ಬೆಂಗಳೂರು,ಫೆ.16-ಸಂಸದ ಪ್ರಜ್ವಲ್ ರೇವಣ್ಣ ಅವರು 19 ವರ್ಷ ತುಂಬಿದ ನಂತರ ಬ್ಯಾಂಕ್ ಖಾತೆಯನ್ನು ತೆರೆದಿದ್ದು, 15ನೇ ವರ್ಷದಲ್ಲೇ 26 ಕೋಟಿ ರೂ. ಹೊಂದಿದ್ದರು ಎಂಬ ಆರೋಪ ಆಧಾರ ರಹಿತವಾಗಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪಾದನೆಗೆ ಸಂಬಂದಿಸಿದ ದಾಖಲೆ ಇದ್ದರೆ ಸಾಬೀತು ಪಡಿಸಲಿ. 18 ವರ್ಷ ತುಂಬುವವರೆಗೂ ಪ್ರಜ್ವಲ್ ಅವರು ಯಾವುದೇ ಬ್ಯಾಂಕ್ ಖಾತೆ ಹೊಂದಿರಲಿಲ್ಲ. 18 ವರ್ಷ ತುಂಬಿದ ನಂತರ ನಾನೇ 4 ಎಕರೆ ಜಮೀನು ಕೊಟ್ಟಿದ್ದೇನೆ. 19ನೇ ವರ್ಷದಲ್ಲಿ ಬ್ಯಾಂಕ್ ಖಾತೆ ತೆರೆದಿದ್ದಾರೆ. ಬ್ಯಾಂಕ್ ಖಾತೆ ಇಲ್ಲದ ಮೇಲೆ 26 ಕೋಟಿ ಹಣ ಎಲ್ಲಿಂದ ಬರಬೇಕು ಎಂದು ಪ್ರಶ್ನಿಸಿದರು.
ಆದಾಯ ತೆರಿಗೆ ಇಲಾಖೆಗೆ ರಿಟರ್ನ್ ಸಲ್ಲಿಸುತ್ತಾ ಬಂದಿದ್ದು, ಏನಾದರೂ ವ್ಯತ್ಯಾಸವಿದ್ದರೆ ಅವರೇ ನೋಟಿಸ್ ಕೊಡುತ್ತಾರೆ ಎಂದರು.
ನಮ್ಮ ಕುಟಂಬ ಯಾವುದೇ ಸರ್ಕಾರದ ಗೋಮಾಳವನ್ನು ಹೊಂದಿದ್ದರೆ ಸರ್ಕಾರ ಇಂದೇ ಮುಟ್ಟುಗೋಲು ಹಾಕಿಕೊಳ್ಳಲಿ. ನಮ್ಮ ಕುಟುಂಬದ ಆರೋಪದ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಯುತ್ತಿದ್ದು, ಅದರ ಹಿಂದೆ ಯಾರಿದ್ದಾರೆ ಎಂಬುದು ಕಾಲ ಬಂದಾಗ ತಿಳಿಸುತ್ತೇನೆ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಹಲವು ಆರೋಪಗಳು ಈ ಹಿಂದೆ ಬಂದಿದ್ದವು. ಯಾವುದೂ ಸಹ ಸಾಬೀತು ಆಗಲಿಲ್ಲ ಎಂದರು. ಪೀಣ್ಯ ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಕಾಮಗಾರಿ ಕಳಪೆಯಾಗಿದ್ದರೆ ಸಂಬಂಸಿದ ಅಕಾರಿ ಹಾಗೂ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲಿ. ಮುಖ್ಯಮಂತ್ರಿ ಅವರು ಬೆಂಗಳೂರು ನಗರಾಭಿವೃದ್ಧಿ ಉಸ್ತುವಾರಿ ಹೊಣೆಯನ್ನು ಹೊಂದಿದ್ದಾರೆ. ಅವರೇ ಹೇಳಬೇಕು.
ಕಳಪೆ ಕಾಮಗಾರಿಯಾಗಿದ್ದರೆ ತನಿಖೆ ಮಾಡಲಿ. ಅದಕ್ಕೆ ಕಾರಣರಾದವರಿಂದ ವಸೂಲಿ ಮಾಡಲಿ. ತಾಂತ್ರಿಕವಾಗಿ ಮೇಲ್ಸೇತುವೆಯಲ್ಲಿ ದೋಷವಿದ್ದರೆ ಕ್ರಮ ಕೈಗೊಳ್ಳಲಿ ಎಂದರು. ಹಾಸನ-ಬೆಂಗಳೂರು ಹೆದ್ದಾರಿ ನಿರ್ಮಾಣ ಮಾಡಿಲ್ಲವೆ. ಅದರಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಿಲ್ಲವೆ ಎಂದು ರೇವಣ್ಣ ಇದೇ ವೇಳೆ ಪ್ರಶ್ನಿಸಿದರು.
