ರಾಜ್ಯಗಳ ಹಕ್ಕು, ಸ್ವಾತಂತ್ರ್ಯ ಕಸಿದು ಕೇಂದ್ರ ಸಂಭ್ರಮಿಸುತ್ತಿದೆ : ಎಚ್‌ಡಿಕೆ

Spread the love

ಬೆಂಗಳೂರು, ಜು.3- ಜಿಎಸ್ ಟಿಗೆ ರಾಜ್ಯಗಳನ್ನು ಸೇರಿಸಿಕೊಳ್ಳುವಾಗ ಪರಿಹಾರ ನೀಡುವುದಾಗಿ ಹೇಳಿದ್ದ ಕೇಂದ್ರ ಸರ್ಕಾರವು ರಾಜ್ಯಗಳನ್ನು ವಂಚಿಸಿದೆ. ಇದಕ್ಕಾಗಿ ರಾಜ್ಯಗಳು ಸಂಭ್ರಮಿಸಬೇಕೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಜಿಎಸ್ ಟಿಗೆ 4 ವರ್ಷವಾಗಿದ್ದಕ್ಕೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ತೆರಿಗೆ ಮೇಲಿದ್ದ ರಾಜ್ಯಗಳ ಹಕ್ಕು, ಸ್ವಾತಂತ್ರ್ಯ ಕಸಿದು, ಹೊಟ್ಟೆ ತುಂಬಿಸಿಕೊಂಡಿದ್ದಕ್ಕೆ ಕೇಂದ್ರ ಸಂಭ್ರಮಿಸಲೇಬೇಕು ಎಂದು ಅವರು ಟೀಕಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜ್ಯಕ್ಕೆ 9 ಸಾವಿರ ಕೋಟಿ ರೂಪಾಯಿಯಷ್ಟು ಜಿಎಸ್ ಟಿ ಪರಿಹಾರ ಬರಬೇಕು. ಈ ಸಂಭ್ರಮದ ವೇಳೆಯಲ್ಲೇ ಪರಿಹಾರ ಬಿಡುಗಡೆ ಆಗಿದ್ದರೆ ಕರ್ನಾಟಕವೂ ಸಂಭ್ರಮಿಸುತ್ತಿತ್ತು. ಕೋವಿಡ್‌ ಕಾಲದಲ್ಲಿ ಆದಾಯವಿಲ್ಲದೇ ನಲುಗಿರುವ ರಾಜ್ಯಕ್ಕೆ ಪರಿಹಾರದ ಸಿಕ್ಕಿದ್ದಿದ್ದರೆ ಅನುಕೂಲವಾಗುತ್ತಿತ್ತು. ಆದರೆ, ಪರಿಹಾರ ನೀಡದ ಕೇಂದ್ರ ರಾಜ್ಯಗಳ ನೋವಿನ ಮೇಲೆ ಸಂಭ್ರಮಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯಗಳ ಅದಾಯವನ್ನು ಕೇಂದ್ರಕ್ಕೆ ತಿರುಗಿಸಿಕೊಳ್ಳುವುದು, ಅನುದಾನಕ್ಕಾಗಿ ರಾಜ್ಯಗಳು ಕೇಂದ್ರದ ಮುಂದೆ ಗುಲಾಮರಂತೆ ನಿಲ್ಲುವಂತೆ ಮಾಡುವುದು ಜಿಎಸ್ ಟಿಯ ಉದ್ದೇಶ. ಇಂಥ ಗುಲಾಮಗಿರಿಯನ್ನು ಕಾಂಗ್ರೆಸ್‌ ರೂಪಿಸಿತು, ಬಿಜೆಪಿ ಜಾರಿಗೆ ತಂದಿತು. ಈಗ ರಾಜ್ಯಗಳು ಪರಿಹಾರಕ್ಕಾಗಿ ಬೇಡುವಂತಾಗಿದೆ. ಪೆಟ್ರೋಲಿಯಂಅನ್ನು ಜಿಎಸ್ ಟಿಗೆ ಸೇರಿಸದಂತೆ ಹೋರಾಡುವಂತಾಗಿದೆ ಎಂದು ಅವರು ಅಸಮಾಧಾಬ ವ್ಯಕ್ತಪಡಿಸಿದ್ದಾರೆ.

ಈ ಒಕ್ಕೂಟದಲ್ಲಿ ರಾಜ್ಯಗಳ ಆರ್ಥಿಕ ಸ್ವಾಯತ್ತತೆಯನ್ನು ಹರಣ ಮಾಡಿದ್ದಕ್ಕೆ ದ್ಯೋತಕವಾಗಿ ಜಿಎಸ್‌ಟಿ ವ್ಯವಸ್ಥೆ ದೈತ್ಯವಾಗಿ ನಿಂತಿದೆ. ರಾಜ್ಯಗಳನ್ನು ಶೋಷಿಸಿ ಕೇಂದ್ರವನ್ನು ಪೋಷಿಸಿದ ಅರ್ಥವ್ಯವಸ್ಥೆಯಾಗಿ ಜಿಎಸ್‌ಟಿ ಕಾಣಿಸುತ್ತಿದೆ. ಇಂಥ ಜಿಎಸ್‌ಟಿಯಿಂದ ರಾಜ್ಯಗಳು ಸಂಭ್ರಮಿಸುವುದು ಏನೂ ಇಲ್ಲ. ಇದು ಕಾಂಗ್ರೆಸ್‌–ಬಿಜೆಪಿಯ ಯಜಮಾನಿಕೆ ಸಂಕೇತ ಎಂದು ಅವರು ಟೀಕಿಸಿದ್ದಾರೆ.

ಜಿಎಸ್‌ಟಿ ರಾಜ್ಯಗಳ ಅನುದಾನ ಕಸಿಯಿತು. ಅದಕ್ಕೆ ಪರಿಹಾರವಾಗಿ ಸಾಮಾನ್ಯರ ಬದುಕನ್ನೇನಾದರೂ ಹಸನಾಗಿಸಿತೇ? ನವ ಉದ್ಯಮಿಗಳನ್ನು ಪ್ರೋತ್ಸಾಹಿಸಿದೆಯೇ? ಅದ್ಯಾವುದೂ ಆಗಿಲ್ಲ. ವ್ಯಾಪರಿಗಳ ಪರಿಸ್ಥಿತಿ ಹಿಂದಿಗಿಂತಲೂ ಈಗ ಏನಾದರೂ ಉತ್ತಮವಾಗಿದೆಯೇ? ಆದರೆ, ಪರಿಸ್ಥಿತಿ ಮಾತ್ರ ಭಿನ್ನವಾಗಿದೆ. ಇಂಥ ಜಿಎಸ್‌ಟಿ ವ್ಯವಸ್ಥೆಯಲ್ಲಿ ಸಂಭ್ರಮಿಸುವುದೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.

Facebook Comments