ಸಂಸದ ಪ್ರತಾಪ್ ಸಿಂಹ ವಿರುದ್ಧ ಹೆಚ್ಡಿಕೆ ಆಕ್ರೋಶ

Social Share

ರಾಮನಗರ,ಆ.30- ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿ ಕಾಮಗಾರಿ ಅತ್ಯುತ್ತಮವಾಗಿದೆ ಎಂದು ಹೇಳಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ಕಾರು ಚಲಿಸುವಾಗ ಆಲದ ಮರ ಉರುಳಿಬಿದ್ದು ಸಾವನ್ನಪ್ಪಿದ್ದ ಬಿಡದಿಯ ಇಟ್ಟಮಡು ನಿವಾಸಿ ಬೋರೆಗೌಡರ ನಿವಾಸಕ್ಕೆ ಬೆಳಗ್ಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಉತ್ತಮವಾದ ಕೆಲಸ ಏನಾಗಿದೆ ಎಂಬುದನ್ನು ಪ್ರತಾಪಸಿಂಹ ಬಂದು ನೋಡಲಿ. ಅವರೇ ನಿಂತು ಫೋಟೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿಸಿಕೊಂಡಿದ್ದರಲ್ಲ, ಅವರೇ ರಸ್ತೆ ನಿರ್ಮಾಣ ಮಾಡಿರುವ ರೀತಿ ಫೋಟೊ ತೆಗೆಸಿಕೊಂಡಿದ್ದರು. ಬಿಡದಿ ಬಳಿ ಬಂದು ಅಧಿಕಾರಿಗಳ ಸಭೆ ಮಾಡಿದ್ದರು. ಇಲ್ಲಿಯೇ ಬಂದು ಮಧ್ಯಸ್ಥಿಕೆ ವಹಿಸಿದ್ದರಲ್ಲ, ಈಗ ಬಂದು ನೋಡಲಿ, ಸಂಗಬಸಪ್ಪನದೊಡ್ಡಿ ಬಳಿ ಬಂದು ಈಜು ಮಾಡಬಹುದು ಎಂದು ಅವರು ಹರಿಹಾಯ್ದರು.

ನಿನ್ನೆ ಅವರೇ ಅವರೇ ಸಂಗಬಸಪ್ಪನದೊಡ್ಡಿ ಹೈವೆಗೆ ಬಂದಿದ್ದರೆ ಸ್ವತಃ ಈಜು ಮಾಡಬಹುದಿತ್ತು. ಚೆನ್ನಾಗಿ ನೀರು ನಿಂತಿತ್ತು. ವಾಹನಗಳು ಸಂಚಾರ ಮಾಡಲಿಕ್ಕೆ ರಸ್ತೆ ಮಾಡಿ ಅಂದರೆ ಹೆದ್ದಾರಿಯಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಿದ್ದಾರೆ. ಅವರಿಗೆ ಕಣ್ಣಿದ್ದರೆ ಬಂದು ನೋಡಲಿ ಎಂದು ಕಿಡಿಕಾರಿದರು.

ಕೆರೆ ಒಡೆದಿದ್ದರಿಂದ ಈ ರೀತಿ ಪ್ರವಾಹ ಆಗಿದೆ ಎಂದು ಅವರು ಹೇಳಿದ್ದಾರೆ. ಒಬ್ಬ ಜವಾಬ್ದಾರಿಯುತ ವ್ಯಕ್ತಿ ಹೀಗೆ ಮಾತನಾಡುವುದಲ್ಲ. ಶಾಶ್ವತವಾದ ಕೆಲಸ ಆಗಬೇಕು. ಸರ್ಟಿಫಿಕೇಟ್ ಕೊಡೋದಕ್ಕಲ್ಲ ಇವರು ಇರುವುದು. ಕಾಮಗಾರಿ ತಪ್ಪಾಗಿದ್ದರೆ ಸರಿಪಡಿಸಬೇಕು. ಪ್ರತಾಪ್ ಸಿಂಹ ಬರೀ ಪ್ರಚಾರ ತೆಗೆದುಕೊಳ್ಳೋದು ನಿಲ್ಲಿಸಲಿ. ಮೊದಲು ಜನರ ಕೆಲಸ ಮಾಡಲಿ ಎಂದು ಅವರು ಟಾಂಗ್ ಕೊಟ್ಟರು.

# ಬೋರೇಗೌಡರ ಮನೆಗೆ ಭೇಟಿ ನೀಡಿದ ಹೆಚ್ಡಿಕೆ

ಚಲಿಸುತ್ತಿದ್ದ ಕಾರಿನ ಮೇಲೆ ಆಲದ ಮರ ಉರುಳಿ ಬಿದ್ದು ದುರ್ಮರಣಕ್ಕೀಡಾದ ಬಿಡದಿಯ ಇಟ್ಟಮಡು ನಿವಾಸಿ ಬೋರೆಗೌಡರ ನಿವಾಸಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ದುಃಖತಪ್ತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಬೆಳಗ್ಗೆಯೆ ಮಾಗಡಿ ಶಾಸಕ ಮಂಜು ನಾಥ್ ಅವರೊಂದಿಗೆ ಬೋರೇ ಗೌಡರ ನಿವಾಸಕ್ಕೆ ಧಾವಿಸಿದ ಮಾಜಿ ಸಿಂ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರಲ್ಲದೆ, ಅವರಿಗೆ 5 ಲಕ್ಷ ರೂ.ನೆರವಿನ ಚೆಕ್ ಹಸ್ತಾಂತರ ಮಾಡಿದರು. ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ ಎಂದು ಮನೆಯವರಿಗೆ ಧೈರ್ಯ ತುಂಬಿದ ಅವರು, ಕುಟುಂಬದ ಸ್ಥಿತಿಗತಿಗಳನ್ನು ಕೇಳಿ ತಿಳಿದುಕೊಂಡರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಿನ್ನೆಯ ದಿನ ಅವಘಡದಲ್ಲಿ ಬೋರೆಗೌಡರು ನಿಧನ ಹೊಂದಿದ್ದರು. ಕಷ್ಟಪಟ್ಟು ಜೀವನ ಮಾಡುತ್ತಿರುವ ಕುಟುಂಬ. ಸರಕಾರದ ವತಿಯಿಂದ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ನಮ್ಮ ಒಡನಾಟದಲ್ಲಿ ಬೋರೇಗೌಡರು ಇದ್ದರು. ನಮ್ಮ ಜತೆಗೂಡಿ ಕೆಲಸ ಮಾಡುತ್ತಿದ್ದರು. ಅವರ ನಿಧನ ಅತ್ಯಂತ ನೋವಿನ ಸಂಗತಿ ಎಂದು ಹೇಳಿದರು.

Articles You Might Like

Share This Article