ಹತ್ಯೆಯಾದವರ ಮನೆಗಳಿಗೆ ಎಚ್‍ಡಿಕೆ ಭೇಟಿ, ತಲಾ 5 ಲಕ್ಷ ಪರಿಹಾರದ ಚೆಕ್ ಹಸ್ತಾಂತರ

Social Share

ಮಂಗಳೂರು,ಆ.1- ದಕ್ಷಿಣ ಕನ್ನಡ ಜಿಲ್ಲೇಯ ಬೆಳ್ಳಾರೆಯಲ್ಲಿ ಹತ್ಯೆಯಾದ ಪ್ರವೀಣ್ ನೆಟ್ಟಾರು, ಮಸೂದ್ ಹಾಗೂ ಫಾಜಿಲ್ ಅವರ ಮನೆಗಳಿಗೆ ಇಂದು ಬೆಳಗ್ಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ದುಃಖತಪ್ತ ಎರಡೂ ಕುಟುಂಬಗಳಿಗೆ ಸಾಂತ್ವನ ಹೇಳಿ ಪರಿಹಾರ ಧನದ ಚೆಕ್ ಹಸ್ತಾಂತರಿಸಿದರು.

ಇಂದು ಬೆಳಗ್ಗೆಯೇ ಮಂಗಳೂರಿಗೆ ಆಗಮಿಸಿದ ಅವರು ವಿಮಾನ ನಿಲ್ದಾಣದಿಂದ ನೇರವಾಗಿ ಬೆಳ್ಳಾರೆ ಗ್ರಾಮದ ಪ್ರವೀಣ್ ನೆಟ್ಟಾರು ಅವರ ಮನೆಗೆ ಬಂದು ಪತ್ನಿ ನೂತನ ಹಾಗೂ ತಂದೆ-ತಾಯಿಗೆ ಸಾಂತ್ವನ ಹೇಳಿ ಯಾವುದೇ ಕಾರಣಕ್ಕೂ ಎದೆಗುಂದಬೇಡಿ. ನಿಮ್ಮ ಕುಟುಂಬಕ್ಕೆ ನ್ಯಾಯ ದೊರೆಯುವ ರೀತಿಯಲ್ಲಿ ನಾನು ಹೋರಾಟ ಮಾಡುತ್ತೇನೆ ಎಂದು ಭರವಸೆ ನೀಡಿದರು. ಇದೇ ವೇಳೆ ಪ್ರವೀಣ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ನಿಮ್ಮೊಂದಿಗೆ ನಾನೀದ್ದೇನೆ. ಪ್ರವೀಣ್ ಅವರ ಆತ್ಮಕ್ಕೆ ಶಾಂತಿ ಸಿಗಲು ನಿಮ್ಮ ಮನೆ ಮಗನಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇದು ನಾನು ನಿಮ್ಮ ಕುಟುಂಬಕ್ಕೆ ನೀಡುವ ವಚನ ಎಂದು ಕುಟುಂಬಕ್ಕೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ನನ್ನ ಪತಿಯನ್ನು ಕೊಂದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕುಮಾರಸ್ವಾಮಿ ಅವರ ಬಳಿ ನೂತನ ಮೊರೆಯಿಟ್ಟರು. ತಮ್ಮ ವೈಯಕ್ತಿಕ ಮೊಬೈಲ್ ನಂಬರ್ ನೀಡಿ ಯಾವುದೇ ಸಮಸ್ಯೆ ಬಂದರೂ ತಮ್ಮನ್ನು ಸಂಪರ್ಕಿಸಬಹುದು. ಎಲ್ಲ ರೀತಿಯ ನೆರವು ನೀಡುವ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಕುಟುಂಬದವರಿಗೆ ಪರಿಹಾರವಾಗಿ 5 ಲಕ್ಷ ರೂ.ಗಳ ಚೆಕ್ ನೀಡಿದರು.

ಇದಕ್ಕೂ ಮುನ್ನ ಬೆಳ್ಳಾರೆ ಗ್ರಾಮದ ಮಸೂದ್ ಅವರ ಕಳಂಜದ ನಿವಾಸಕ್ಕೆ ಕುಮಾರಸ್ವಾಮಿ ಅವರು ಭೇಟಿ ನೀಡಿ ಅವರ ಚಿಕ್ಕಪ್ಪ ಹಾಗೂ ಅಣ್ಣ-ತಮ್ಮಂದಿರು ಸೇರಿದಂತೆ ಇಡೀ ಕುಟುಂಬಕ್ಕೆ ಸಾಂತ್ವನ ಹೇಳಿ, ಆ ಕುಟುಂಬಕ್ಕೂ ಸ್ಥಳದಲ್ಲೇ ಪರಿಹಾರವಾಗಿ 5 ಲಕ್ಷ ರೂ. ಚೆಕ್ ಹಸ್ತಾಂತರ ಮಾಡಿದರು.

ಮಸೂದ್ ಮುಗ್ಧನಾಗಿದ್ದು, ನಮ್ಮ ಕುಟುಂಬಕ್ಕೆ ಅನ್ಯಾಯವಾಗಿದೆ ಎಂದು ಕುಟುಂಬಸ್ಥರು ತಮ್ಮ ದುಃಖ ತೋಡಿಕೊಂಡರು.
ಬಳಿಕ ಮಾಜಿ ಮುಖ್ಯಮಂತ್ರಿಗಳು ಸುರತ್ಕಲ್‍ನಲ್ಲಿ ಹತ್ಯೆಯಾದ ಫಾಝಿಲ್ ಅವರ ಮನೆಗೂ ಭೇಟಿ ನೀಡಿ ಅವರ ತಂದೆ-ತಾಯಿ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೆ, ಸ್ಥಳದಲ್ಲೇ 5 ಲಕ್ಷ ರೂ.ಮೊತ್ತದ ಪರಿಹಾರ ಚೆಕ್ ಅನ್ನು ಪೋಷಕರಿಗೆ ಹಸ್ತಾಂತರ ಮಾಡಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಭೋಜೆಗೌಡ ಹಾಗೂ ದಕ್ಷಿಣ ಕನ್ನಡ ಜಿಲ್ಲೇಯ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

Articles You Might Like

Share This Article