ಸಂಜೆ ಮಳೆಗೆ ನಲುಗಿದ ಬೆಂಗಳೂರು

ಬೆಂಗಳೂರು,ಏ.19- ಸಂಜೆ ವೇಳೆ ಸುರಿಯುತ್ತಿರುವ ಮಳೆಗೆ ಉದ್ಯಾನನಗರಿ ಅಕ್ಷರಶಃ ನಲಗಿ ಹೋಗಿದೆ. ಕಳೆದ ನಾಲ್ಕೈದು ದಿನಗಳಿಂದ ಸಂಜೆಯಾಗುತ್ತಿದ್ದಂತೆ ವರುಣ ಆರ್ಭಟಿಸುತ್ತಿದ್ದು ಭಾರೀ ಮಳೆಯಾಗುತ್ತಿದೆ. ಮರಗಳು, ವಿದ್ಯುತ್ ಕಂಬಗಳು ಧರೆಗುರುಳುತ್ತಿವೆ. ಮನೆಗಳಿಗೆ ನೀರು ನುಗ್ಗಿ ಭಾರೀ ಅವಾಂತರವೇ ಸೃಷ್ಟಿಯಾಗಿದೆ.

ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮಲ್ಲೇಶ್ವರಂನ ರೈಲ್ವೆ ಪ್ಯಾರಲರ್ ರಸ್ತೆಯ ಗಾಯತ್ರಿನಗರದಲ್ಲಿ ವಿದ್ಯುತ್ ಕಂಬಗಳು ಉರುಳಿಬಿದ್ದಿದ್ದು ರಾತ್ರಿ ಇಡೀ ಸ್ಥಳೀಯರು ಕತ್ತಲಲ್ಲಿ ಕಳೆಯುವಂತಾಯಿತು. ಇನ್ನು ಹಲವು ಕಂಬಗಳು ವಾಲಿ ನಿಂತಿದ್ದು, ಬೆಸ್ಕಾಂ ಸಿಬ್ಬಂದಿಗಳು ನಿರಂತರವಾಗಿ ಕಾರ್ಯಾಚರಣೆ ನಡೆಸಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.

ಮನೆಯ ಮುಂದೆ ನಿಲ್ಲಿಸಲಾಗಿದ್ದ ಕಾರುಗಳ ಮೇಲೆ ಮರಗಳು ಬಿದ್ದಿದ್ದು, ಭಾರೀ ನಷ್ಟ ಸಂಭವಿಸಿದೆ. ತೆಂಗಿನ ಮರಗಳು ಧರೆಗುರುಳಿಬಿದ್ದು, ಬಿಬಿಎಂಪಿ ಸಿಬ್ಬಂದಿಗಳು ತೆರವು ಕಾರ್ಯ ನಡೆಸಿದ್ದಾರೆ. ಘಟನೆಯಲ್ಲಿ ಎರಡು ಕಾರುಗಳ ಮೇಲೆ ಮಳೆಬಿದ್ದು ಸಂಪೂರ್ಣ ನಜ್ಜುಗುಜ್ಜಾಗಿವೆ. ಮಹಾನಗರದ ಬಹುತೇಕ ಪ್ರದೇಶಗಳಲ್ಲಿ ಗುಡುಗು, ಮಿಂಚು, ಗಾಳಿ ಸಹಿತ ಮಳೆಯಾಗುತ್ತಿದ್ದು, ವಾಹನ ದ್ವಿಚಕ್ರ ಸವಾರರು ಪರದಾಡುವಂತಾಗಿದೆ.

ಚಿಕ್ಕಪೇಟೆ ಮುಖ್ಯರಸ್ತೆ ಕೆರೆಯಂತಾಗಿದ್ದು, ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ. ವಿಜಯನಗರ, ರಾಜಾಜಿನಗರ, ಕೆಂಗೇರಿ, ನಾಗರಬಾವಿ, ಚಿಕ್ಕಪೇಟೆ, ಮೆಜೆಸ್ಟಿಕ್, ಚಾಮರಾಜಪೇಟೆ, ಕೆ.ಆರ್‍ಪುರಂ, ಕಮಲಾನಗರ ಸೇರಿದಂತೆ ಮತ್ತಿತರ ಕಡೆ ಮರದ ಕೊಂಬೆಗಳು ಮುರಿದುಬಿದ್ದಿದೆ.

ಇನ್ನು ಅಂಡರ್‍ಪಾಸ್‍ಗಳು ಜಲಾವೃತಗೊಂಡಿದ್ದು, ವಾಹನ ಸವಾರರು, ಪಾದಾಚಾರಿಗಳ ಓಡಾಟಕ್ಕೆ ತೀವ್ರ ತೊಂದರೆ ಉಂಟಾಗಿದೆ. ಬೇಸಿಗೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ನಗರದ ಜನತೆ ಭಾರೀ ತೊಂದರೆ ಸಿಲುಕಿದ್ದಾರೆ. ಇನ್ನು ಮೂರು ದಿನಗಳ ಕಾಲ ಮಳೆ ಮುಂದುವರೆಯುವ ಸೂಚನೆಗಳು ಇವೆ.

ಸಮರ್ಪಕ ನಿರ್ವಹಣೆ: ಗೌರವ್ ಗುಪ್ತ ನಿನ್ನೆ ನಗರದಲ್ಲಿ ಸುರಿದ ಮಳೆಯಿಂದಾಗಿ ನಾನಾ ಕಡೆ ಅನಾಹುತಗಳು ಸಂಭವಿಸಿವೆ. ಸಮರ್ಪಕವಾಗಿ ಮಳೆ ನಿರ್ವಹಣೆಗೆ ಮುಂಜಾಗ್ರತಾ ಕ್ರಮಗಳನ್ನು ವಹಿಸಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ. ಮಳೆಯಿಂದ ಪೌರ ಕಾರ್ಮಿಕರ ಮೂಲಕ ಹಲವು ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ. ಮಳೆಯಿಂದ ಅನಾಹುತಕ್ಕೀಡಾದ ಕುಟುಂಬಗಳಿಗೆ ಪರಿಹಾರ ನೀಡುವ ಕಾರ್ಯ ಕೂಡ ನಡೆಯುತ್ತಿದೆ. ಫ್ಲೈ ಓವರ್, ಜಂಕ್ಷನ್ ಅಕ್ಕಪಕ್ಕ ವಾಹನಗಳು ವೇಗವಾಗಿ ಚಲಿಸುತ್ತವೆ. ಇದರಿಂದ ತೊಂದರೆಯಾಗುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಪೊಲೀಸರ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದರು.

ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡಲಾಗುತ್ತದೆ. ತ್ಯಾಜ್ಯ ವಿಲೇವಾರಿ ಲಾರಿಗಳ ಅಪಘಾತ ಸಂಬಂಧ ಪ್ರತಿಕ್ರಿಯಿಸಿದ ಅವರು, ಆಕಸ್ಮಿಕವಾಗಿ ಈ ಘಟನೆಗಳು ನಡೆಯುತ್ತಿದ್ದು, ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಘನತ್ಯಾಜ್ಯ ವಿಲೇವಾರಿ ವಾಹನಗಳ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ.

ಗಾಂಬಜಾರ್ ರಸ್ತೆಯನ್ನು ಹೈಟೆಕ್ ಮಾಡುವ ಡಲ್ಟ್ ಯೋಜನೆಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದು, ಸ್ಥಳೀಯ ಸಂಘಟನೆಗಳೊಂದಿಗೆ ಮಾತನಾಡುತ್ತೇವೆ ಎಂದರು. ಮಳೆ ಅನಾಹುತವನ್ನು ಸಮರ್ಪಕವಾಗಿ ನಿರ್ವಹಿಸಲು ಪಾಲಿಕೆ ಸನ್ನದ್ಧವಾಗಿದ್ದು, ಕಾರ್ಯಾಚರಣೆಯನ್ನು ಸಹ ಕ್ಷಿಪ್ರವಾಗಿ ಮಾಡಲಾಗುತ್ತಿದೆ ಎಂದರು.