“ಅವರನ್ನು ಸೋಲಿಸೋಕೆ ರೇವಣ್ಣನ ಕುಟುಂಬ ಬೇಕಿಲ್ಲ, ಒಬ್ಬ ಸಾಮಾನ್ಯ ಕಾರ್ಯಕರ್ತ ಸಾಕು”

ಹಾಸನ, ಮೇ 7- ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ರಾಜಕಾರಣ ತೋರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ರೇವಣ್ಣ ನಮ್ಮ ವಿರುದ್ಧ ಸ್ರ್ಪಧಿಸಲಿ ಎಂಬ ಶಾಸಕ ಪ್ರೀತಂಗೌಡ ಆಹ್ವಾನದ ವಿಚಾರವಾಗಿ ವಾಗ್ದಾಳಿ ನಡೆಸಿರುವ ಅವರು, ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ರಾಜಕಾರಣ ತೋರಿಸುತ್ತೇನೆ ಎಂದು ಹೇಳಿದ್ದಾರೆ.

ನಮ್ಮ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತರನ್ನು ಮುಂದಿನ ಚುನಾವಣೆಗೆ ನಿಲ್ಲಿಸುತ್ತೇನೆ. ರೇವಣ್ಣ, ರೇವಣ್ಣನ ಕುಟುಂಬ ಬೇಕಿಲ್ಲ. 2023ಕ್ಕೆ ನನ್ನ ಪಕ್ಷದ ಸಾಮಾನ್ಯ ಕಾರ್ಯಕರ್ತ ನಿಂತು ಚುನಾವಣೆ ಗೆದ್ದು ಬರುತ್ತಾರೆ. ಲಕ್ಷಾಂತರ ಕಾರ್ಯಕರ್ತರಿದ್ದಾರೆ ಎಂದರು.

ಹಾಸನದ ರಾಜಕಾರಣದಲ್ಲಿ ನಾನು ತಲೆ ಹಾಕಿಲ್ಲ. ಹಣದ ಅಹಂನಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬ ದುರಂಹಕಾರದ ಮಾತು ಇರಬಹುದು. ಎಂತೆಂತವರೋ ರಾಜಕಾರಣ ಮುಳುಗಿ ಹೋಗಿದ್ದಾರೆ. ಎಂತೆಂಥ ಸಾಮ್ರಾಜ್ಯಗಳೇ ನಾಶವಾಗಿ ಹೋಗಿವೆ. ಇದು ಯಾವ ಲೆಕ್ಕ ಎಂದಿರುವ ಅವರು, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ನಾನು ಈ ಬಾರಿ ಹಸ್ತಕ್ಷೇಪ ಮಾಡುತ್ತೇನೆ. ಅದರಲ್ಲಿ ಯಾವ ಸಂಶಯವೂ ಇಲ್ಲ ಎಂದರು.50 ಸಾವಿರ ಅಂತರದಲ್ಲಿ ಲ್ಲಿ ಗೆಲ್ಲುವಷ್ಟು ಏಕೆ ಶ್ರಮ ತಗೋತಿಯ… ಅಭ್ಯರ್ಥಿ ಯಾರು ಎಂಬುದನ್ನು ಸದ್ಯದಲ್ಲೇ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.

# ಪಿಎಸ್‍ಐ ಹಗರಣ:

ಕಿಂಗ್ ಪಿನ್ ಹೆಸರು ಹೇಳದ ಸರ್ಕಾರ ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಮೂಲ ಕಿಂಗ್‍ಪಿನ್ ಹೆಸರು ಹೇಳಲು ಸರ್ಕಾರಕ್ಕೆ ಸಾಧ್ಯವಿದೆಯೇ, ಅವರನ್ನು ಟಚ್ ಮಾಡಿದ್ರೆ ಸರ್ಕಾರ ಉಳಿಯುತ್ತ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಪಿಎಸ್‍ಐ, ಸಹಪ್ರಾಧ್ಯಾಪಕ ಹುದ್ದೆ ಹಗರಣದಲ್ಲಿ ಮಂತ್ರಿಗಳ ಮೇಲೆಯೇ ಆಪಾದನೆ ಬರುತ್ತಿದೆ. ಹಗರಣದ ತನಿಖೆ ನಡೆಯುತ್ತಿದ್ದು, ಈ ತನಿಖೆ ಹಿಂದೆ ಯಾರಿದ್ದಾರೆ? ಪ್ರಶ್ನೆಪತ್ರಿಕೆ ಸೋರಿಕೆಯಾಗಲು ಯಾರ ಕೈವಾಡವಿದೆ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಸಹ ಪ್ರಾಧ್ಯಾಪಕರ ಹುದ್ದೆಗೆ 80 ಲಕ್ಷ ರೇಟ್ ಫಿಕ್ಸ್  ಮಾಡಿದ್ದಾರೆ. ಪಿಎಸ್‍ಐ ಹಗರಣಕ್ಕಿಂತ ಇದು ದೊಡ್ಡ ಹಗರಣ. ಪಿಂಚಣಿ ಕೊಡಲು ಇಟ್ಟಂತಹ 1350 ಕೋಟಿ ಹಣವನ್ನು ಕಟ್ಟಡ ಕಟ್ಟಲು ಡೈವರ್ಟ್ ಮಾಡಿದ್ದಾರೆ. ಯಾರಿಗೆ ಕೆಲಸ ಕೊಟ್ಟಿದ್ದೀರಿ ಅಂತ ಪ್ರಶ್ನಿಸಿದ್ದಾರೆ.

ಎಬಿವಿಪಿ, ಆರ್‍ಎಸ್‍ಎಸ್ ನವರನ್ನು ಯೂನಿವರ್ಸಿಟಿ ಸಿಂಡಿಕೆಟ್ ಸದಸ್ಯರನ್ನಾಗಿ ಮಾಡಿಕೊಂಡು ಅಕ್ರಮ ನಡೆಸುತ್ತಿದ್ದಾರೆ. ಸರ್ಕಾರ ಕೇಳಿದರೆ ಏನೇನು ಮಾಹಿತಿ ಬೇಕು ಕೊಡಲು ನಾನು ತಯಾರಿದ್ದೇನೆ. ಪರೀಕ್ಷೆಗೂ ಮೊದಲು 500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಸಿಕ್ಕಿದೆ. ಈ ತನಿಖೆ ಹಳ್ಳ ಹಿಡಿಯುತ್ತೆ. ಕಾಂಗ್ರೆಸ್‍ನವರು ಬ್ರಹ್ಮಾಂಡ ಭ್ರಷ್ಟಾಚಾರ ಅಂತಾರೆ, ಒಂದು ದಾಖಲೆ ಕೊಡಲ್ಲ, ಇವರೆಲ್ಲ ಏನೇನು ನಡೆಸಿದ್ದಾರೆ, ಇವರ ಹಣೆಬರಹ ನೋಡಿದ್ದೇನೆ ಎಂದು ಎಚ್‍ಡಿಕೆ ಹೇಳಿದ್ದಾರೆ.

ಆರ್‍ಎಸ್‍ಎಸ್ ಕಪಿಮುಷ್ಠಿಯಲ್ಲಿ ಬೊಮ್ಮಾಯಿ ಸಿಲುಕಿದ್ದಾರೆ. ಹೆಬ್ಬೆಟ್ಟು ಒತ್ತುವವರನ್ನು ಶಿಕ್ಷಣ ಇಲಾಖೆಗೆ ಸೇರಿಸಿಕೊಂಡಿದ್ದಾರೆ. ನಾಡಿನ ಜನತೆ ಸೂಕ್ಷ್ಮವಾಗಿ ಗಮನಿಸಬೇಕು. ಶಿಕ್ಷಣ ಇಲಾಖೆಗೆಯಲ್ಲಿ ಕೋಟ್ಯಾಂತರ ರೂ. ಲೂಟಿಯಾಗಿದೆ. ಇವರ ಕಾಟ ತಡೆಯಲಾಗದೆ ಅಧಿಕಾರಿಗಳು ರಜೆ ಹಾಕಿ ಹೋಗಿದ್ದು, ಮಹಾರಾಷ್ಟ್ರ ಕೇಡರ್ ಅವರನ್ನು ಕಮಿಷನರ್ ಆಗಿ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು.

ಇವರು ಗೆಸ್ಟ್ ಹೌಸ್‍ನಲ್ಲಿ ಕುಳಿತು ವ್ಯವಹಾರ ಮಾಡುತ್ತಿದ್ದಾರೆ. ಗೆಸ್ಟ್ ಹೌಸ್‍ನಲ್ಲಿ ಇದ್ಕೊಂಡು ಏನೇನ್ ಮಾಡ್ತಿದ್ದಾರೆ ಎಂಬುದು ಗೊತ್ತು. ಬೊಮ್ಮಾಯಿ ಅವರು ಮೊದಲು ಅಕ್ಕಪಕ್ಕ ಇಟ್ಟುಕೊಂಡಿರುವವರನ್ನು ಮೊದಲು ಬಲಿ ಹಾಕಿ, ಆಮೇಲೆ ಬೇರೆಯವರನ್ನು ಬಲಿ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

# ಶಿವಲಿಂಗೇಗೌಡ ವಿರುದ್ಧ ಎಚ್‍ಡಿಕೆ ಅಸಮಾಧಾನ:

ಇದೇ ವೇಳೆ ಶಾಸಕ ಶಿವಲಿಂಗೇಗೌಡರ ವಿರುದ್ಧ ಮತ್ತೆ ಎಚ್‍ಡಿಕೆ ಅಸಮಾಧಾನ ಹೊರ ಹಾಕಿದರು. ಶಿವಲಿಂಗೇಗೌಡರು ಪಕ್ಷ ಬಿಡ್ತಾರೆ ಅಂತ ಹೇಳಿಲ್ಲ, ಪಕ್ಷದಲ್ಲಿ ಇದ್ಕಂಡು ಬೆನ್ನಿಗೆ ಚೂರಿ ಹಾಕುವ ಕೆಲಸ ಬೇಡ ಅಂತ ಹೇಳಿದ್ದೀನಿ. ಇಲ್ಲಿ ಯಾರು ಯಾರಿಗೂ ಅನಿವಾರ್ಯ ಅಲ್ಲ, ಜೆಡಿಎಸ್ ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಜೆಡಿಎಸ್ ಮೂಲ ಏನು, ದೇವೇಗೌಡರು ಪಕ್ಷೇತರ ಸದಸ್ಯರಾಗಿ ರಾಜಕೀಯ ಪ್ರಾರಂಭ ಮಾಡಿದರು. ಜೆಡಿಎಸ್‍ನಲ್ಲಿದ್ದ ಮಹಾನಾಯಕರುಗಳೆಲ್ಲ ಪಕ್ಷವನ್ನು ಬೇರು ಸಮೇತ ತೆಗೆದುಕೊಂಡು ಹೋದರು. ಆದರು ಇನ್ನೂ ಜೆಡಿಎಸ್ ಉಳಿದಿದೆ. ನಾನು ಯಾರನ್ನು ದಮ್ಮಯ್ಯ ಅನ್ನಲ್ಲ, ನಮಗೇನು ಅನಿವಾರ್ಯವೂ ಅಲ್ಲ ಎಂದರು.

# ಕಾಂಗ್ರೆಸ್ ಅಧ್ಯಕ್ಷರ ಜೊತೆ ಹೋಗಲು ಸಮಯವಿದೆ:

ಒಂದು ಗಂಟೆ ಮಾತನಾಡಬೇಕು ತೋಟದ ಮನೆಗೆ ಬರ್ತಿನಿ ಅಂದ್ರು, ಇವತ್ತಿನವರೆಗೂ ಬರಲಿಲ್ಲ. ಕಾಂಗ್ರೆಸ್ ಅಧ್ಯಕ್ಷರನ್ನು ಕರೆದುಕೊಂಡು ಅರಸೀಕೆರೆಯಲ್ಲಿ ಗೃಹಪ್ರವೇಶಕ್ಕೆ ಹೋಗಲು ಆಗುತ್ತದೆ. ಕುಮಾರಸ್ವಾಮಿ ಭೇಟಿ ಮಾಡಲು ಸಮಯವಿಲ್ಲ. ನಮಗೇನು ಮಾಹಿತಿ ಇರಲ್ವ ಎಂದು ಕಿಡಿಕಾರಿದರು.