ಬೆಂಗಳೂರು,ಆ.27- ನಿನ್ನೆ ರಾತ್ರಿ ಸುರಿದ ಮಳೆಗೆ ಸಿಲಿಕಾನ್ ಸಿಟಿ ಹೈರಾಣಾಗಿದೆ. ರಾತ್ರಿ ಇಡಿ ಸುರಿದ ಮಳೆಯಿಂದಾಗಿ ಮೈಸೂರು ರಸ್ತೆಯ ಕುಂಬಳಗೂಡು ಸಮೀಪದ ನಾರಾಯಣ ಗುರುಕುಲ ಮುಂಭಾಗದ ಹೆದ್ದಾರಿ ಕೆರೆಯಂತಾಗಿ ಪರಿಣಮಿಸಿದೆ.
ಇದರಿಂದಾಗಿ ಮೈಸೂರು ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ. ಹೆದ್ದಾರಿ ಬಂದ್ ಮಾಡಿರುವುದರಿಂದ ಕುಂಬಳಗೂಡು ಸಮೀಪ ವಾಹನಗಳು ಎಡತಿರುವು ಪಡೆದುಕೊಂಡು ಬಿಡದಿ ತಲುಪವಂತಾಗಿದೆ.
ಹೀಗಾಗಿ ಇಡಿ ಮೈಸೂರು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ವಾಹನಗಳು ಇರುವೆ ಸಾಲಿನಲ್ಲಿ ಸಾಗುವಂತಹ ಪರಿಸ್ಥಿತಿ ಎದುರಾಗಿದೆ. ಇನ್ನು ಕಳೆದ ಎರಡು ದಿನಗಳಿಂದ ನಗರದಲ್ಲಿ ರಾತ್ರಿ ವೇಳೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಹಲವಾರು ಪ್ರದೇಶಗಳ ರಸ್ತೆಗಳಲ್ಲಿ ಆಳುದ್ದ ನೀರು ನಿಂತಿರುವುದರಿಂದ ಪ್ರತಿನಿತ್ಯ ವಾಹನ ಸವಾರರು ಹರಸಾಹಸ ಮಾಡಿ ಸಂಚರಿಸುವಂತಾಗಿದೆ.
ಬಿಳೇಕಹಳ್ಳಿಯಲ್ಲಿ ರಾಜಕಾಲುವೆಗಳು ತುಂಬಿ ಹರಿಯುತ್ತಿರುವ ಪರಿಣಾಮ ತಗ್ಗು ಪ್ರದೇಶಗಳ ಹತ್ತಾರು ಮನೆಗಳಿಗೆ ನೀರು ನುಗ್ಗಿತ್ತು. ರಾಜಕಾಲುವೆ ಸಮೀಪದ ಅನುರಾಗ ಬಡಾವಣೆಯ ಹಲವಾರು ಮನೆಗಳಿಗೆ ನೀರು ನುಗ್ಗಿದ್ದರಿಂದ ಸ್ಥಳೀಯರು ರಾತ್ರಿಯಿಡಿ ನಿದ್ರೆಯಿಲ್ಲದೆ ಜಾಗರಣೆ ನಡೆಸುವಂತಾಯಿತು.
ನಗರದಲ್ಲಿ ಪ್ರತಿಬಾರಿ ಮಳೆಯಾದಾಗಲೂ ನಮ್ಮ ಬಡಾವಣೆಗಳ ಮನೆಗಳಿಗೆ ನೀರು ನುಗ್ಗುವುದು ಮಾಮೂಲಾಗಿದೆ. ಈ ಕುರಿತಂತೆ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆಗಳಲ್ಲಿ ಹಾಗೂ ರಸ್ತೆಗಳಲ್ಲಿ ಆಳುದ್ದ ನೀರು ನಿಂತಿದ್ದರಿಂದ ಮಕ್ಕಳು ಇಂದು ಶಾಲೆಗಳಿಗೆ ತೆರಳಲು ಸಾಧ್ಯವಾಗಿಲ್ಲ. ರಾತ್ರಿಯಂತೂ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದವರು ರಸ್ತೆಗಳಲ್ಲಿ ನಿಂತಿದ್ದ ನೀರಿನಿಂದಾಗಿ ಮನೆ ತಲುಪಲು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಲಾಲ್‍ಬಾಗ್, ಸೌತ್‍ಎಂಡ್ ಸರ್ಕಲ್, ಜೆಸಿ ರೋಡ್, ಜಯನಗರ, ಶಾಂತಿನಗರ ಮತ್ತಿತರ ಪ್ರದೇಶಗಳ ರಸ್ತೆಗಳಲ್ಲಿ 3 ರಿಂದ 4 ಅಡಿಗಳಷ್ಟು ನೀರು ಶೇಖರಣೆಯಾಗಿತ್ತು. ರಸ್ತೆಯಲ್ಲಿ ನಿಂತ ನೀರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಪಂಪ್ ಮೂಲಕ ಹೊರಹಾಕುವ ಕಾರ್ಯದಲ್ಲಿ ನಿರತರಾಗಿದ್ದರು.
ಇನ್ನು ಹೆಚ್‍ಎಸ್‍ಆರ್ ಬಡಾವಣೆ, ಕೆಂಗೇರಿ, ನಾಯಂಡಹಳ್ಳಿ, ಮೂಡಲಪಾಳ್ಯ ಮತ್ತಿತರ ಪ್ರದೇಶಗಳಲ್ಲೂ ಮಳೆ ಅನಾಹುತ ಸಂಭವಿಸಿದೆ.