರ್ಧರಿಸಿದ್ದ ಸಭೆ ರದ್ದಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆರೋಗ್ಯ ನನಗೆ ಮುಖ್ಯವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆಯನ್ನು ಶೀಘ್ರವೇ ಮಾಡಿ ಪ್ರಕಟಿಸಲಾಗುತ್ತದೆ ಎಂದ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 123 ಕ್ಷೇತ್ರಗಳಲ್ಲಿ ಗೆದ್ದು ಸ್ವತಂತ್ರ ಸರ್ಕಾರ ರಚನೆ ಮಾಡುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
20 ವರ್ಷಗಳ ಬಳಿಕ ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಉತ್ಸಾಹದಿಂದ ಸಂಘಟನೆಯಾಗುತ್ತಿರುವುದು ಖುಷಿ ತಂದಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರದ ಜನರು ಜೆಡಿಎಸ್ಗೆ ನೀಡುತ್ತಿರುವ ಬೆಂಬಲ ನೋಡಿ ಸಂತೋಷವಾಗಿದೆ. ಜನರು ಸಾಕಷ್ಟು ಸಮಯ ಕಾದು ನಮಗೆ ಶುಭ ಕೋರುತ್ತಿದ್ದಾರೆ ಎಂದರು.
ವೈದ್ಯರ ನೇಮಕ, ಉಪನ್ಯಾಸಕರ ನೇಮಕಾತಿಯಲ್ಲೂ ಲಂಚ ಪಡೆಯುತ್ತಿರುವ ಆರೋಪವಿದೆ. ಆಸ್ಪತ್ರೆಗಳ ಸ್ಥಿತಿ ಶೋಚನೀಯವಾಗಿದೆ. ಭ್ರಷ್ಟಾಚಾರದ ಬಗ್ಗೆ ದಾಖಲೆ ಸಹಿತ ಪ್ರಸ್ತಾಪಿಸುವುದಾಗಿ ಅವರು ಹೇಳಿದರು.
#HDKumaraswamy, #Hassan, #JDSCandidate,