ಬೆಂಗಳೂರು,ಆ.29- ರಾಜ್ಯದ ವಿವಿಧೆಡೆ ಮತ್ತೆ ಭಾರೀ ಮಳೆಯಾಗುತ್ತಿದ್ದು ತಕ್ಷಣವೇ ಅಧಿಕಾರಿಗಳು ಸಾರ್ವಜನಿಕರು ಮತ್ತು ಜಾನುವಾರುಗಳ ರಕ್ಷಣೆಗೆ ಆದ್ಯತೆ ನೀಡಬೇಕೆಂದು ಸೂಚಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾನಿಗೊಳಗಾದ ಮನೆಗಳಿಗೆ ತಕ್ಷಣವೇ 10 ಸಾವಿರ ಪರಿಹಾರ ನೀಡುವುದಾಗಿ ಪ್ರಕಟಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 13ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, 16 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಮೊದಲು ಸಂಕಷ್ಟಕ್ಕೆ ಸಿಲುಕಿರುವ ಜನರು ಮತ್ತು ಜಾನುವಾರುಗಳನ್ನು ರಕ್ಷಣೆ ಮಾಡಲು ಸೂಚಿಸಿರುವುದಾಗಿ ತಿಳಿಸಿದರು.
ಎಲ್ಲೆಲ್ಲಿ ಮಳೆಯಿಂದ ಮನೆಗಳು ಹಾನಿಗೊಳಗಾಗಿವೆಯೋ ತಕ್ಷಣವೇ ಪರಿಹಾರ ಕಲ್ಪಿಸಲು 10 ಸಾವಿರ ರೂ. ಬಿಡುಗಡೆ ಮಾಡಲಾಗಿದೆ. ಎಲ್ಲೆಲ್ಲಿ ಜನ ವಸತಿಗೆ ನೀರು ನುಗ್ಗಿದೆಯೋ ಅಲ್ಲಿ ಆಶ್ರಯ ನೀಡುವಂತೆ 900 ಕೋಟಿ ಹಣವನ್ನು ಎಲ್ಲ ಡಿಸಿಗಳ ಖಾತೆಯಲ್ಲಿದೆ. ಬೆಳೆ ಸಮೀಕ್ಷೆ ಮಾಡಿ, ಪರಿಹಾರಕ್ಕೆ ಸೂಚನೆ ನೀಡಿದ್ದೇನೆ ಎಂದು ವಿವರಿಸಿದರು.
ತಗ್ಗು ಪ್ರದೇಶಗಳಲ್ಲಿರುವ ಜನರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು. ನದಿಪಾತ್ರಗಳಲ್ಲಿರುವ ಜನರು ಕೂಡ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಸ್ಥಳೀಯ ಆಡಳಿತಕ್ಕೆ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.
ಬೆಂಗಳೂರು, ಮೈಸೂರು ಹೆದ್ದಾರಿಯ ರಾಮನಗರ, ಚನ್ನಪಟ್ಟಣ ಬಳಿ ಭಾರೀ ಮಳೆಯಾಗಿ ನೀರು ರಸ್ತೆಯಲ್ಲೇ ನಿಂತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ತಕ್ಷಣವೇ ನೀರನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಜನರು ಈ ರಸ್ತೆಯಲ್ಲಿ ಸಂಚರಿಸದೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕು. ಹೆಚ್ಚಿನ ನೀರು ಸಂಗ್ರಹವಾಗಿರುವುದರಿಂದ ಯಾರೊಬ್ಬರು ಹುಚ್ಚಾಟ ನಡೆಸಬೇಡಿ. ಕ್ಷಣ ಕ್ಷಣಕ್ಕೂ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದೇವೆ. ನೀರು ತಗ್ಗಿದ ಬಳಿಕ ಸಂಚರಿಸುವಂತೆ ಮನವಿ ಮಾಡಿದರು.
ಎಲ್ಲೆಲ್ಲಿ ಟ್ರಾನ್ಸ್‍ಫಾಮರ್‍ಗಳು ಕೆಟ್ಟು ಹೋಗಿದೆವೊ ತಕ್ಷಣವೇ ದುರಸ್ತಿಗೊಳಿಸಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸ್ವಲ್ಪ ಕಷ್ಟವಾದರೂ ಸರಿಯೇ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಎಂ ಮನವಿ ಮಾಡಿಕೊಂಡರು. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತ ನೀರನ್ನು ಕ್ಲಿಯರ್ ಮಾಡಲು ಸೂಚನೆ ನೀಡಿದ್ದೇನೆ. ಮಳೆ ಕಳೆದುಕೊಂಡವರಿಗೆ ಪರಿಹಾರ ಕೊಡಲು ಸೂಚಿಸಿದ್ದು, ಕೆರೆಕಟ್ಟೆಗಳ ಮೇಲೆ ನಿಗಾ ವಹಿಸಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಹಿರಿಯ ನಾಯಕರಾದ ಯಡಿಯೂರಪ್ಪ ಭೇಟಿಯಾಗಿದ್ದೆ. ಪ್ರಮುಖವಾಗಿ ಪಕ್ಷದ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಅವರು ದೆಹಲಿಯಲ್ಲಿ ರಾಷ್ಟ್ರೀಯ ನಾಯಕರ ಭೇಟಿಯಾಗಿ ಬಂದಿದ್ದಾರೆ. ಪ್ರಧಾನಿಗಳು 2ನೇ ತಾರೀಖು ಮಂಗಳೂರಿಗೆ ಬರುತ್ತಿದ್ದಾರೆ. ಪ್ರಧಾನಿಗಳ ಕಾರ್ಯಕ್ರಮದ ಯಶಸ್ವಿ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ಪ್ರವಾಸದ ವೇಳೆ ಆರು ಕಡೆ ದೊಡ್ಡ ರ್ಯಾಲಿ, ನಾವು ಯಡಿಯೂರಪ್ಪ, ಕಟೀಲ್ ವಿವಿಧ ತಂಡಗಳಲ್ಲಿ ಪ್ರವಾಸ ಮಾಡುವ ಬಗ್ಗೆಯೂ ಚರ್ಚೆ ಮಾಡಲಾಗಿದ್ದು, ಮತ್ತೊಮ್ಮೆ ರಾಜ್ಯ ನಾಯಕರ ಮಟ್ಟದ ಸಭೆ ಮಾಡಿ, ಅಕ್ಟೋಬರ್, ಸೆಪ್ಟೆಂಬರ್ ತಿಂಗಳ ಪ್ರವಾಸದ ಬಗ್ಗೆ ಅಂತಿಮ ನಿರ್ಣಯ ಮಾಡುತ್ತೇವೆ. ಸೆಪ್ಟೆಂಬರ್ 8ರಂದು ಜನೋತ್ಸವದ ನಡೆಸುವ ಬಗ್ಗೆ ಬಿಎಸ್‍ವೈಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು.
ಯಡಿಯೂರಪ್ಪ ಅವರು ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಬಂದಿದ್ದರು. ಅಲ್ಲಿಯ ಮಾತುಕತೆ, ಸೂಚನೆಗಳನ್ನು ನಾವು ಚರ್ಚೆ ಮಾಡಿದ್ದೇವೆ. ಪ್ರಧಾನಿಗಳು ಮಂಗಳೂರಿಗೆ ಬಂದಾಗ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಹಾಗೂ ಅಕ್ಟೋಬರ್, ಸೆಪ್ಟೆಂಬರ್‍ನಲ್ಲಿ ನಡೆಯುವ ಜನ ಸಂಪರ್ಕ, ಪಕ್ಷ ಸಂಘಟನೆ ಪ್ರವಾಸದ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.