ಆರ್‌ಎಸ್‌ಎಸ್‌ ಬಗ್ಗೆ ನೀಡಿರುವ ಹೇಳಿಕೆಗೆ ಬದ್ಧ, ಚರ್ಚೆಗೂ ಸಿದ್ಧ : ಹೆಚ್‌ಡಿಕೆ

ಬೆಂಗಳೂರು,ಅ.8- ಆರ್‌ಎಸ್‌ಎಸ್‌ ಬಗ್ಗೆ ನೀಡಿರುವ ಹೇಳಿಕೆಗೆ ಬದ್ದವಾಗಿದ್ದು, ಸಾರ್ವಜನಿಕವಾಗಿ ಚರ್ಚೆಗೂ ಸಿದ್ಧ. ಬಿಜೆಪಿ ಹಾಗೂ ಆರ್.ಎಸ್.ಎಸ್ ನಾಯಕರು ಚರ್ಚೆಗೆ ಬರಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಚನ್ನಪಟ್ಟಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಅಜೆಂಡಾಗಳ ಬಗ್ಗೆ ಚರ್ಚೆ ನಡೆಸಲು ನಾನು ಸಿದ್ದ. ಆರ್‌ಎಸ್‌ಎಸ್‌ ಪ್ರಚಾರಕರೇ ಒಬ್ಬ ಲೇಖಕರ ಮುಂದೆ ಹೇಳಿರುವುದನ್ನು ನಾನು ಹೇಳಿದ್ದೇನೆ. ನಾನು ವಾಸ್ತುವತೆಯ ಆಧಾರದಲ್ಲಿ ಹೇಳಿದ್ದೇನೆ. ಎಂದರು.

ಸ್ವಾತಂತ್ರ್ಯ ಬಂದಾಗ ಆರ್‌ಎಸ್‌ಎಸ್‌ ಇಲ್ಲದಿದ್ದರೆ ಭಾರತ ಪಾಕಿಸ್ತಾನ ಆಗುತಿತ್ತು ಎಂಬ ಸಚಿವ ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಕ್ರಿಯಿಸಿದ ಅವರು, ಸ್ವಾತಂತ್ರ್ಯ ಬಂದಾಗ ಈಶ್ವರಪ್ಪ ಹುಟ್ಟಿದ್ದರೇ? ಯಾರ್ಯಾರ ಕೊಡುಗೆ ಏನೇನಿದೆದೆ ಎಂಬುದು ಅವರಿಗೆ ಏನು ಗೊತ್ತು ಎಂದು ಪ್ರಶ್ನಿಸಿದರು.

ಆರ್‌ಎಸ್‌ಎಸ್‌ ನವರು ಬಂದು ಪಾಕಿಸ್ತಾನ ಆಗುವುದನ್ನು ತಪ್ಪಿಸಿದ್ದಾರೆಯೇ? ಕಾಶ್ಮೀರದಲ್ಲಿ ಶಾಲೆಗೆ ನುಗ್ಗಿ ಭಯೋತ್ಪಾದಕರು ಶಿಕ್ಷಕರನ್ನು ಸುಟ್ಟಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು 10 ತಿಂಗಳು ಪ್ರಧಾನಿ ಆಗಿದ್ದ ವೇಳೆ ದೇಶದಲ್ಲಿ ನಾಗರಿಕರ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿತ್ತೇ ಎಂದರು.

ಕಳೆದ 4 ದಿನಗಳಲ್ಲಿ ಕಾಶ್ಮೀರದಲ್ಲಿ ಪಂಡಿತರು ಹಾಗೂ ಶಿಕ್ಷಕರನ್ನು ನಾಗರಿಕರನ್ನು ಭಯೋತ್ಪಾದಕರು ಗುಂಡಿಕ್ಕಿದ್ದಾರೆ. ಇದೇನಾ ಆರ್‌ಎಸ್‌ಎಸ್‌ ನಿಮಗೆ ಸರಕಾರ ನಡೆಸುವುದು ಹೇಗೆಂದು ಹೇಳಿಕೊಟ್ಟಿರೋದು ಎಂದು ಟೀಕಿಸಿದರು. ನಾನು ದಾಖಲೆ ಆಧಾರವಿಟ್ಟಿಕೊಂಡು ಮಾತನಾಡುತ್ತಿದ್ದೇನೆ. ಆರ್‍ಎಸ್‍ಎಸ್ ಹಾಗೂ ಬಿಜೆಪಿ ಸೇರಿಕೊಂಡು ಕಾಶ್ಮೀರವನ್ನು ಹಾಳು ಮಾಡುತ್ತಿದ್ದಾರೆ.

ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ವಿಷಯವಿಲ್ಲ. ಜೆಡಿಎಸ್ ಬಿಜೆಪಿಯ ಬಿ ಟೀಮ್ ಅಂತಾರೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಹಾಕಿದ್ದಾರೆ ಎನ್ನುತ್ತಾರೆ. ಕಾಂಗ್ರೆಸ್ ನಾಯಕರ ಜತೆಗೆ ಬಿಜೆಪಿ ನಾಯಕರು ವಾದ ಮಾಡಿದ ಹಾಗೆ ನನ್ನ ಬಳಿ ಚರ್ಚೆ ಬೇಡ ಎಂದರು.

ಸಿಂಧಗಿ ಮತ್ತು ಹಾನಗಲ್ ಎರಡು ಕ್ಷೇತ್ರಗಳಲ್ಲಿ ಉತ್ತಮ ವಾತಾವರಣ ಇದೆ. ಸಿಂದಗಿಯಲ್ಲಿ ಈಗಾಗಲೇ ಅಭ್ಯರ್ಥಿ ಗೆಲ್ಲುವ ಸೂಚನೆ ಇದೆ. ಹಾನಗಲ್‍ನಲ್ಲಿ ಪೈಪೋಟಿ ನೀಡಲಿದ್ದೇವೆ. ಜೆಡಿಎಸ್ ಕಾರ್ಯಾಗಾರದಲ್ಲಿ ನಾನೇ ಹೇಳಿದ್ದೆ.

ಜೆಡಿಎಸ್ ಪಕ್ಷ ಎಲ್ಲಿ ಬಲಿಷ್ಠವಾಗಿದೆಯೋ ಅಲ್ಲಿ ಪಕ್ಷ ಬೆಂಬಲಿಸಿ. ಎಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮುಂದೆ ಇದೆ ಅಲ್ಲಿ ಅಲ್ಪಸಂಖ್ಯಾತ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಬೆಂಬಲಿಸಿ ಎಂದು ನೇರವಾಗೇ ಹೇಳಿದ್ದೇನೆ. ಕಾಂಗ್ರೆಸ್ ಪಕ್ಷದ ಹಾಗೇ ರಾಜಕೀಯ ಮಾಡಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾಗೆ ಕುಲಗೆಟ್ಟ ರಾಜಕೀಯ ಮಾಡಲ್ಲ. ರಾಜ್ಯದಲ್ಲಿ ಜಾತ್ಯತೀತ ಶಕ್ತಿ ಉಳಿಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನ ಬೆಂಬಲಿಸಿ ಎಂದೇಳಿದ್ದೇನೆ ಎಂದರು.

ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡಿ ತಮ್ಮ ಕೀಳುಮಟ್ಟದ ರಾಜಕೀಯ ಏನೂ ಎಂಬುದನ್ನು ಪ್ರದರ್ಶನ ಮಾಡುತ್ತಿದ್ದಾರೆ. ನಮ್ಮ ಪಕ್ಷವನ್ನು 2023ಕ್ಕೆ ಅಧಿಕಾರಕ್ಕೆ ತರಲು ಕಾರ್ಯಾಗಾರಗಳನ್ನು ಮಾಡಿದ್ದೇನೆ. ದೇಶಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ಜನತೆ ಮುಂದೆ ಇಡಲು ಪ್ರಾರಂಭ ಮಾಡಿದ್ದೇನೆ.

ಇದು ಇಲ್ಲಿಗೆ ನಿಲ್ಲಿಸುವ ಪ್ರಶ್ನೆ ಇಲ್ಲ. ಕಾರ್ಯಾಗಾರಗಳನ್ನು ಮಾಡುವ ಮೂಲಕ ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇನೆ. ಇದು ಉಪ ಚುನಾವಣೆಯಲ್ಲಿ ಯಾರನ್ನೊ ಓಲೈಸಿಕೊಳ್ಳಲು ಕಾರ್ಯಾಗಾರ ಮಾಡಿಲ್ಲ. ಓಲೈಸೊ ರಾಜಕಾರಣ ಬಿಜೆಪಿ ಪಕ್ಷದ್ದು. ಹಿಂದುತ್ವದ ಹೆಸರಿನಲ್ಲಿ ಸಂದೇಶ ಕೊಡಲು ಬಿಜೆಪಿ ಹೊರಟ್ಟಿದ್ದಾರೆ. ಹಿಂದುತ್ವದ ರಾಜಕಾರಣ ಮಾಡಿಕೊಂಡು ಮತಗಳಿಗೋಸ್ಕರ ವೋಟ್ ಬ್ಯಾಂಕ್ ರಾಜಕಾರಣ ನಾನು ಮಾಡುತ್ತಿಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.