ಬೆಂಗಳೂರು, ಅ.3- ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಉಂಟಾದ ಅನಾಹುತಗಳಲ್ಲಿ ಇಬ್ಬರು ವಾಹನ ಸವಾರರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರಿ ಮಳೆಗೆ ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿಬಿದ್ದರೂ ಕಾರಿನಲ್ಲಿದ್ದ ವ್ಯಕ್ತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಾಗರಭಾವಿಯಿಂದ ಜ್ಞಾನಭಾರತಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಎಲೆಕ್ಟ್ರಾನಿಕ್ ಕಾರಿನ ಮೇಲೆ ನಿನ್ನೆ ರಾತ್ರಿ ಭಾರಿ ಗಾತ್ರದ ಮರವೊಂದು ಉರುಳಿಬಿದ್ದಿದೆ. ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮರದ ಮೇಲೆ ಬಿದ್ದ ಮರವನ್ನು ತೆರವುಗೊಳಿಸಲು ಪೊಲೀಸರೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಕರೆ ಮಾಡಿದರೂ ಯಾವುದೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಲಿಲ್ಲ. ನಂತರ ಪೊಲೀಸರೆ ಹರಸಾಹಸ ಪಟ್ಟು ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟರು.
ಅದೇ ರೀತಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಚಾಮರಾಜಪೇಟೆ ಈದ್ಗಾ ಮೈದಾನದ ರಸ್ತೆ ಬದಿಯ ಬೃಹತ್ ಮರವೊಂದು ಉರುಳಿಬಿದ್ದಿದ್ದು ಆಟೋ ಚಾಲಕನೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಆಟದ ಮೈದಾನದ ಪಕ್ಕದಲ್ಲಿ ಬಿದ್ದ ದೊಡ್ಡ ಗಾತ್ರದ ಮರ ನೇರವಾಗಿ ಆಟೋ ಮೇಲೆ ಮರ ಬಿದ್ದಿದೆ, ಸುದೈವವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮರ ಬಿದ್ದ ರಭಸಕ್ಕೆ ಹಲವಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ತಂತಿಗಳು ತುಂಡರಿಸಿಬಿದ್ದ ಪರಿಣಾಮ ಚಾಮರಾಜಪೇಟೆ ಸುತ್ತಮುತ್ತ ಜನ ಬೆಳಿಗ್ಗೆಯಿಂದ ವಿದ್ಯುತ್ ಇಲ್ಲದೆ ಪರದಾಡುವಂತಾಗಿತ್ತು.
ವಿದ್ಯುತ್ ಕಂಬ ಉರುಳಿಬಿದ್ದಿದ್ದ ಕೂಗಳತೆ ದೂರದಲ್ಲಿರುವ ಬೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಲು ತೀರ ತಡ ಮಾಡಿದ್ದರಿಂದ ಬೆಳ್ಳಂ ಬೆಳಿಗ್ಗೆ ಕಚೇರಿಗೆ ತೆರಳಲು ಅಣಿಯಾಗುತ್ತಿದ್ದವರು ಸಿಬ್ಬಂದಿಗಳಿಗೆ ಹಿಡಿಶಾಪ ಹಾಕುತ್ತಿದ್ದರು.
ಕಂಬ ಹಾಗೂ ಬೃಹತ್ ಮರ ಉರುಳಿಬಿದ್ದ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಮುಖ್ಯರಸ್ತೆಯನ್ನು ಕೆಲ ಕಾಲ ಬಂದ್ ಮಾಡಿ ಮರ ತೆರವುಗೊಳಿಸಲಾಯಿತು.