ಬೆಂಗಳೂರು, ಆ.27- ರಾಜಧಾನಿ ಸೇರಿದಂತೆ ರಾಜ್ಯದ ವಿವಿಧೆಡೆ ವರುಣನ ಆರ್ಭಟ ಮುಂದುವರೆದಿದ್ದು, ಭಾರೀ ಅನಾಹುತ ಸೃಷ್ಟಿಸಿದೆ. ಕಳೆದ ರಾತ್ರಿ ಬೆಂಗಳೂರು, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಕಲಬುರಗಿ, ಗದಗ ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ರಾತ್ರಿಯಿಡಿ ಜಾಗರಣೆ ಮಾಡುವಂತಾಗಿತ್ತು.
ಕೋಲಾರ: ರಾತ್ರಿ ಸುರಿದ ಮಳೆಗೆ ಕೋಳಿಫಾರಂಗೆ ನೀರು ನುಗ್ಗಿದ ಪರಿಣಾಮ ಸುಮಾರು ಸಾವಿರ ಕೋಳಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಚಲುವನಹಳ್ಳಿಯಲ್ಲಿ ನಡೆದಿದೆ. ಚೌಡಪ್ಪ ಎಂಬುವವರಿಗೆ ಸೇರಿದ ಕೋಳಿಫಾರಂಗೆ ರಾತ್ರಿ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದ ಪರಿಣಾಮ ಸಾವಿರಾರು ಕೋಳಿಗಳು ಸಾವನ್ನಪ್ಪಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಇನ್ನು ಶಾಂತಿನಗರ, ರಹಮತ್ ನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಎಲೆಕ್ಟ್ರಾನಿಕ್ ಉಪಕರಣಗಳು, ದಿನಸಿ ಪದಾರ್ಥಗಳು ನೀರಿನಲ್ಲಿ ನಾಶವಾಗಿವೆ. ಜಮೀನುಗಳಿಗೂ ನೀರು ನುಗ್ಗಿದ ಪರಿಣಾಮ ಕೈಗೆ ಬಂದ ಟೊಮ್ಯಾಟೊ, ರಾಗಿ ಸೇರಿದಂತೆ ತರಕಾರಿ ಬೆಳೆಗಳು ನಾಶವಾಗಿವೆ.
ಕೋರಟಗೆರೆ: ತಾಲೂಕಿನಾದ್ಯಂತ ಸುರಿದ ಮಳೆಯಿಂದಾಗಿ ಪುಣ್ಯಕ್ಷೇತ್ರ ಗೊರವನಹಳ್ಳಿ -ತೀತಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು ಬಿದ್ದಿದ್ದು, ಸಂಚಾರ ವ್ಯತ್ಯಯ ವಾಗಿದೆ. ಸ್ಥಳಕ್ಕೆ ಶಾಸಕರಾದ ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿ ತುರ್ತು ದುರಸ್ತಿಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರಿನ ಮಳೆಗೆ ಅಕ್ಷರಶಃ ಜನಜೀವನ ಅಸ್ತವ್ಯಸ್ತವಾಗಿತ್ತು. ರಸ್ತೆಗಳಲ್ಲಿ ನೀರು ನಿಂತು ದ್ವಿಚಕ್ರವಾಹನ ಸವಾರರು ಪರದಾಡುವಂತಾಗಿತ್ತು. ಬೊಮ್ಮನಹಳ್ಳಿ ಕ್ಷೇತ್ರದ ಬಿಳೇಕಲ್ಲಳ್ಳಿಯ ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ನುಗ್ಗಿ ಪರದಾಡುವಂತಾಗಿತ್ತು. ಪದೇ ಪದೇ ಮಳೆಯಾದಾಗಲೂ ಮನೆಗಳಿಗೆ ನೀರು ನುಗ್ಗುತ್ತಲೇ ಇದ್ದರೂ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳದ ಪಾಲಿಕೆ ವಿರುದ್ಧ ಜನರು ಶಾಪ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕಣ್ಮಿಣಿಕೆ ಕೆರೆ ನೀರು ನುಗ್ಗಿದ ಪರಿಣಾಮ ಬೆಂಗಳೂರು-ಮೈಸೂರು ರಸ್ತೆಯ ಕುಂಬಳಗೋಡು ಸಮೀಪ ಚರಂಡಿಯ ನೀರು ರಸ್ತೆಗೆ ಹರಿದಿದೆ. ಇದರಿಂದ ರಸ್ತೆ ಸಂಪೂರ್ಣವಾಗಿ ಕೆರೆಯಂತಾಗಿದ್ದು, ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಸುಮಾರು ಗಂಟೆಗಟ್ಟಲೆ ವಾಹನಗಳು ನಿಂತಲ್ಲೇ ಕಿಲೋ ಮೀಟರ್‍ಗಟ್ಟಲೆ ನಿಲ್ಲಬೇಕಾಯಿತು.






ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋದ ಲಾರಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ವಡಗೇರಿ ತಾಲ್ಲೂಕಿನ ಮಧುರಕಲ್ ಗ್ರಾಮದ ಬಳಿ ನಡೆದಿದೆ. ಭಾರೀ ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಚಾಲಕ ಸಿಮೆಂಟ್ ತುಂಬಿದ್ದ ಲಾರಿಯನ್ನು ಚಲಾಯಿಸಿದ್ದು, ಸೆಳೆತಕ್ಕೆ ಕೊಚ್ಚಿಹೋಗಿದೆ. ಜೀವ ಉಳಿಸಿಕೊಳ್ಳಲು ಚಾಲಕ ಲಾರಿ ಮೇಲೆ ರಕ್ಷಣೆಗಾಗಿ ಜನರನ್ನು ಅಂಗಲಾಚುತ್ತಿದ್ದ ದೃಶ್ಯ ಕಂಡುಬಂತು.
ಚನ್ನಪಟ್ಟಣ ತಾಲ್ಲೂಕಿನಾದ್ಯಂತ ರಾತ್ರಿ ಸುರಿದ ಮಳೆಗೆ ಭಾರೀ ಅನಾಹುತವೇ ಸಂಭವಿಸಿದೆ. ಲಾಲಘಟ್ಟ ಬಳಿ ಇರುವ ರಂಗನಾಥ ರೈಸ್‍ಮಿಲ್‍ಗೆ ನೀರು ನುಗ್ಗಿದ ಪರಿಣಾಮ ಸುಮಾರು 300 ಕ್ವಿಂಟಾಲ್ ಭತ್ತ, 100 ಕ್ವಿಂಟಾಲ್ ಅಕ್ಕಿ ನೀರು ನೀರು ಪಾಲಾಗಿದೆ.
ಮಂಡ್ಯ ಜಿಲ್ಲೆಯ ಕದಲೂರಿನಲ್ಲಿ ಮನೆಯ ಗೋಡೆ ಕುಸಿದು ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೊಡ್ಡಗರುಡಹಳ್ಳಿಯ ವಿಸಿ ನಾಲೆ ಒಡೆದು ಅಪಾರ ಪ್ರಮಾಣದ ನೀರು ಜಮೀನುಗಳಿಗೆ ಹರಿದ ಪರಿಣಾಮ ಬೆಳೆಗಳು ಜಲಾವೃತಗೊಂಡು ನಾಶವಾಗಿವೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಗುಡಿಬಂಡೆಯ ಅಮಾನಿ ಭೈರಸಾಗರ ಕೆರೆ ಕೋಡಿ ಹರಿದು ರಸ್ತೆ ಮೇಲೆ ಸುಮಾರು 3 ಅಡಿ ನೀರು ಹರಿಯುತ್ತಿದ್ದು, ಪೆರೇಸಂದ್ರ-ಗೌರಿಬಿದನೂರು ಸಂಚಾರ ಬಂದ್ ಆಗಿದೆ.
ಮಳೆ ಮುಂದುವರಿಕೆ: ರಾಜಧಾನಿ ಸೇರಿದಂತೆ ರಾಜ್ಯದ ವಿವಿಧೆಡೆ ಮುಂದಿನ ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.