ಬಿ.ಎಲ್.ಸಂತೋಷ್ ವಿರುದ್ಧ ರೊಚ್ಚಿಗೆದ್ದ ಹೆಚ್.ಡಿ.ಕುಮಾರಸ್ವಾಮಿ

Social Share

ಬೆಂಗಳೂರು: ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೆಗೌಡರ ಕುಟುಂಬ, ಜಾತ್ಯತೀತ ಜನತಾದಳ ಹಾಗೂ ಪಂಚರತ್ನ ಯೋಜನೆಗಳ ಬಗ್ಗೆ ಲಘುವಾಗಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ವಿರುದ್ದ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಅವನ್ಯಾರೋ ಜೋಳಿಗೆ ಇಡ್ಕೊಂಡು ಓಡಾಡೋನು ಏನೋ‌ ಹೇಳಿದ್ದಾನೆ. ಕರ್ನಾಟಕಕ್ಕೂ ನಿನಗೂ ಏನ್ ಸಂಬಂಧ, ಕರ್ನಾಟಕಕ್ಕೆ ನಿನ್ನ ಕೊಡುಗೆ ಏನು? ಎಂದು ಸಂತೋಷ್ ಅವರನ್ನು ಪ್ರಶ್ನಿಸಿದರು.

ಮಿಸ್ಟರ್ ಸಂತೋಷ್, ಲೂಟಿ ದರೋಡೆ ಮಾಡಿ ಕರ್ನಾಟಕ ಹಣವನ್ನ ಕೊಂಡೊಯ್ದಿದ್ದೀರಾ. ಸಂತೋಷವಾಗಿದ್ದೀರಂತೆ ಲೂಟಿ ಹೊಡೆದು. ರಾಜ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಮಾಡುವವರು, ವಾಮಾಚಾರ ಮಾಡುವವರಿಂದ ಹಣ ತೆಗೆದುಕೊಂಡು ಅಪರೇಶನ್ ಕಮಲ ಮಾಡಿ ನಮ್ಮ‌ ಸರ್ಕಾರ ತೆಗೆದಿರಿ ಎಂದು ಸಂತೋಷ್ ವಿರುದ್ಧ ಕಿಡಿಕಾರಿದರು.

ಪ್ರಧಾನಗಳ ಬಳಿ ಕೇಳಿ, ನಮ್ಮ ಕುಟುಂಬದ ಏನು ಅಂತ. ನಮ್ಮ ಮನೆತನ, ಮಾಜಿ ಪ್ರಧಾನಿಗಳ ಹೇಳ್ತಾರೆ. ಲಘುವಾಗಿ ನಮ್ಮ ಪಕ್ಷದ ಬಗ್ಗೆ ಮಾತನಾಡಬೇಡಿ. 2023ಕ್ಕೆ ನಿಮ್ಮ ಪರಿಸ್ಥಿತಿ ಏನಾಗಿರುತ್ತದೆ ಎನ್ನುವುದನ್ನು ಒಮ್ಮೆ ಊಹೆ ಮಾಡಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮದು 40% ಸರ್ಕಾರ. ನಮ್ಮ ಬಗ್ಗೆ ಮಾತಾಡಲು ನೈತಿಕತೆ ನಿಮಗೆ ಇಲ್ಲ. ಮೋದಿ ಹೆಸರಿನಲ್ಲಿ ಹೊಟ್ಟೆಪಾಡು ನೋಡ್ಕೊಂಡಿರೋರು ನೀವು. ನಾನು ಸರಕಾರ ಮಾಡೋಣ ಎಂದು ನಿಮ್ಮ ಮನೆ ಬಾಗಿಲಿಗೆ ಬಂದಿರಲಿಲ್ಲ. ಯಾರು ಯಾರ ಮನೆ ಬಾಗಿಲಿಗೆ ಬಂದಿದ್ದರು ಎನ್ನುವುದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತು. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತಾಡ್ಬೇಡಿ ಮಿಸ್ಟರ್ ಅಶೋಕ್, ಮಿಸ್ಟರ್ ಸಂತೋಷ್ ಎಂದು ಸಂತೋಷ್ ಹಾಗೂ ಕಂದಾಯ ಸಚಿವ ಆರ್ ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯವರು ದರೋಡೆಕೋರರು, ಲೂಟಿಕೋರರು. ಇಂಥ ಬಿಜೆಪಿಯವರ ಜತೆ ಸೇರಿ ನಾನು ಸರ್ಕಾರ ನಡೆಸುವುದಕ್ಕೆ ಆಗುತ್ತಾ? ಪಂಚರತ್ನ ಯೋಜನೆಗಳನ್ನು ಜಾರಿ ಮಾಡುವುದಕ್ಕೆ ಆಗುತ್ತಾ? 2023ರ ಚುನಾವಣೆ ನಂತರ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತದೆ. ಆಗ ಬಿಜೆಪಿಯವರು ನಮ್ಮ ಮುಂದೆ ಅರ್ಜಿ ಹಿಡಿದು ಬರುತ್ತಾರೆ ನೋಡೋಣ. ಸಮಾಜವನ್ನು ಒಡೆಯುವ, ಜನರ ನಡುವೆ ದ್ವೇಷ ಬಿತ್ತುವ ಇಂಥವರ ಜತೆ ಸರಕಾರ ರಚನೆ ಮಾಡಲು ಸಾಧ್ಯವೇ? ಎಂದು ಮಾಜಿ ಮುಖ್ಯಮಂತ್ರಿ ಅವರು ಕೇಳಿದರು.

ಸಚಿವ ಅಶೋಕ್ ಮೇಲೆ ಹರಿಹಾಯ್ದ ಕುಮಾರಸ್ವಾಮಿ ಅವರು, ಬಾಯಿಗೆ ಬಂದ ಹಾಗೆ ಮಾತನಾಡಬೇಡಿ. ಚುನಾವಣೆ ಅದ ಮೇಲೆ ಮಾತನಾಡಿ ಎಂದು ಟಾಂಗ್ ಕೊಟ್ಟರು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಭೋಜೆಗೌಡ, ಮಾಜಿ ಸದಸ್ಯ ಹೆಚ್.ಎಂ.ರಮೇಶಗೌಡ ಮುಂತಾದವರು ಉಪಸ್ಥಿತರಿದ್ದರು.

#HDK, #BLSantosh,

Articles You Might Like

Share This Article