ಬೆಂಗಳೂರು,ಆ.7- ಕಳೆದ ಜೂನ್‍ನಿಂದ ಶುರುವಾಗಿರುವ ಭಾರಿ ಮಳೆಯಿಂದ ರಾಜ್ಯದಲ್ಲಿ ಸಂಭವಿಸಿರುವ ಸಾವಿರಾರು ಕೋಟಿ ರೂ.ಗಳ ನಷ್ಟ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಇನ್ನೆರಡು ದಿನಗಳಲ್ಲಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಕೈಗೊಂಡಿದೆ.
ರಾಜ್ಯದ ಸುಮಾರು 21 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಸುಮಾರು 71ಮಂದಿ ಜೀವ ಹಾನಿಯಾಗಿದೆ. 500ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. ಕೃಷಿ ಹಾಗೂ ತೋಟಗಾರಿಕೆಯ 1.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ.
ಗ್ರಾಮೀಣ ಪ್ರದೇಶ ಹಾಗೂ ಮುಖ್ಯ ರಸ್ತೆಗಳು ಸೇರಿ 13 ಸಾವಿರ ಕಿ.ಮೀ.ನಷ್ಟು ರಸ್ತೆ ಹಾನಿಗೊಳಗಾಗಿದೆ. ಸಾವಿರಕ್ಕೂ ಹೆಚ್ಚು ಸೇತುವೆಗಳು ಕೊಚ್ಚಿ ಹೋಗಿವೆ. 4ಸಾವಿರಕ್ಕೂ ಹೆಚ್ಚು ಶಾಲೆ, 200ಕ್ಕೂ ಹೆಚ್ಚು ಅಂಗನವಾಡಿ ಕಟ್ಟಡಗಳು ಭಾಗಶಃ ಅಥವಾ ಪೂರ್ಣ ಹಾನಿಗೊಳ ಗಾಗಿವೆ. 16 ಸಾವಿರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ. ಒಂದೂವರೆ ಸಾವಿರಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕಗಳು ದುರಸ್ತಿಯಾಗಿವೆ.
93ಕ್ಕೂ ಹೆಚ್ಚು ಸಣ್ಣ ಕೆರೆಗಳಿಗೆ ಧಕ್ಕೆಯಾಗಿವೆ ಎಂಬ ಪ್ರಾಥಮಿಕ ವರದಿ ಸಂಗ್ರಹವಾಗಿದೆ. ಬಹಳಷ್ಟು ಜಿಲ್ಲೆಗಳಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಬೆಳೆ ನಷ್ಟದ ಸಂಪೂರ್ಣ ಅಂದಾಜು ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಮಳೆ ನಿಂತ ಬಳಿಕ ಸಮಗ್ರ ವರದಿ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಸಿದ್ಧತೆ ನಡೆದಿದೆ.
ನಷ್ಟದ ಪ್ರಮಾಣ ತೀವ್ರವಾಗಿದ್ದು, ರಾಜ್ಯ ಸರ್ಕಾರ ತಾತ್ಕಲಿಕ ಪರಿಹಾರಕ್ಕಾಗಿ ನಿನ್ನೆ 200 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ರಾಜ್ಯದ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 657 ಕೋಟಿ ರೂ. ಹಣವಿದೆ. ಕೇಂದ್ರ ಸರ್ಕಾರದ 650, ರಾಜ್ಯ ಸರ್ಕಾರದ 150 ಕೋಟಿ ಸೇರಿ ಸುಮಾರು 800 ಕೋಟಿ ರೂ.ಗಳನ್ನು ವಿಪತ್ತು ನಿರ್ವಹಣಾ ನಿಧಿಯನ್ನಾಗಿ ಕಾಯ್ದಿರಿಸಲಾಗಿದೆ. ಆದರೆ, ಇದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದ್ದು, ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರದ ಮೊರೆ ಹೋಗಲು ರಾಜ್ಯ ಸರ್ಕಾರ ನಿಧರ್ರಿಸಿದೆ.
ರಾಜ್ಯದಲ್ಲಿ ಕರಾವಳಿ ಭಾಗದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಬಯಲು ಸೀಮೆಯ ಹಾಸನ, ಮಂಡ್ಯ, ಮೈಸೂರು, ದಾವಣಗೆರೆ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದ ಹುಬ್ಬಳ್ಳಿ-ಧಾರವಾಡ, ಹಾವೇರಿ, ಬೀದರ್, ಕಲಬುರಗಿ, ಬೆಳಗಾವಿ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಗಂಭೀರ ಸ್ವರೂಪದ ಹಾನಿಯಾಗಿದೆ.
ಮಳೆ ಮತ್ತಷ್ಟು ಮುಂದುವರೆಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈಗಾಗಲೇ ಬಿತ್ತನೆಯಾಗಿದ್ದ ಬೆಳೆಗಳು ಕೊಚ್ಚಿ ಹೋಗಿರುವ ಜತೆಗೆ ಮಧ್ಯಮವಾಸ್ಥೆಯಲ್ಲಿದ್ದ ಕೃಷಿ ಬೆಳೆಗಳು ನಷ್ಟವಾಗಿವೆ. ತೋಟಗಾರಿಕೆ ಬೆಳೆಗಳ ಪೈಕಿ ಅಡಿಕೆ, ತೆಂಗು, ಬಾಳೆ, ದಾಳಿಂಬೆಯಂತ ಬೆಳೆಗಳ ಫಸಲು ನೆಲಕಚ್ಚಿವೆ.
ಪ್ರಕೃತಿಯ ವೈಪರೀತ್ಯದಿಂದ ಸಂಕಟಕ್ಕೊಳಗಾದ ರೈತರು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ರಾಜ್ಯ ಸರ್ಕಾರ ತನ್ನಲ್ಲಿರುವ ಹಣವನ್ನು ತುರ್ತು ಪರಿಹಾರ ಕಾರ್ಯಗಳಿಗೆ ಬಳಸುವಲ್ಲೇ ಸಾಕಾಗುತ್ತಿದೆ. ಪ್ರತಿ ಮಾನವ ಜೀವ ಹಾನಿಗೆ ತಾತ್ಕಾಲಿಕವಾಗಿ 5 ಲಕ್ಷ ಪರಿಹಾರ ನೀಡಲಾಗುತ್ತಿದ್ದು, ಜಾನುವಾರು ನಷ್ಟಕ್ಕೆ ಗರಿಷ್ಠ 50 ಸಾವಿರದವರೆಗೂ ನೆರವು ಒದಗಿಸಲಾಗುತ್ತಿದೆ.
ಪೂರ್ಣ ಹಾನಿಗೊಳಗಾದ ಮನೆಗೆ 5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಇದರ ಜತೆಗೆ ಸವಾಲಿನ ವಿಷಯವೆಂದರೆ ಭೂ ಕುಸಿತ, ಸಂಪರ್ಕ ಸಾಧನಗಳಾದ ರಸ್ತೆ, ಸೇತುವೆಗಳ ಹಾನಿ, ಇವುಗಳನ್ನು ದುರಸ್ತಿ ಮಾಡುವುದು ತುರ್ತು ಅಗತ್ಯವಾಗಿದೆ. ವಿದ್ಯುತ್ ವ್ಯತ್ಯಯ ಸರಿಪಡಿಸಲು, ಪರಿವರ್ತಕಗಳ ದುರಸ್ತಿ ಸೇರಿದಂತೆ ಹಲವು ವೆಚ್ಚದ ಬಾಪ್ತುಗಳನ್ನು ಸರ್ಕಾರ ನಿಬಾಯಿಸಬೇಕಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಅನಿವಾರ್ಯವಾಗಿ ಕೇಂದ್ರದ ಮೊರೆ ಹೋಗಲು ನಿರ್ಧರಿಸಿದೆ.
ಈ ಮೊದಲು ನೆರೆ ಪರಿಸ್ಥಿತಿ ವೇಳೆಯೂ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಗೆ ಕೇಂದ್ರದಿಂದ ಬೆಂಬಲ ವ್ಯಕ್ತವಾಗಿರಲಿಲ್ಲ. ಆದರೆ, ಸದ್ಯದ ಪರಿಸ್ಥಿತಿ ಗಂಭೀರವಾಗಿದ್ದು, ಶತಾಯ-ಗತಾಯ ಕೇಂದ್ರದ ಮೇಲೆ ಒತ್ತಡ ಹೇರಿ ನೆರವು ಪಡೆದುಕೊಳ್ಳಲು ತಯಾರಿಗಳು ನಡೆದಿವೆ.