ಪಿಎಸ್‍ಐ ಪರೀಕ್ಷಾ ಅಕ್ರಮ : ಹೆಡ್ ಕಾನ್‍ಸ್ಟೆಬಲ್ ಮನೆಯಲ್ಲಿ 1.5ಕೋಟಿ ಪತ್ತೆ..!

Spread the love

ಬೆಂಗಳೂರು,ಮೇ17- ಪಿಎಸ್‍ಐ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಕಾತಿ ವಿಭಾಗದ ಮುಖ್ಯಪೇದೆ(ಹೆಡ್ ಕಾನ್‍ಸ್ಟೆಬಲ್) ಮನೆಯಲ್ಲಿ 1.5 ಕೋಟಿ ನಗದು ಪತ್ತೆಯಾಗಿದೆ. ನೇಮಕಾತಿ ವಿಭಾಗದ ಹೆಡ್‍ಕಾನ್‍ಸ್ಟೆಬಲ್ ಶ್ರೀಧರ್ ಅವರ ಮನೆಯ ಮೇಲೆ ಸಿಐಡಿ ತನಿಖಾ ತಂಡ ದಾಳಿ ನಡೆಸಿದ ವೇಳೆ ಒಂದೂವರೆ ಕೋಟಿ ನಗದು, ಚಿನ್ನಾಭರಣ, ಬ್ಯಾಂಕ್ ದಾಖಲೆಗಳು, ಖಾಲಿ ಚೆಕ್‍ಗಳು ಪತ್ತೆಯಾಗಿವೆ.

ಬೆಂಗಳೂರಿನಲ್ಲಿ ಸಿಐಡಿ ತನಿಖಾ ತಂಡ ದಾಳಿ ನಡೆಸಿದಾಗ ಶ್ರೀಧರ್ ಮನೆಯಲ್ಲಿ ಇಷ್ಟು ದೊಡ್ಡ ಮಟ್ಟದ ನಗದು ಪತ್ತೆಯಾಗಿರುವುದು ಪಿಎಸ್‍ಐ ಅಕ್ರಮ ನೇಮಕಾತಿಗೆ ಬಲವಾದ ಪುಷ್ಟಿ ನೀಡಿದಂತಾಗಿದೆ. ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲೇ ಸಿಐಡಿ ಶ್ರೀಧರ್ ಅವರಿಗೂ ಬಲೆ ಬೀಸಿತ್ತು. ಪಿಎಸ್‍ಐ ಅಭ್ಯರ್ಥಿಗಳಿಂದ ಈ ಇಬ್ಬರು ಭಾರೀ ಪ್ರಮಾಣದ ವಸೂಲಿ ನಡೆದಿರುವುದನ್ನು ತನಿಖಾ ತಂಡ ಪತ್ತೆಹಚ್ಚಿದೆ.

ಈಗಾಗಲೇ ಬಂಧಿತ ಆರೋಪಿಗಳೆಲ್ಲರೂ ಸಿಐಡಿ ವಶದಲ್ಲಿದ್ದು ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳಿಂದ ಮುಂಗಡವಾಗಿಯೇ 60ರಿಂದ 80 ಲಕ್ಷದವರೆಗೂ ಹಣವನ್ನು ಪಡೆದಿದ್ದರು ಎಂದು ಶಂಕಿಸಲಾಗಿದೆ. ಶಾಂತಕುಮಾರ್ ಮತ್ತು ಶ್ರೀಧರ್ ಮನೆಯಲ್ಲಿ ಖಾಲಿ ಚೆಕ್‍ಗಳು ಸಿಕ್ಕಿಬಿದ್ದಿರುವುದು
ಈ ಅನುಮಾನಕ್ಕೆ ಇಂಬು ಕೊಟ್ಟಿದೆ.

Facebook Comments