ಕೋಲಾರ, ಮೇ 2- ಮಿತಿ ಮೀರಿದ ಬಿಸಿಲಿನ ತಾಪಕ್ಕೆ ಜನರು ತತ್ತರಿಸಿದ್ದು, ಸಾಕು ಪ್ರಾಣಿಗಳು ಸಹ ಬಿಸಿಲಿನಿಂದ ಬಸವಳಿದಿವೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕೋಳಿಗಳು ಬಿಸಿಲಿನ ತಾಪದಿಂದ ಬಳಲಿ ಮೃತಪಟ್ಟಿವೆ.
ಮುರುಘನ್ ಎಂಬುವರಿಗೆ ಸೇರಿದ ಕೋಳಿ ಫಾರಂನಲ್ಲಿ ಬಿಸಿಲಿನಿಂದ ಕೋಳಿಗಳು ಮೃತಪಟ್ಟಿದ್ದು, ಜೀವನೋಪಯಕ್ಕಾಗಿ ಕೋಳಿ ಸಾಕಾಣಿಕೆ ಮಾಡಿಕೊಂಡಿದ್ದ ಮುರುಘನ್ ಕುಟುಂಬ ಕಂಗಾಲಾಗಿದೆ.
ತೀವ್ರ ಶಾಖದ ಅಲೆ ಹಾಗೂ ಒಣಹವೆಯಿಂದಾಗಿ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ಕುರಿ, ಕೋಳಿ, ಪಕ್ಷಿಗಳ ಆರೋಗ್ಯದಲ್ಲೂ ಸಹ ಏರುಪೇರಾಗಿ ಸಾವನ್ನಪ್ಪುತ್ತಿರುವುದು ಕಂಡು ಬರುತ್ತಿವೆ. ರಾಜ್ಯಾದ್ಯಂತ ಬಿಸಿ ಗಾಳಿ ಕಾಣಿಸಿಕೊಂಡಿದ್ದು, ವರದಿ ಪ್ರಕಾರ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ.