ನಾಡಿನಲ್ಲಿ ಶಾಂತಿ ನೆಲೆಸಲು ರಾಜ್ಯಾದ್ಯಂತ ಕುಮಾರಸ್ವಾಮಿ ಪಾದಯಾತ್ರೆ

ಬೆಂಗಳೂರು,ಮಾ.31- ಸಮಾಜ ವಿಭಜಿಸುವ ಕೆಲಸ ಮಾಡುವ ಸಂಘಟನೆಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ನಾಡಿನಲ್ಲಿ ಶಾಂತಿ ನೆಲೆಸಲು ರಾಜ್ಯಾದ್ಯಂತ ಪಾದಯಾತ್ರೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಲೋಕನಾಯಕ ಜೆಪಿ ವಿಚಾರ ವೇದಿಕೆ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಸರ್ವಜನಾಂಗದ ಶಾಂತಿಯ ತೋಟ ಒಂದು ಭಾವೈಕ್ಯತೆಯ ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದು ತಿಂಗಳಲ್ಲಿ ಉತ್ತಮ ವಾತಾವರಣ ಸೃಷ್ಟಿ ಮಾಡದಿದ್ದರೆ ಶಾಂತಿ, ಸೌಹಾರ್ದಕ್ಕಾಗಿ, ಮುಗ್ದಮನಸ್ಸುಗಳ ರಕ್ಷಣೆಗಾಗಿ ಪಾದಯಾತ್ರೆ ಮಾಡಲಾಗುವುದು ಎಂದರು.

ಆರ್‍ಎಸ್‍ಎಸ್, ವಿಶ್ವ ಹಿಂದೂ ಪರಿಷತ್, ಬಜರಂಗದಳ ದೇಶವನ್ನು ಉಳಿಸಿಲ್ಲ. ಇದು ನಿಷ್ಕ್ರಿಯ ಸರ್ಕಾರ. ಸಮಾಜ ಹಾಳು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ನಮ್ಮನ್ನು ಗುಲಾಮಗಿರಿಯಿಂದ ಹೊರಗೆ ತಂದಿದ್ದು ಸಂವಿಧಾನ ಎಂದು ತಿಳಿಸಿದರು.

ಹಿಜಾಬ್ ನಂತರ ಹವಾಲ್ ವಿವಾದವನ್ನು ತಂದಿದ್ದಾರೆ. ಮುಂದೊಂದು ದಿನ ಇನ್ನೂ ತರುತ್ತಾರೋ ಗೊತ್ತಿಲ್ಲ. ಕರ್ನಾಟಕವನ್ನು ಉತ್ತರ ಭಾರತ ಮಾಡಲು ಹೊರಟಿದ್ದೀರಾ? ಮಹಾತ್ಮಗಾಂೀಧಿಜಿಯವರನ್ನು ವಿರೋಧ ಮಾಡಿದವರು ನೀವು. ನೀವು ಅಧಿಕಾರಕ್ಕೆ ಬಂದಿದ್ದು ಹೇಗೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇಡಿ, ಐಟಿ ಮುಂದಿಟ್ಟುಕೊಂಡು ಏನು ಬೇಕಾದರೂ ಮಾಡಲಿ ಅದಕ್ಕೆ ಹೆದರುವುದಿಲ್ಲ. ಎಲ್ಲದಕ್ಕೂ ಸಿದ್ಧನಿದ್ದೇನೆ. ರಾಷ್ಟ್ರಕವಿ ಕುವೆಂಪು ಕೊಟ್ಟ ಸರ್ವಜನಾಂಗದ ಶಾಂತಿಯ ತೋಟ ಎಂಬ ಸಂದೇಶವನ್ನು ಧೂಳಿಪಟ ಮಾಡಲು ಹೋಗುತ್ತಿದ್ದೀರಾ. ನಿಮ್ಮ ಆಟ ಸಾಕು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್‍ಎಸ್‍ಎಸ್‍ನದ್ದು ಗುಪ್ತಗಾಮಿನಿ ನಡವಳಿಕೆಯಾಗಿದೆ. ಒಂದು ಕಡೆ ಸ್ವಚ್ಛ ಭಾರತ ಎಂದು ಹೇಳುತ್ತಾರೆ. ಹೃದಯ ಸ್ವಚ್ಛ ಮಾಡುವುದನ್ನು ಕಾಣುತ್ತಿಲ್ಲ ಎಂದು ಟೀಕಿಸಿದರು. ನ್ಯಾಯಮೂರ್ತಿ ಎಚ್.ಎಂ.ನಾಗಮೋಹನದಾಸ್ ಮಾತನಾಡಿ, ಸಂದ್ಗಿಗ್ದ ಪರಿಸ್ಥಿತಿಯಲ್ಲಿ ಸಂವಿಧಾನ ಮಾರ್ಗದಲ್ಲಿ ನಾವೆಲ್ಲ ನಡೆಯಬೇಕಾಗಿದೆ.

ಗಣರಾಜ್ಯವಾಗಿ 73 ವರ್ಷದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲೆಯಾಗದಿದ್ದರೂ ಜಾತಿ ವ್ಯವಸ್ಥೆಗೆ ಸಂವಿಧಾನ ಪೆಟ್ಟು ಕೊಟ್ಟಿದೆ. ನಿರುದ್ಯೋಗ, ಯುವಕರು, ದಲಿತರು, ಮಹಿಳೆಯರ ಸಮಸ್ಯೆಗಳ ವಿಚಾರಗಳ ಚರ್ಚೆ ಮುನ್ನೆಲೆಗೆ ಬರಬೇಕಾಗಿದೆ. ಭಾವನಾತ್ಮಕ ವಿಚಾರಗಳು ಹಿಂದಕ್ಕೆ ಸರಿಯಲು ಬದುಕಿನ ವಿಚಾರಗಳಿಗೆ ಪ್ರಾಧಾನ್ಯತೆ ನೀಡಬೇಕು ಎಂದು ಹೇಳಿದರು.

ಮಾನವನ ಕಷ್ಟ, ದುಃಖ ದುಮ್ಮಾನ ದೂರು ಮಾಡಲು ಜಗತ್ತಿನ ಎಲ್ಲಾ ಧರ್ಮಗಳು ಹುಟ್ಟಿವೆ. ಯಾರೂ ಧರ್ಮದ ವಿರೋಗಳು ಆಗಬೇಕಿಲ್ಲ. ಧರ್ಮ ಪ್ರಜಾಪ್ರಭುತ್ವವಾದಾಗ ಮೂಲಭೂತ ವಾದವಾಗುತ್ತದೆ. ಅದು ಮನುಕುಲಕ್ಕೆ ಅಪಾಯಕಾರಿ ಎಂದರು.

ಮೂಲಭೂತವಾದ ಮತ್ತು ಧರ್ಮವನ್ನು ಅಪ್ರಜಾಪ್ರಭುತ್ವಗೊಳಿವುದನ್ನು ವಿರೋಧಿಸಬೇಕು. ಧರ್ಮ ರಾಜಕಾರಣದೊಂದಿಗೆ ಬೆರೆಯುವುದನ್ನು ವಿರೋಧಿಸಬೇಕು. ಆ ಜಾತಿ, ಈ ಜಾತಿ, ಆ ಧರ್ಮ ಈ ಧರ್ಮ ಎಂಬ ಭೇದ ಬೇಡ. ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ, ಮುಸ್ಲಿಂ , ಕ್ರೈಸ್ತ ಎಲ್ಲರೂ ಕೂಡ ಹೋರಾಟ ಮಾಡಿದ್ದಾರೆ. ಅವರ ರಕ್ತವೂ ಹರಿದಿರುವುದನ್ನು ಅರ್ಥ ಮಾಡಿಕೊಳ್ಳಬೇಕು. ಹಲವು ಸಮಸ್ಯೆ, ಸವಾಲುಗಳಿದ್ದು, ಅವುಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕೆಂದು ಸಲಹೆ ಮಾಡಿದರು.