ಲೇಬರ್ ಶೆಡ್ ಮೇಲೆ ಕಾಂಪೌಂಡ್ ಕುಸಿದ ಕಾರ್ಮಿಕ ಸಾವು, 5 ಲಕ್ಷ ಪರಿಹಾರ

Bangalore--01

ಬೆಂಗಳೂರು, ಜೂ.2- ಕಾಂಪೌಂಡ್ ಕುಸಿದು ಲೇಬರ್ ಶೆಡ್‍ಮೇಲೆ ಬಿದ್ದ ಪರಿಣಾಮ ಕಟ್ಟಡ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗುಲ್ಬರ್ಗ ಮೂಲದ ಮಹಂತೇಶ್ (25) ಮೃತಪಟ್ಟ ಕಾರ್ಮಿಕ. ಐಟಿಐ ಲೇಔಟ್ ಬಾಲಾಜಿನಗರದ ಬಳಿಯ ಕೃಷ್ಣ ಕಾಲೇಜು ಸಮೀಪ ಕಾಂಪ್ಲೆಕ್ಸ್ ಕಟ್ಟಡದ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಟ್ಟಡ ಕಾರ್ಮಿಕರು ಉಳಿದುಕೊಳ್ಳಲು ಇಲ್ಲಿ ಶೆಡ್‍ಗಳನ್ನು ನಿರ್ಮಿಸಲಾಗಿದೆ. ಶೆಡ್‍ಗೆ ಹೊಂದಿಕೊಂಡಂತೆ ಕಾಂಪೌಂಡ್ ಕಟ್ಟಲಾಗಿತ್ತು.

ರಾತ್ರಿ ಬಿದ್ದ ಮಳೆಯಿಂದಾಗಿ 12.30ರಲಲಿ ಕಾಂಪೌಂಡ್ ಕುಸಿದು ಕಾರ್ಮಿಕರ ಶೆಡ್ ಮೇಲೆ ಬಿದ್ದಿದೆ. ಪರಿಣಾಮವಾಗಿ ಶೆಡ್‍ನಲ್ಲಿ ಮಲಗಿದ್ದ ಕಾರ್ಮಿಕರಾದ ಮಹಂತೇಶ್ (25) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಪಾರ್ವತಿ (20), ಶೋಭಾ (25), ಶರಣಪ್ಪ (21) ಎಂಬುವರು ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಶವವನ್ನು ಕೆಂಪೇಗೌಡ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಈ ಬಗ್ಗೆ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

5 ಲಕ್ಷ ಪರಿಹಾರ:

ನಿನ್ನೆ ಬಿದ್ದ ಮಳೆಯಿಂದ ಕಾಂಪೌಂಡ್ ಕುಸಿದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಮೇಯರ್ ಸಂಪತ್‍ರಾಜ್ ಅವರು 5 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಇಂದು ಬೆಳಗ್ಗೆ ಕೆಂಪೇಗೌಡ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡಿರುವ ಮೂವರ ಆರೋಗ್ಯ ವಿಚಾರಿಸಿ ಮಾತನಾಡಿದರು. ಮೃತಪಟ್ಟ ಮಾಲತೇಶ್ (30) ಕುಟುಂಬದವರಿಗೆ 5 ಲಕ್ಷ ಪರಿಹಾರ ನೀಡುತ್ತೇವೆ. ಮೂವರು ಕಾರ್ಮಿಕರ ಚಿಕಿತ್ಸಾ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸುವುದಾಗಿ ಸಂಪತ್‍ರಾಜ್ ಹೇಳಿದರು.

Sri Raghav

Admin