ಪರ್ಸಂಟೇಜ್ ವ್ಯವಸ್ಥೆಯೇ ಬೆಂಗಳೂರಿನ ಅದೋಗತಿಗೆ ಕಾರಣ : ಹೆಚ್ಡಿಕೆ

Social Share

ಬೆಂಗಳೂರು,ಅ.19- ಬೆಂಗಳೂರು ಈಗ ಗುಂಡಿಗಳೂರು, ಅಧ್ವಾನ ನಗರ, ಗುಂಡಿಗಳ ವ್ಯಾಲಿ ಎಂದಾಗಿದ್ದು, ಕಾಮಗಾರಿಗಳಲ್ಲಿನ ಪರ್ಸಂಟೇಜ್ ವ್ಯವಸ್ಥೆಯೇ ಇಂಥ ಕುಖ್ಯಾತಿಗೆ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ನಾಡಪ್ರಭು ಕೆಂಪೇಗೌಡರು ಕಟ್ಟಿದ ವಿಶ್ವಮಾನ್ಯ ನಗರ ಬೆಂಗಳೂರಿಗೆ ಪಿಂಚಣಿದಾರರೂರು, ಉದ್ಯಾನ ನಗರ, ಸಿಲಿಕಾನ್ ವ್ಯಾಲಿ ಎಂದೆಲ್ಲ ಹೆಸರುಗಳಿದ್ದವು.

ಈಗ ರಸ್ತೆಗುಂಡಿಗಳು ಸಾವಿನ ಗುಂಡಿಗಳಾಗಿವೆ. ನಗರದ ಲುಲೂ ಮಾಲ್ ಎದುರಿನ ರಸ್ತೆಯಲ್ಲಿ ಗುಂಡಿಗೆ ಇನ್ನೊಂದು ಜೀವ ಬಲಿಯಾದ ಮೇಲೆ ಎಚ್ಚೆತ್ತುಕೊಳ್ಳುವ ನಾಟಕ ನಡೆದಿದೆ. ಶಾಶ್ವತ ಪರಿಹಾರ ಎಲ್ಲಿ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಕೊಲೆಪಾತಕ ಗುಂಡಿಕೂಪಗಳು ಸರಣಿ ಸಾವುಗಳಿಗೆ ಕಾರಣವಾಗಿದ್ದರೆ, ಅದೇ ಗುಂಡಿಗಳು ಕೆಲವರಿಗೆ ಕಲ್ಪವೃಕ್ಷವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಜ್ಯ ಬಿಜೆಪಿ ಸರ್ಕಾರಕ್ಕೆ ರಸ್ತೆ ಗುಂಡಿಗಳೆಂದರೆ ಬಲು ಇಷ್ಟ. ಗುಂಡಿಗಳು ಬಿದ್ದಷ್ಟೂ ಕಿಸೆಗೆ ಹರಿದು ಬರಲಿದೆ ದುಡ್ಡು. ಇವರಿಗೆ ಹೈಕೋರ್ಟ್ ಛೀಮಾರಿ ಹಾಕಿದರೂ ನಾಚಿಕೆಯಿಲ್ಲ. ಜೈಲಿಗೆ ಅಟ್ಟುವುದಾಗಿ ಎಚ್ಚರಿಕೆ ಕೊಟ್ಟರೂ ಅಧಿಕಾರಿಗಳು ಭಂಡತನ ಬಿಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಗುಂಡಿ ಬಿದ್ದ ರಸ್ತೆಗಳು ರಾಜ್ಯದ ಗೌರವವನ್ನು ಮೂರಾಬಟ್ಟೆ ಮಾಡುತ್ತಿರುವುದು ಒಂದೆಡೆ, ಇನ್ನೊಂದೆಡೆ ಸರ್ಕಾರ ಜಾಗತಿಕ ಹೂಡಿಕೆದಾರರ ಸಮಾವೇಶ, ಜಾಗತಿಕ ತಂತ್ರಜ್ಞಾನ ಶೃಂಗ ನಡೆಸುತ್ತಿದೆ. ರಸ್ತೆ ಗುಂಡಿಗಳ ಶೃಂಗವನ್ನೂ ನಡೆಸಿದರೆ ಇನ್ನೂ ಚೆನ್ನಾಗಿರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ರಸ್ತೆ ಗುಂಡಿಗಳ ಸರಣಿ ಸಾವುಗಳಿಗೆ ರಾಜ್ಯ ಬಿಜೆಪಿ ಸರ್ಕಾರವೇ ನೇರ ಕಾರಣ. ಮುಗ್ಧ ಜನರು ಸಾವು ನೋವುಗಳಿಗೆ ಬಿಬಿಎಂಪಿಯೇ ಸಂಪೂರ್ಣ ಹೊಣೆ. ಸಂಬಂಧಪಟ್ಟ ಮಂತ್ರಿಗಳು, ಅಧಿಕಾರಿಗಳೇ ಇದಕ್ಕೆ ಉತ್ತರದಾಯಿಗಳು ಎಂದು ಆರೋಪಿಸಿದ್ದಾರೆ.

ಪಾಲಿಕೆ ಮಾಡಿದ ಪಾಪಕ್ಕೆ ನತದೃಷ್ಟ ಮಹಿಳೆ ಉಮಾದೇವಿ ಬಲಿಯಾಗಿದ್ದಾರೆ. ಅವರಿಗೆ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುವುದಲ್ಲ. ಇನ್ನಾದರೂ ಗುಂಡಿಗಳನ್ನು ಮುಚ್ಚಬೇಕು ಹಾಗೂ ರಸ್ತೆಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು ಎಂದಿದ್ದಾರೆ.

ಮೃತ ಮಹಿಳೆ ಉಮಾದೇವಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ರಾಜ್ಯ ಸರ್ಕಾರ ಅವರಿಗೆ ಸೂಕ್ತ ಪರಿಹಾರ ಬಿಡುಗಡೆ ಮಾಡಬೇಕು ಎಂದೂ ಒತ್ತಾಯಿಸಿದ್ದಾರೆ.

Articles You Might Like

Share This Article