ರೇವಣ್ಣ ಮತ ಅಸಿಂಧುಗೊಳಿಸುವಂತೆ ಬಿಜೆಪಿ ದೂರು
ಬೆಂಗಳೂರು,ಜೂ.10- ಮಾಜಿ ಸಚಿವ ಹಾಗೂ ಜೆಡಿಎಸ್ ಪಕ್ಷದ ಏಜೆಂಟ್ ಎಚ್.ಡಿ.ರೇವಣ್ಣ ಅವರ ಮತವನ್ನು ಅಸಿಂಧುಗೊಳಿಸುವಂತೆ ಬಿಜೆಪಿ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದೆ. ಬೆಳಗ್ಗೆ ಮತದಾನ ನಡೆಯುವ ವೇಳೆ ತಮ್ಮ ಹಕ್ಕು ಚಲಾಯಿಸಿದ ಎಚ್.ಡಿ.ರೇವಣ್ಣ, ಕೆಪಿಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಏಜೆಂಟ್ ಆಗಿದ್ದ ಡಿ.ಕೆ.ಶಿವಕುಮಾರ್ಗೆ ತೋರಿಸಿ ಮತ ಚಲಾವಣೆ ಮಾಡಿದರು.
ನಿಯಮಗಳ ಪ್ರಕಾರ ಮತ ಚಲಾಯಿಸುವಾಗ ಆಯಾ ಪಕ್ಷದ ಏಜೆಂಟರಿಗೆ ತೋರಿಸಬೇಕು. ಅನ್ಯ ಪಕ್ಷಗಳ ಏಜೆಂಟರಿಗೆ ತೋರಿಸಿದರೆ ಆ ಮತವನ್ನು ಅಸಿಂಧುಗೊಳಿಸುವ ಸಾಧ್ಯತೆ ಇದೆ. ಬಿಜೆಪಿಯ ಚುನಾವಣಾ ಏಜೆಂಟ್ ಆಗಿರುವ ಸಿ.ಟಿ.ರವಿ ಅವರು ಚುನಾವಣಾಧಿಕಾರಿ ವಿಶಾಲಾಕ್ಷಿಯವರಿಗೆ ರೇವಣ್ಣನವರ ಮತವನ್ನು ಅಸಿಂಧುಗೊಳಿಸುವಂತೆ ದೂರು ನೀಡಿದ್ದಾರೆ.
ಅಲ್ಲದೆ ವಿಧಾನಪರಿಷತ್ನ ಕಾಂಗ್ರೆಸ್ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಕೂಡ ರೇವಣ್ಣ ಮತವನ್ನು ಅಸಿಂಧುಗೊಳಿಸಬೇಕೆಂದು ದೂರು ಸಲ್ಲಿಸಿದ್ದಾರೆ. ಆದರೆ ಈ ಆರೋಪವನ್ನು ನಿರಾಕರಿಸಿರುವ ರೇವಣ್ಣ ನಾನೇಕೆ ಬೇರೆಯವರಿಗೆ ತೋರಿಸಿ ಮತ ಚಲಾಯಿಸಲಿ. ಇವೆಲ್ಲ ಕಟ್ಟುಕಥೆ ಎಂದು ತಿರುಗೇಟು ನೀಡಿದ್ದಾರೆ.