ಹೆಡ್‍ಕಾನ್‍ಸ್ಟೆಬಲ್‍ಗೆ ಕೊರೊನಾ ದೃಢ, ರಾಯಚೂರು ಪೊಲೀಸ್ ಠಾಣೆ ಸೀಲ್‍ಡೌನ್

Spread the love

ರಾಯಚೂರು,ಜೂ.29- ಸಂಚಾರಿ ಠಾಣೆಯ ಹೆಡ್‍ಕಾನ್‍ಸ್ಟೆಬಲ್‍ಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಲ್ಲಿನ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಕಳೆದೆರಡು ದಿನಗಳ ಹಿಂದೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಬಳಿ ಕರ್ತವ್ಯದಲ್ಲಿದ್ದ ಹೆಡ್‍ಕಾನ್‍ಸ್ಟೆಬಲ್‍ಗೆ ಜ್ವರ ಕಾಣಿಸಿಕೊಂಡು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

ಅವರ ಗಂಟಲು ಧ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಪರೀಕ್ಷಾ ವರದಿ ಬಂದಿದ್ದು, ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ.  ವಿಷಯ ಗೊತ್ತಾಗುತ್ತಿದ್ದಂತೆ ಸಹೊದ್ಯೋಗಿಗಳು ಆತಂಕಗೊಂಡಿದ್ದಾರೆ. ಇಡೀ ಠಾಣೆಯನ್ನು ರಾಸಾಯನಿಕ ದ್ರಾವಣದಿಂದ ಸಿಂಪಡಿಸಿ ಸ್ವಚ್ಛಗೊಳಿಸಲಾಗಿದೆ.

ಹೆಡ್‍ಕಾನ್‍ಸ್ಟೆಬಲ್ ಅವರನ್ನು ಕೊರೊನಾ ಚಿಕಿತ್ಸಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈಗ ಒಟ್ಟು ಐದು ಮಂದಿ ಪೊಲೀಸರಿಗೆ ಕೊರೊನಾ ವಕ್ಕರಿಸಿದ್ದು, ಆತಂಕ ಹೆಚ್ಚಿಸಿದೆ.