ರಾಮನಗರದಲ್ಲಿ ಅದ್ದೂರಿಯಾಗಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ನೆರವೇರಿಸಿದ ಹೆಚ್ಡಿಕೆ ಫ್ಯಾಮಿಲಿ

Social Share

ಬೆಂಗಳೂರು, ಡಿ.17-ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗಾವಾಗಿ ನಿನ್ನೆ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಡಗರ ಸಂಭ್ರಮ, ಶ್ರದ್ಧಾಭಕ್ತಿಯಿಂದ ನೆರವೇರಿತು.

ರಾಮನಗರದಲ್ಲಿ ಮೊದಲ ಬಾರಿಗೆ ತಿರುಪತಿಯ ವಿಗ್ರಹ ತಂದು ಶ್ರೀನಿವಾಸ ಕಲ್ಯಾಣ ಮಹೋತ್ಸವ ನಡೆಸಲಾಯಿತು. ತಿರುಪತಿ ದೇವಾಲಯದ ಮಾದರಿಯಲ್ಲಿ ವೇದಿಕೆ ನಿರ್ಮಿಸಿದ್ದು, ವಿಶೇಷ ಆಕಷಣೀಯವಾಗಿತ್ತು. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಹೀಗಾಗಿ ನಿನ್ನೆ ಇಡೀ ದಿನ ರಾಮನಗರದಲ್ಲಿ ಕುಮಾರಸ್ವಾಮಿ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿತ್ತು.

ತಿರುಪತಿಯಿಂದ ಆಗಮಿಸಿದ್ದ ಪುರೋಹಿತರ ತಂಡದ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣದ ಧಾರ್ಮಿಕ ಪೂಜಾಕೈಂಕರ್ಯಗಳು ನೆರವೇರಿದವು.
ದೇವರ ದರ್ಶನ ಮಾಡಲು ರಾಮನಗರ ಜನತೆಗೆ ಅವಕಾಶ ಮಾಡಿಕೊಡಲಾಗಿತ್ತು. ಲೈವ್ ಸ್ಟ್ರೀಮಿಂಗ್ ಮೂಲಕ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮವನ್ನು ನೋಡಲು ಭಕ್ತರಿಗೆ ಅನುಕೂಲವಾಗುವಂತೆ ದೊಡ್ಡ ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗತ್ತು. ನಿನ್ನೆ ಸಂಜೆ ಪ್ರಾರಂಭವಾದ ಶ್ರೀನಿವಾಸ ಕಲ್ಯಾಣವು ರಾತ್ರಿ 10 ಗಂಟೆಯವರೆಗೆ ನಡೆಯಿತು.

ಕಲ್ಯಾಣೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ತಿರುಪತಿ ಲಡ್ಡನ್ನು ಪ್ರಸಾದವಾಗಿ ವಿತರಿಸಲಾಯಿತು.ಕಲ್ಯಾಣೋತ್ಸವಕ್ಕೂ ಮುನ್ನ ದೇವರ ವಿಗ್ರಹಗಳು ಮೆರವಣಿಗೆಯನ್ನು ನಗರದಲ್ಲಿ ನಡೆಸಲಾಯಿತು. 11 ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರಗು ನೀಡಿದವು. ಕಲ್ಯಾಣೋತ್ಸವಕ್ಕೂ ಮುನ್ನ ರಾಮನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು. ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಬ್ಯಾನರ್‍ಗಳನ್ನು ಅಳವಡಿಸಿ ಶುಭಾಶಯ ಕೋರುತ್ತಿರುವ ಪೊಸ್ಟರ್‍ಗಳು ಎಲ್ಲೆಡೆ ರಾರಾಜಿಸುತ್ತಿದ್ದವು ಚಾಮುಂಡೇಶ್ವರಿ ಹಬ್ಬದ ವೇಳೆ ಮನೆ ಮಾಡಿದ್ದ ಸಂಭ್ರಮ ಮರುಕಳಿಸಿಂತೆ ಭಾಸವಾಗಿತ್ತು. ಒಟ್ಟಾರೆ ರಾಮನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡಿತ್ತು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಚೆನ್ನಮ್ಮ ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ, ಶಾಸಕರಾದ ಅನಿತಾ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿ ಸೇರಿದಂತೆ ಕುಟುಂಬದ ಸದಸ್ಯರು ಶ್ರೀನಿವಾಸ ಕಲ್ಯಾಣ ಮಹೋತ್ಸವದಲ್ಲಿ ಭಾಗಿಯಾಗಿದ್ದರು.

ಅಲ್ಲದೆ, ಶಾಸಕರಾದ ಸಿ.ಎಸ್.ಪುಟ್ಟರಾಜು, ಸಿ.ಎನ್.ಬಾಲಕೃಷ್ಣ, ಬಂಡೆಪ್ಪ ಕಾಶೆಂಪೂರ್, ಟಿ.ಎ.ಶರವಣ, ಸೇರಿದಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.

#SrinivasaKalyanaMahotsava

Articles You Might Like

Share This Article