ಜೆಡಿಎಸ್ ಕಂಡ್ರೆ ರಾಷ್ಟ್ರೀಯ ಪಕ್ಷಗಳಿಗೆ ಭಯ : ರೇವಣ್ಣ

ಹಾಸನ, ಅ.22- ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ಮೇಲೆ ಭಯ. ಹಾಗಾಗಿ ಈ ಉಪಚುನಾವಣೆಯಲ್ಲೂ ರಾಷ್ಟ್ರೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದ್ದಾರೆ. ಕೆಆರ್ ಪೇಟೆ ಚುನಾವಣೆಯಲ್ಲಿ ರಾತ್ರೋರಾತ್ರಿ ಕಾಂಗ್ರೆಸ್ ನವರು ಬಿಜೆಪಿಗೆ ಮತ ಹಾಕಲಿಲ್ಲವೆ ಎಂದು ಪ್ರಶ್ನಿಸಿದ ಅವರು, ಇದೊಂದು ಭ್ರಷ್ಟ ಲೂಟಿಕೋರ ಸರ್ಕಾರ. ಮುಂದಿನ ದಿನಗಳಲ್ಲಿ ರಾಜ್ಯ ಅಧೋಗತಿಗೆ ಹೋಗುತ್ತದೆ ಎಂದು ಕಿಡಿಕಾರಿದರು.

ಲೂಟಿಕೋರರಿಗೆ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ. ಜಿಲ್ಲಾಯಲ್ಲಿ ಹಿಂಬಾಗಿಲಿನಿಂದ ಆಡಳಿತ ಹಿಡಿಯಲು ಸರ್ಕಾರ ಮುಂದಾಗಿದೆ. ಯಾವುದು ಪರ್ಸೆಂಟೇಜ್ ಸರ್ಕಾರ ಎಂಬುದನ್ನು ಮೋದಿಯವರೇ ಈಗ ಹೇಳಬೇಕು ಎಂದು ಟಾಂಗ್ ನೀಡಿದರು. ನಗರಸಭೆ ಮೀಸಲಾತಿ ವಿಚಾರದಲ್ಲಿ ಸರ್ಕಾರದಲ್ಲಿ ಒಂದೊಂದು ದಿನ ಒಂದೊಂದು ಆದೇಶ ಮಾಡುತ್ತಿದ್ದಾರೆ.

ನಗರಸಭೆ ಮೀಸಲಾತಿ ವಿಚಾರದ ಬಗ್ಗೆ ಕಡತ ಕೊಡುವಂತೆ ಸರ್ಕಾರ ಹಾಗೂ ಅಡ್ವೊಕೇಟ್ ಜನರಲ್‍ರನ್ನು ಕೇಳಿದರೂ ಮಾಹಿತಿ ಕೊಡುತ್ತಿಲ್ಲ. ರಾತ್ರಿ 12 ಗಂಟೆಯ ಮೇಲೆ ಸರ್ಕಾರಿ ಕಡತವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ನ್ಯಾಯ ಸಿಗುವವರೆಗೂ ಮೀಸಲಾತಿ ಅನ್ಯಾಯದ ವಿರುದ್ಧ ಜೆಡಿಎಸ್ ಹೋರಾಟ ಮಾಡಲಿದೆ. ಸರ್ಕಾರ ನ್ಯಾಯಾಲಯಕ್ಕೆ ಸತ್ಯ ಮರೆಮಾಚಿ ಸುಳ್ಳು ಮಾಹಿತಿ ನೀಡಿದೆ ಎಂದು ಹೇಳಿದರು. ಇದೀಗ ನ್ಯಾಯಾಲಯದ ಈ ಆದೇಶದಿಂದ 48 ಸ್ಥಳೀಯ ಸಂಸ್ಥೆಗಳನ್ನು ಬಿಜೆಪಿ ವಶಕ್ಕೆ ಪಡೆಯಲು ಹವಣಿಸುತ್ತಿದೆ ಎಂದು ದೂರಿದರು.

ಪ್ರವಾಹ ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಿಎಂ ಉಪಚುನಾವಣೆ ಗೆಲ್ಲಬೇಕು ಎಂಬುದರಲ್ಲಿ ತೋರುತ್ತಿರುವ ಕಾಳಜಿಯನ್ನು ಆ ಭಾಗದ ಜನರ ಕಷ್ಟಕ್ಕೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.