ಮಹಾ ಮಳೆಗೆ ನಲುಗಿದ ಬೆಂಗಳೂರು, ಕೊಚ್ಚಿಹೋದ ವಾಹನಗಳು

Social Share

ಬೆಂಗಳೂರು,ಅ.20- ನಿನ್ನೆ ಸುರಿದ ಮಹಾಮಳೆಗೆ ಐಟಿ ಬಿಟಿ ಸಿಟಿ ತತ್ತರಿಸಿ ಹೋಗಿದೆ. ಮಳೆರಾಯನ ಅಬ್ಬರಕ್ಕೆ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತಗೊಂಡಿದ್ದರೆ, ಅಂಡರ್‍ ಪಾಸ್‍ಗಳಲ್ಲಿ ಆಳುದ್ದ ನೀರು ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು.

ಶಿವಾಜಿನಗರ, ಮಂತ್ರಿಮಾಲ್ ಮುಂಭಾಗ, ಜಯನಗರದ ಸೌತ್ ಎಂಡ್ ಸರ್ಕಲ, ಓಕಳಿಪುರ ಸೇರಿದಂತೆ ನಗರದ ವಿವಿಧೆಡೆ ಇರುವ ಅಂಡರ್ ಪಾಸ್‍ಗಳಲ್ಲಿ ಆಳುದ್ದ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗಿತ್ತು.

ಕನ್ನಡ ರಾಜ್ಯೋತ್ಸವದಂದು ಅಪ್ಪುಗೆ ಕರ್ನಾಟಕ ರತ್ನ ಪ್ರದಾನ

ದೊಮ್ಮಲೂರು, ರಾಜಾಜಿನಗರ ಮತ್ತಿತರ ಹಲವಾರು ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ರಾತ್ರಿಯಿಡಿ ಜನ ನೀರು ಹೊರ ಹಾಕುವ ಕಾಯಕದಲ್ಲಿ ತೊಡಗಿಸಿ ಕೊಳ್ಳುವಂತಾಗಿತ್ತು. ಕೋರಮಂಗಲ ಹಾಗೂ ಬಸವೇಶ್ವರನಗರದಲ್ಲಿ ಹಲವಾರು ಮರಗಳು ಧರೆಗುರುಳಿವೆ. ಬಿಬಿಎಂಪಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಉರುಳಿಬಿದ್ದಿರುವ ಮರಗಳ ತೆರವು ಕಾರ್ಯಚರಣೆ ನಡೆಸುತ್ತಿದ್ದಾರೆ.

ಮೆಟ್ರೋ ಗೋಡೆ ಕುಸಿತ: ನಿನ್ನೆ ಬಿದ್ದ ಭಾರಿ ಮಳೆಗೆ ಜೆಡಿಎಸ್ ಕಚೇರಿ ಬಳಿ ಇರುವ ಮೆಟ್ರೋ ಬೇಲಿ ಕುಸಿದು ಹಲವಾರು ಕಾರುಗಳು ಜಖಂಗೊಂಡಿವೆ. ಮೆಟ್ರೋ ಗೋಡೆ ಕುಸಿದುಬಿದ್ದಿದೆ. ಘಟನೆಯಲ್ಲಿ 6 ಕಾರು ಒಂದು ದ್ವಿಚಕ್ರವಾಹನ ಜಖಂ ಆಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ.

ಕುಸಿದುಬಿದ್ದಿರುವ ಅವಶೇಷಗಳನ್ನು ಜೆಸಿಬಿಯಿಂದ ತೆರವುಗೊಳಿಸಲಾಗುತ್ತಿದೆ. ಸ್ಥಳಕ್ಕೆ ಶಾಸಕ ದಿನೇಶ್ ಗುಂಡೂರಾವ್, ಮೆಟ್ರೋ ಎಂ.ಡಿ ಆಗಮಿಸಿ ಸ್ಥಳಿಯರಿಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

ದಿನನಿತ್ಯ ಮಳೆ ಬರ್ತಿದೆ, ಇಷ್ಟೊಂದುï ಮಳೆ ನಾವು ನೋಡಿರ್ಲಿಲ್ಲ. ಮೆಟ್ರೋ ಕಾಂಪೌಂಡ್ ಹಾಕಿದ್ರು, ಮೆಟ್ರೋ ಟ್ರಾಕ್ ಇದರ ಕೆಳಗೆ ಹೋಗಿದೆ ಆದರೂ ಯಾವುದೆ ಅನಾಹುತ ಆಗಿಲ್ಲ ಮೆಟ್ರೋದವರು ನಷ್ಟ ಭರಿಸಿಕೊಡುವ ಭರವಸೆ ನೀಡಿದ್ದಾರೆ. ಅವರಿಗೆ ಸುರಕ್ಷತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ನಗರದ ಬಹುತೇಕ ರಸ್ತೆಗಳು ಕೆರೆಯಂತಾಗಿದ್ದವು, ಲುಲು ಮಾಲ್ ಕಡೆ ಸಾಗುವ ರಸ್ತೆಯಲ್ಲಿ ನಿಂತ ನೀರಿನಿಂದಾಗಿ ವಾಹನ ಸವಾರರು ಮುಂದೆ ಸಾಗಲಾರದೆ ರಾತ್ರಿಯಿಡಿ ಪರದಾಡುವಂತಾಗಿತ್ತು.

ಜಲಾವೃತ: ಬೊಮ್ಮನಹಳ್ಳಿಯ ಬಿಳೇಕಹಳ್ಳಿ ಅನುಗ್ರಹ ಬಡಾವಣೆ ಸಂಪೂರ್ಣ ಜಲಾವೃತವಾಗಿತ್ತು. ಹಲವಾರು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಮನೆಯಿಂದ ಹೊರಬರಲು ಸಾಧ್ಯವಾಗದೆ ಪರದಾಡುವಂತಾಗಿತ್ತು.
ಸ್ಥಳಕ್ಕೆ ದೌಡಾಯಿಸಿರುವ ಬಿಬಿಎಂಪಿ ಸಿಬ್ಬಂದಿಗಳು ಪಂಪ್‍ಸೆಟ್ ಮೂಲಕ ಮನೆಗಳಿಗೆ ನುಗ್ಗಿರುವ ನೀರನ್ನು ಹೊರ ಹಾಕುತ್ತಿದ್ದಾರೆ. ಈ ಭಾಗದಲ್ಲಿ ಸಮರ್ಪಕವಾಗಿ ರಾಜಕಾಲುವೆ ಮಾಡದಿರುವುದೆ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣ ಎಂದು ಇಲ್ಲಿನ ಜನ ಬಿಬಿಎಂಪಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದರು.

ಕಿತ್ತುಬಂದ ಡಾಂಬರು: ಶೇಷಾದ್ರಿಪುರಂ ಪೊಲೀಸ್ ಠಾಣೆ ಮುಂದೆ ಮಳೆ ಬಿದ್ದ ರಭಸಕ್ಕೆ ರಸ್ತೆಯ ಡಾಂಬರು ಕಿತ್ತುಬಂದಿತ್ತು. ಮಾತ್ರವಲ್ಲ ರಸ್ತೆಗೆ ಹಾಕಿದ್ದ ಟಾರ್ ನೀರಿನಲ್ಲಿ ಕೊಚ್ಚಿ ಹೋಗುವ ರೀತಿಯಲ್ಲಿ ಡಾಂಬರೀಕರಣ ಮಾಡಿರುವುದು ಬಟಬಯಲಾಗಿದೆ.

ಒಟ್ಟಾರೆ ನಿನ್ನೆ ಬಿದ್ದ ಮಳೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಿರುವ ರಸ್ತೆ ಡಾಂಬರೀಕರಣಗಳ ಸಾಚಾತನವನ್ನು ಬಯಲು ಮಾಡುವಲ್ಲಿ ಯಶಸ್ವಿಯಾಗಿದೆ. ನಗರದ ಬಹುತೇಕ ರಸ್ತೆಗಳು ಅದರಲ್ಲೂ ಹೊಸದಾಗಿ ಮಾಡಿರುವ ಡಾಂಬರೀಕರಣದ ಗುಣಮಟ್ಟ ಅನಾವರಣ ಮಾಡುವಲ್ಲಿ ಮಳೆ ಯಶಸ್ವಿಯಾಗಿದೆ.

ಶಿವಾನಂದ ವೃತ್ತದಲ್ಲಿ ನಿರ್ಮಿಸಿರುವ ಉಕ್ಕಿನ ಸೇತುವೆ ಮೇಲಿನ ರಸ್ತೆ ಬಂಡವಾಳವನ್ನು ಮಳೆ ಬಯಲು ಮಾಡಿದೆ. ಮೇಲ್ಸೇತುವೆಯಿಂದ ಇಳಿಯುವ ರಸ್ತೆಗಳಲ್ಲೂ ಗುಂಡಿ ಬಿದ್ದಿರುವುದು ಕಂಡು ಬರುತ್ತಿದೆ. 40 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿರುವ ಮೇಲ್ಸೇತುವೆಯಲ್ಲೇ ಕಳಪೆ ಕಾಮಗಾರಿ ನಡೆಸಿರುವುದು ಕಂಡು ಬಂದಿದೆ. ಇಂತಹ ಪುರುಷಾರ್ಥ ಕೆಲಸಕ್ಕಾ ನಾವು ತೆರಿಗೆ ಕಟ್ಟೋದು ಎಂದು ಜನ ಪ್ರಶ್ನಿಸುವಂತಾಗಿದೆ.

ತೆರಿಗೆ ಯೋಜನೆ ವಿರೋಧಿಸಿ ನ್ಯೂಜಿಲೆಂಡ್‍ನಾದ್ಯಂತ ರೈತರ ಪ್ರತಿಭಟನೆ

ಎಲ್ಲೆಲ್ಲಿ ಎಷ್ಟು ಮಳೆ: ನಿನ್ನೆ ಒಂದೇ ದಿನ ನಗರದಲ್ಲಿ ಸರಾಸರಿ 1.06 ಸೆಂ.ಮೀ ನಷ್ಟು ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಗುಟ್ಟಹಳ್ಳಿ 5.6 ಸೆಂ.ಮೀ. ಸಂಪಗಿರಾಮ ನಗರದಲ್ಲಿ 5 ಸೆಂ.ಮೀ, ದಯಾನಂದ ನಗರದಲ್ಲಿ 4.9, ಬಸವನಗುಡಿಯಲ್ಲಿ 4.7, ಹಂಪಿನಗರ 3.5, ವಿಶ್ವೇಶ್ವರಪುರ 3.4, ಕೋನೇನ ಆಗ್ರಹಾರ 3.3, ಸೇ. ಮಿ ಮಳೆಯಾಗಿದೆ.
ಕಮ್ಮನಹಳ್ಳಿ, ದೊಡ್ಡಾನೆಕುಂದಿ, ಆಗ್ರಹಾರ ದಾಸ ರಹಳ್ಳಿಯಲ್ಲಿ ತಲಾ 3.15, ಲಾಲ್ ಬಾಗ್ 3.1, ಕೃಷ್ಣರಾಜಪುರ 3, ಕಾಟನ್ ಪೇಟೆ 2.9, ವಿದ್ಯಾಪೀಠ 2.6 ಸೇ.ಮಿ ಮಳೆಯಾಗಿದೆ.

ಇನ್ನು ಐದು ದಿನ ಭಾರಿ ಮಳೆ : ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಹಾಗೂ ಬೆಂಗಳೂರು ಮತ್ತಿತರ ಪ್ರದೇಶಗಳಲ್ಲಿ ಇನ್ನು ಐದು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಜನ ಎಚ್ಚರವಹಿಸಬೇಕು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ನಗರದಲ್ಲಿ ಇಂದು ಮಾತ್ರ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ರಾಜಕಾಲುವೆ ಮತ್ತು ತಗ್ಗುಪ್ರದೇಶಗಳಲ್ಲಿ ವಾಸಿಸುವ ಜನ ಎಚ್ಚರವಹಿಸುವಂತೆ ಸೂಚಿಸಲಾಗಿದೆ.

Articles You Might Like

Share This Article