ಜೆಡಿಎಸ್ ಕನ್ನಡಿಗರ ಎಟಿಎಂ : ಷಾಗೆ ಎಚ್‍ಡಿಕೆ ತಿರುಗೇಟು

Social Share

ಬೆಂಗಳೂರು, ಡಿ.31- ಜೆಡಿಎಸ್ ಸರ್ಕಾರ ಬಂದರೆ, ಅದು ಆರೂವರೆ ಕೋಟಿ ಕನ್ನಡಿಗರ ಎಟಿಎಂ ಆಗುತ್ತದೆ. ರೈತರ, ಕಾರ್ಮಿಕರ, ದೀನ ದಲಿತರ, ಅಶಕ್ತರ, ವಿಕಲಚೇತನರ ಎಟಿಎಂ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಸರಣಿ ಟ್ವೀಟ್ ಮೂಲಕ ಕೇಂದ್ರ ಗೃಹಸಚಿವ ಅಮಿತ್ ಷಾ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಜೆಡಿಎಸ್ ಗೆದ್ದರೆ ಕರ್ನಾಟಕ ಒಂದು ಕುಟುಂಬದ ಎಟಿಎಂ ಆಗುತ್ತದೆಂದು ಜಾಗಟೆ ಹೊಡೆದಿದ್ದೀರಿ ಎಂದು ಟೀಕಿಸಿದ್ದಾರೆ.

ಜೆಡಿಎಸ್ ಜನರ ಎಟಿಎಂ. ನಮ್ಮ ಪಾಲಿಗೆ ಎಟಿಎಂ ಎಂದರೆ ಎನಿ ಟೈಮ್ ಮನುಷ್ಯತ್ವ ಎಂದು. ನಿಮ್ಮ ಪಾಲಿಗೆ ಅದು ಎನಿ ಟೈಮ್ ಮೋಸ. ಸುಳ್ಳಿನ ಜಾಗಟೆ ಹೊಡೆದೇ ದೇಶವನ್ನು ಅಧೋಗತಿಗೆ ತಳ್ಳಿದ್ದೀರಿ. ಷಾ ಅವರೇ, ದೇಶದ ಮಾತು ಹಾಗಿರಲಿ, ಕರ್ನಾಟದಲ್ಲಿ ನಿಮ್ಮ ಪಕ್ಷದ ಎಟಿಎಂಗಳ ಪಟ್ಟಿ ಮೂಡಿದೆ ನೋಡಿ ಎಂದಿದ್ದಾರೆ.

ಪ್ರಧಾನಿಯಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದ ದೇವೇಗೌಡರು

ಕರ್ನಾಟಕದ ಬಿಜೆಪಿ ಎಟಿಎಂಗಳು: ಶೇ.40 ಕಮೀಷನ್, ಪಿಎಸ್‍ಐ ಹಗರಣ, ಪ್ರಶ್ನೆಪತ್ರಿಕೆ ಸೋರಿಕೆ, ಸಹ ಪ್ರಾಧ್ಯಾಪಕರ ನೇಮಕ ಹಗರಣ, ವೈದ್ಯ ಪ್ರಾಧ್ಯಾಪಕರ ನೇಮಕ ಹಗರಣ, ಕೋವಿಡ್‍ನಲ್ಲಿ ಕೊಳ್ಳೆ, ಕಾಸಿಗಾಗಿ ಪೋಸ್ಟಿಂಗ್, ಗಂಗಾಕಲ್ಯಾಣ ಕರ್ಮಕಾಂಡ, ಚಿಲುಮೆ ಹಗರಣ. ಇದು ಅಪೂರ್ಣ ಪಟ್ಟಿ. ಅದು ಕೂಡ ದೊಡ್ಡದಿದೆ. ಬೇಕಾ ಅಮಿತ್ ಷಾ ಅವರೇ ಎಂದು ಪ್ರಶ್ನಿಸಿದ್ದಾರೆ.

ಬರೀ ಬೂಟಾಟಿಕೆ ಪಾರ್ಟಿ (ಬಿಜೆಪಿ) ಸುಳ್ಳುಕೋರರ ಸಂತೆ ಎನ್ನುವುದಕ್ಕೆ ಮಂಡ್ಯದಲ್ಲಿ ಸುಖಾಸುಮ್ಮನೆ ಅಲವತ್ತುಕೊಂಡ ನಿಮ್ಮ ಅಸತ್ಯದ ಹಾಹಾಕಾರದ ವರಸೆಯೇ ಸಾಕ್ಷಿ. ಸ್ಥಳಕ್ಕೊಂದು ವೇಷ, ಕ್ಷಣಕ್ಕೊಂದು ಸುಳ್ಳು; ಇದು ನಿಮ್ಮ ಪಕ್ಷದ ನಿಜ ಸ್ವರೂಪ ಎಂದು ವಾಗ್ದಾಳಿ ನಡೆಸಿದ್ದಾರೆ.

ನೀವು ಸರ್ವಾಧಿಕಾರಿ ಹಿಟ್ಲರ್ ಸಂಪುಟದ ಗೊಬೆಲ್ಲನ ಹೊಸ ಅವತಾರ. ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳಬೇಕಾದ ಕರ್ಮ ನಿಮಗೇಕೆ ಬಂತು ಷಾ ಅವರೇ ಎಂದು ಪ್ರಶ್ನಿಸಿರುವ ಅವರು, ಕರ್ನಾಟಕದ ನಿಮ್ಮ ಬಿಜೆಪಿ ಸರ್ಕಾರ ಕೇವಲ ಶೇ.40 ಸರ್ಕಾರ ಅಲ್ಲವೇ ಅಲ್ಲ. ಅದು ಶೇ.55-60 ಸರ್ಕಾರ. ನಿಮಗೂ ಮಾಹಿತಿ ಇರುತ್ತದೆ, ಕರ್ನಾಟಕ ನಿಮ್ಮ ಪಕ್ಷಕ್ಕೂ ಎಟಿಎಂ ಹೌದಲ್ಲವೇ? ಈ ಸತ್ಯ ಯಾಕೆ ಮರೆಮಾಚಿದಿರಿ? ಮಂಡ್ಯ ಜನರ ಮುಂದೆ ನಿಮ್ಮ ದಮ್ಮು ತಾಕತ್ತು ನಡೆಯಲ್ಲ, ಅರಿತುಕೊಳ್ಳಿ ಎಂದು ಆರೋಪಗಳ ಸುರಿಮಳೆಗೈದಿದ್ದಾರೆ.

BREAKING : 42 ಐಎಎಸ್ ಅಧಿಕಾರಿಗಳ ವರ್ಗಾವಣೆ

ಇನ್ನು ಕುಟುಂಬದ ವಿಷಯ, ನಿಮ್ಮ ಪಕ್ಷದ ಕುಟುಂಬ ರಾಜಕಾರಣದ ಲೆಕ್ಕ ಗೊತ್ತಿಲ್ಲವೇ? ನಿಮ್ಮ ಸುಪುತ್ರ ಜಯ ಷಾ ಯಾವ ಸೀಮೆ ಕ್ರಿಕೆಟ್ ಪಂಡಿತರು ಎಂದು ಬಿಸಿಸಿಐನಲ್ಲಿ ಕೂತಿದ್ದಾರೆ? ಬಿಸಿಸಿಐನಲ್ಲಿ ಯಾರು ಇರಬೇಕು, ಇರಬಾರದೆಂದು ಸುಪ್ರೀಂ ಕೋರ್ಟಿನ ಸ್ಪಷ್ಟ ಆದೇಶವಿದೆ. ಆ ಆದೇಶಕ್ಕೆ ನಿಮ್ಮ ಮಗ ಅತೀತರೇ? ಈಗ ಹೇಳಿ, ಬಿಸಿಸಿಐ ಯಾರ ಪಾಲಿನ ಎಟಿಎಂ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕ ಬಿಜೆಪಿ ಕುಟುಂಬ ರಾಜಕಾರಣದ ಪಟ್ಟಿ: ಯಡಿಯೂರಪ್ಪ ಮತ್ತು ಮಕ್ಕಳು, ರವಿಸುಬ್ರಮಣ್ಯ – ತೇಜಸ್ವಿ ಸೂರ್ಯ, ಅಶೋಕ್ -ರವಿ, ವಿ.ಸೋಮಣ್ಣ ಮತ್ತು ಮಕ್ಕಳು, ಅರವಿಂದ ಲಿಂಬಾವಳಿ -ರಘು, ಎಸ್.ಆರ್.ವಿಶ್ವನಾಥ್ – ವಾಣಿ ವಿಶ್ವನಾಥ್, ಜಗದೀಶ್ ಶೆಟ್ಟರ್ – ಪ್ರದೀಪ್ ಶೆಟ್ಟರ್, ಮುರುಗೇಶ್ ನಿರಾಣಿ – ಹನುಮಂತ ನಿರಾಣಿ, ಜಿ.ಎಸ್. ಬಸವರಾಜು – ಜ್ಯೋತಿ ಗಣೇಶ್, ಜಾರಕಿಹೊಳಿ ಮತ್ತು ಸಹೋದರರು, ಜೊಲ್ಲೆ ಮತ್ತು ಜೊಲ್ಲೆ, ಅಂಗಡಿ ಕುಟುಂಬ, ಉದಾಸಿ ಕುಟುಂಬ, ಶ್ರೀರಾಮುಲು ಕುಟುಂಬ, ರೆಡ್ಡಿ ಮತ್ತು ರೆಡ್ಡಿ ಇದು ಕೂಡ ಅಪೂರ್ಣ ಪಟ್ಟಿಯೇ. ರಾಷ್ಟ್ರೀಯ ಪಟ್ಟಿ ಬೇಕಿದ್ದರೆ ಹೇಳಿ, ಇದರ ಹತ್ತರಷ್ಟಿದೆ ಎಂದಿದ್ದಾರೆ.

ಇವತ್ತು ಬೆಂಗಳೂರಿನಿಂದ ಹೊರಡುವ ಮುನ್ನ ಇದಕ್ಕೆಲ್ಲಾ ಉತ್ತರ ಕೊಡಿ ಅಮಿತ್ ಷಾ ಅವರೇ. ಎಷ್ಟಾದರೂ ನೀವು ಸ್ವಯಂ ಘೋಷಿತ ಸಾಚಾ ಅಲ್ಲವೇ? ಉತ್ತರ ಹೇಳಿ ಹೋದರೆ ನಾವೂ ಧನ್ಯರಾಗುತ್ತೇವೆ. ಸತ್ಯ ಅಜರಾಮರ, ಅಸತ್ಯ ನಿಮ್ಮ ಹಣೆಬರ. ಸತ್ಯದ ಮುಂದೆ ದಮ್ಮು ತಾಕತ್ತು ದುರ್ಬಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಹೊಂದಾಣಿಕೆ ರಾಜಕಾರಣದ ವಿರುದ್ಧ ಅಮಿತ್ ಶಾ ಆಕ್ರೋಶ

ಪಂಚರತ್ನ ರಥಯಾತ್ರೆ ನಿಮ್ಮ ಕಣ್ಣು ಕುಕ್ಕಿದೆ. ಸಾಲಮನ್ನಾ ನಿಮ್ಮ ನಿದ್ದೆಗೆಡಿಸಿದೆ. ಎಷ್ಟೇ ಆದರೂ ಕೇಂದ್ರದ ಸಹಕಾರ ಸಚಿವರಾದ ನಿಮಗೆ ಸಾಲಮನ್ನಾ ದುಃಸ್ವಪ್ನದಂತೆ ಕಾಡುತ್ತಿದೆ ಎನ್ನುವುದು ಗೊತ್ತು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ನನ್ನ ಸಾಧನೆಗಳು ನಿಮ್ಮ ಚಿಂತೆ ಹೆಚ್ಚಿಸಿವೆ. ಇನ್ನಾದರೂ ಸುಳ್ಳಿನ ಜಾಗಟೆ ಬಾರಿಸುವುದು ನಿಲ್ಲಿಸಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Articles You Might Like

Share This Article