ಹಂತಕರ ಆಟಕ್ಕೆ ಇತಿಶ್ರೀ ಹಾಡಿ : ಹೆಚ್‌ಡಿಕೆ

Social Share

ಬೆಂಗಳೂರು, ಜು.27-ಅಂಕೆಯೇ ಇಲ್ಲದ ಹಂತಕರ ಆಟಕ್ಕೆ ಇತಿಶ್ರೀ ಹಾಡಿ, ಹೆಡೆಮುರಿ ಕಟ್ಟಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಯುವಕರ ಕೊಲೆಗಳ ಸರಣಿಯೇ ಮುಂದುವರಿದಿದ್ದು, ಇನ್ನೊಂದು ಜೀವ ಹೋಗಿದೆ. ಈ ಹತ್ಯಾಕಾಂಡಕ್ಕೆ ಕೊನೆಯೇ ಇಲ್ಲವೇ?
ಕೊಲೆ ಅದ ಮೇಲೆ ನಡೆಯುವ ಹೇಳಿಕೆಗಳ ಭರಾಟೆ, ಕೂಗಾಟದಿಂದ ಪ್ರಯೋಜನ ಏನು? ಶಿವಮೊಗ್ಗದಲ್ಲಿ ಹರ್ಷ ಕೊಲೆ ಅದ ಮೇಲೆ ರಾಜ್ಯ ಸರ್ಕಾರ ಮೈಮರೆತಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಪ್ರತಿ ಕೊಲೆ ಆದ ಮೇಲೆಯೂ ಮೈ ಕೊಡವಿಕೊಂಡು ಎದ್ದೇಳುವ ರಾಜ್ಯ ಸರ್ಕಾರ, ಕೊಲೆಯೇ ಆಗದಂತೆ ತಡೆಯುವ ಪ್ರಯತ್ನ ಮಾಡುತ್ತಿಲ್ಲ. ಏಕೆ? ಕೊಲೆಗಳೆಂದರೆ ಕೆಲವರಿಗೇಕೆ ಇಷ್ಟೊಂದು ಇಷ್ಟ? ಚುನಾವಣೆ ಹತ್ತಿರ ಆದಂತೆಲ್ಲ ನೆತ್ತರ ಓಕುಳಿ ಹರಿಯುತ್ತಿದೆ. ಈ ನೆತ್ತರ ಮೇಲೆ ರಾಜಕೀಯ ಆಟ ವಿಜೃಂಭಿಸುತ್ತಿದೆ.

ಈ ಮೊದಲು ಕೊಲೆಯಾಗಿದ್ದ ಮಸೂದ್ ಕೂಡ ಬಡವ, ಈಗ ಕೊಲೆಯಾದ ಪ್ರವೀಣ್ ನೆಟ್ಟಾರು ಕೂಡ ಬಡ ಕುಟುಂಬದವರೇ. ಶ್ರಮಜೀವಿಗಳ ಕುಟುಂಬದ ಮಕ್ಕಳೇ ಸಾವಿಗೆ ತುತ್ತಾಗುತ್ತಿದ್ದಾರೆ. ರಾಜಕಾರಣಿಗಳು, ಸಂಘಟನೆಗಳ ಮುಖಂಡರ ಮಕ್ಕಳು ಇಂಥ ಗಲಾಟೆಗಳಲ್ಲಿ ಕಾಣೋದೇ ಇಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಕೆಲ ಸಂಘಟನೆಗಳು ಬಡ ಯುವಕರನ್ನು ದಾರಿ ತಪ್ಪಿಸಿ ಸ್ವಾರ್ಥ ಸಾಧನೆಗಾಗಿ ಸಾವಿನ ದವಡೆಗೆ ದೂಡುತ್ತಿವೆ. ಬಡ ಕುಟುಂಬಗಳ ಜೀವನಾಧಾರ ವಾಗಿರುವ ಯುವಕರನ್ನು ಬಲಿ ತೆಗೆದುಕೊಳ್ಳುತ್ತವೆ. ಈ ಬಗ್ಗೆ ಯುವಕರು, ಪೋಷಕರು ಎಚ್ಚೆತ್ತುಕೊಳ್ಳಬೇಕು.

ಹಿಂಸೆಗೆ ಜಾತಿ, ಧರ್ಮ ಎಂಬುದಿಲ್ಲ. ರಕ್ತಪಿಪಾಸುಗಳಿಗೆ ಮಾನವೀಯತೆ ಇಲ್ಲ. ಕೊಲೆಗೆಡುಕ ಶಕ್ತಿಗಳ ಮುಂದೆ ಸರ್ಕಾರ ಕೋಲೆ ಬಸವನಂತೆ ಆಗಿದೆ. ಈ ಕೊಲೆಗಳ ಹಿಂದಿರುವ ಕಾಣದ ಕೈಗಳಿಗೆ ಕೊಳ ಹಾಕಲು ಧೈರ್ಯ ಇಲ್ಲ. ಈ ಅಸಹಾಯಕತೆಗೆ ಕಾರಣ ಏನು ಎಂದು ಪ್ರಶ್ನಿಸಿದ್ದಾರೆ.

ಕರ್ನಾಟವು ಸರ್ವ ಜನಾಂಗದ ಶಾಂತಿಯ ತೋಟ. ಶಾಂತಿ, ಸೌಹಾರ್ದತೆ, ಸಹಿಷ್ಣುತೆಯ ಬೀಡು. ಭಾವನಾತ್ಮಕ ವಿಷಯಗಳಿಂದ ಬಂಡವಾಳ ಹೂಡಿಕೆಯಲ್ಲಿ ಈಗಾಗಲೇ ರಾಜ್ಯಕ್ಕೆ ಹೊಡೆತ ಬಿದ್ದಿದೆ. ಹೊಸ ಕೈಗಾರಿಕೆಗಳು ಬರುತ್ತಿಲ್ಲ ಎಂದು ಹೇಳಿದ್ದಾರೆ.

ಶಾಂತಿ, ಸುವ್ಯಸ್ಥೆ ಸಮಸ್ಯೆಯಿಂದ ಆರ್ಥಿಕ ಹಿಂಜರಿತ ಉಂಟಾಗಿ ಕೈಗಾರಿಕೆಗಳು ವಲಸೆ ಹೋದರೆ ಎದುರಾಗುವ ನಿರುದ್ಯೋಗ ಸಮಸ್ಯೆಗೆ ಯಾರು ಹೊಣೆ ಆಗುತ್ತಾರೆ? ನಿರುದ್ಯೋಗವೇ ಇಂಥ ಘಟನೆಗಳಿಗೆ ಕಾರಣ. ಹತಾಶ ಯುವಕರ ಮನಸ್ಸು ಕೆಡಿಸಲಾಗುತ್ತಿದೆ. ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದಿದ್ದಾರೆ.

Articles You Might Like

Share This Article