ಬೆಂಗಳೂರು, ಆ.2- ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ ಮುಂದುವರೆದಿದ್ದು, ಜನಜೀವನ ತತ್ತರಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಕುಮಾರಧಾರಾ ಸಮೀಪದ ಪರ್ವತಮುಖಿಯಲ್ಲಿ ನಿನ್ನೆ ರಾತ್ರಿ ಗುಡ್ಡಕುಸಿದು ಇಬ್ಬರು ಮಕ್ಕಳು ಮೃತಪಟ್ಟರೆ, ಉತ್ತರ ಕನ್ನಡ ಜಿಲ್ಲೆ, ಭಟ್ಕಳದ ಮುಟ್ಟಳ್ಳಿ ಗ್ರಾಮದಲ್ಲಿ ಮನೆ ಮೇಲೆ ಗುಡ್ಡಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ. ಕಲಬುರಗಿಯಲ್ಲಿ ಬೈಕ್ ಸವಾರನೊಬ್ಬ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಹಾವೇರಿ, ಬಳ್ಳಾರಿ, ದಾವಣಗೆರೆ, ತುಮಕೂರು, ರಾಯಚೂರು, ಉತ್ತರ ಕನ್ನಡ, ಕೊಪ್ಪಳ, ಕೋಲಾರ, ವಿಜಯನಗರ, ಮೈಸೂರು, ಕರಾವಳಿ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಭಾರೀ ಪ್ರಮಾಣದ ಮಳೆಯಾಗಿದೆ.
ಭಟ್ಕಳ ತಾಲ್ಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ಚೌದನಿ ನದಿ ಉಕ್ಕಿ ಹರಿಯುತ್ತಿದೆ. ಮೂಡಭಟ್ಕಳ-ಮುಟ್ಟಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿದೆ. ಸುಳ್ಯ, ಕಡಬ ತಾಲ್ಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ ಬಿದ್ದು ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿದು ಆದಿ ಸುಬ್ರಹ್ಮಣ್ಯ ದೇವಾಲಯ ಮುಳುಗಡೆಯಾಗಿರುವುದರಿಂದ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ನಗರಪಂಚಮಿಯಂದೇ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರವೇಶ ನಿರ್ಬಂಧಿಸಿರುವುದು ನಾಗಭಕ್ತರಿಗೆ ಶಾಕ್ ನೀಡಿದಂತಾಗಿದೆ.
ಕೊಪ್ಪಳ ಜಿಲ್ಲೆಯಾದ್ಯಂತ ನಿನ್ನೆ ತಡರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಗಂಗಾವತಿ ತಾಲ್ಲೂಕಿನ ಸಾಣಾಪುರ ಗ್ರಾಮದಲ್ಲಿ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಇಂದು ಬೆಳಗ್ಗೆ ಕೂಡ ನಿರಂತರ ಮಳೆ ಬೀಳುತ್ತಿದ್ದು, ನಾಗರಪಂಚಮಿ ಹಬ್ಬಕ್ಕೆ ಅಡ್ಡಿಯಾಗಿದೆ. ಕೊಡಗು ಜಿಲ್ಲೆಯಾದ್ಯಂತ ಹಲವೆಡೆ ಭಾರೀ ಮಳೆ ಸುರಿದಿದ್ದು, ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿದ್ದು, ಕಲ್ಮಾರು, ಕಲ್ಲುಗುಂಡಿ ಪ್ರದೇಶಗಳು ದ್ವೀಪದಂತಾಗಿವೆ. ಜಿಲ್ಲಾಧಿಕಾರಿ ಡಾ.ಬಿ.ಸತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭಾರೀ ಮಳೆ ಹಿನ್ನೆಲೆಯಲ್ಲಿ ಕುಂದಾಪುರ, ಬೈಂದೂರು ತಾಲ್ಲೂಕು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸತತ ಮಳೆಯಿಂದ ಬೈಂದೂರು ತಾಲ್ಲೂಕಿನ ಶಿರೂರಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಸ್ಥಳೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.
ದಾವಣಗೆರೆಯಲ್ಲೂ ಕೂಡ ಬೆಳಗ್ಗೆ ವರುಣ ಆರ್ಭಟಿಸಿ ಸಿದ್ದರಾಮಯ್ಯ ಜನ್ಮೋತ್ಸವ ಕಾರ್ಯಕ್ರಮಕ್ಕೆ ಮಾಡಿಕೊಂಡಿದ್ದ ತಯಾರಿಗೆ ಅಡಚಣೆಯಾಗಿದೆ. ಹಲವು ಫ್ಲಕ್ಸ್, ಬಂಟಿಂಗ್ಸ್‍ಗಳು ನೆಲಕ್ಕುರುಳಿವೆ. ಇತ್ತ ರಾಜಧಾನಿ ಬೆಂಗಳೂರಿನಲ್ಲೂ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಸಾಲು ಸಾಲು ಅವಾಂತರಗಳು ಸಂಭವಿಸಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ರಾತ್ರಿಯೆಲ್ಲ ಜಾಗರಣೆ ಮಾಡುವಂತಾಗಿದೆ.
ಹಲವು ಬಡಾವಣೆಗಳು ಜಲಾವೃತಗೊಂಡಿವೆ.ಹೊರಮಾವು, ಸಾಯಿ ಲೇಔಟ್ ಸೇರಿದಂತೆ ಹಲವೆಡೆ ನೀರು ನುಗ್ಗಿ ಜನರಿಗೆ ತೊಂದರೆಯಾಗಿದೆ. ಧಾರಾಕಾರ ಮಳೆಯಿಂದ ರಸ್ತೆಯೆಲ್ಲ ಜಲಾವೃತಗೊಂಡು ಬೈಕ್ ಸವಾರನೊಬ್ಬ ಬಿದ್ದು ಗಾಯಗೊಂಡಿದ್ದಾನೆ.
ಧಾರಾಕಾರ ಮಳೆಗೆ ಭಾರೀ ಮರವೊಂದು ಧರೆಗೆ ಉರುಳಿ ಕೆಲಕಾಲ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಇನ್ನೂ ಐದು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.