ರಾಜ್ಯದಲ್ಲಿ ಮುಂದುವರೆದ ಮಳೆ ಆರ್ಭಟ, ಜನ ಜೀವನ ಅಸ್ತವ್ಯಸ್ತ

Social Share

ಬೆಂಗಳೂರು,ಜು.10- ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಕೊಡಗು, ದಕ್ಷಿಣ ಕನ್ನಡ, ಕರಾವಳಿ, ಶಿವಮೊಗ್ಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಹಲವೆಡೆ ಗುಡ್ಡ ಕುಸಿತವಾಗಿ, ಸೇತುವೆಗಳು ಕೊಚ್ಚಿಹೋಗಿ, ರಸ್ತೆ ಸಂಚಾರಕ್ಕೆ ಅಡಚಣೆ… ವರುಣನ ಅವಾಂತರಕ್ಕೆ ಜನ ಜೀವನ ಅಸ್ತವ್ಯಸ್ತವಾಗಿದೆ.

ಭಾರೀ ಮಳೆಯಿಂದ ನದಿಗಳು ಉಕ್ಕಿ ಹರಿಯುತ್ತಿದ್ದು, ಹೊಲಗದ್ದೆಗಳು ಜಲಾವೃತಗೊಂಡಿವೆ. ಹಾಸನ ಜಿಲ್ಲೆಯಲ್ಲಿ ಭಾರೀ ಮಳೆಗೆ ಹಲವು ಮನೆಗಳು ಕುಸಿದಿವೆ. ರಾಮನಾಥಪುರ ಹೋಬಳಿಯಲ್ಲಿ 15ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ.

ಶಿವಮೊಗ್ಗ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ಆಗುಂಬೆ ಘಾಟಿಯಲ್ಲಿ ಭೂಕುಸಿತ ಹಾಗೂ ಮರ ಬಿದ್ದು ವಾಹನ ಸಂಚಾರ ಬಂದ್ ಆಗಿದೆ. ಭಾರೀ ಗಾತ್ರದ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಶಿವಮೊಗ್ಗದಿಂದ ಕರಾವಳಿಯನ್ನು ಸಂಪರ್ಕಿಸುವ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಘಾಟಿ ಕೆಳಗಿರುವ ಸೋಮೇಶ್ವರ ಚೆಕ್‍ಪೋಸ್ಟ್ ಬಳಿಯಲ್ಲಿಯೇ ವಾಹನಗಳನ್ನು ತಡೆಯಲಾಗುತ್ತಿದೆ. ಮೇಲ್ಬಾಗ ಆಗುಂಬೆ ಘಾಟಿ ಚೆಕ್‍ಪೋಸ್ಟ್ ಬಳಿಯೇ ವಾಹನಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಕುಸಿದಿರುವ ಮಣ್ಣು ಮತ್ತು ಮರ ತೆರವುಗೊಳಿಸುವ ಕಾರ್ಯ ನಡೆದಿದೆಯಾದರೂ ಮಳೆ ಸುರಿಯುತ್ತಿರುವುದರಿಂದ ತೊಂದರೆಯಾಗುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಬಾಗಮಂಡಲ, ನಾಪೆÇಕ್ಲು ರಸ್ತೆ ಸಂಪರ್ಕ ಕಡಿತವಾಗಿದೆ. ರಾಜ್‍ಪೇಟೆ ತಾಲ್ಲೂಕಿನ ಕೊಟ್ಟಮುಂಡಿ ಚರೈಯುಪೊರಂಬುನಲ್ಲಿ ಪ್ರವಾಹ ಉಂಟಾಗಿದೆ. ಜೋಡಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ಉರುಳಿಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.

ಮರಹೊಳಲು, ಮಲ್ಲಿರಾಜಪಟ್ಟಣ ಗ್ರಾಮಗಳಲ್ಲಿ ಮನೆಗಳು ಬಿದ್ದಿದ್ದು, ಅಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಂಗಳೂರು, ಕಂಚಿಕಾರ್‍ಪೇಟೆ,ಜಕ್ರಿ ಬೆಟ್ಟ, ಕೈಂಕುಜೆ ಸಂಪೂರ್ಣ ಜಲಾವೃತವಾಗಿವೆ. ಅಜಿಲಮಗರು, ಉಪ್ಪಿನಂಗಡಿ ಮಾರ್ಗದ ರಸ್ತೆ ಬಂದ್ ಆಗಿದೆ. ಕುಮಾರದ್ವಾರ ನದಿ ತುಂಬಿ ಹರಿಯುತ್ತಿದ್ದು, ಮಂಜೇಶ್ವರ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಜಲಾವೃತವಾಗಿವೆ.

ಚಿಕ್ಕಮಗಳೂರು ಜಿಲ್ಲೆಯಲ್ಲೂ ಕೂಡ ಮಳೆಯ ಅವಾಂತರ ಮುಂದುವರೆದಿದ್ದು, ಕಂಬದ ಕೆರೆ ಏರಿ ಹೊಡೆದು ಉಪ್ಪಳಿ ಬಡಾವಣೆಗೆ ನೀರು ನುಗ್ಗಿದೆ. ನೀರು ನುಗ್ಗಿದ ಪರಿಣಾಮ ಮನೆಗಳ ನಿವಾಸಿಗಳು ಪರದಾಡುವಂತಾಗಿದೆ.ಉತ್ತರಕನ್ನಡ ಜಿಲ್ಲೆಯಲ್ಲೂ ಕೂಡ ವರುಣನ ಆರ್ಭಟ ಮುಂದುವರೆದಿದ್ದು, ಕಾಳಿನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ, ಅಗನಾಶಿನಿ, ಗಂಗಾವಳಿ, ವರದಾನದಿ ಉಕ್ಕಿ ಹರಿಯುತ್ತಿದ್ದು, ನದಿಪಾತ್ರದ ಜನರಲ್ಲಿ ಆತಂಕ ಉಂಟು ಮಾಡಿದೆ. ಕೇರಳದ ವೈಯನಾಡು, ಕಬಿನಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ಒಳಹರಿವು ಹೆಚ್ಚಾಗಿದೆ.

ಅತ್ತ ಉತ್ತರಕರ್ನಾಟಕದ ಭಾಗದಲ್ಲೂ ವರುಣನ ಅವಾಂತರ ಜೋರಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಹಲವೆಡೆ ರಾತ್ರಿಯಿಡೀ ಧಾರಾಕಾರ ಮಳೆಯಾದ ಹಿನ್ನೆಲೆಯಲ್ಲಿ ದಸ್ತಾಪುರ, ಶಿರೋಳ್ಳಿ ಗ್ರಾಮದ ನಡುವೆ ಇರುವ ನಾಲೆಯ ಕಟ್ಟೆ ಒಡೆದು ಶಿರೋಳ್ಳಿ ಗ್ರಾಮದ ಶಾಲಾ ಆವರಣ, ಜಮೀನುಗಳು ಜಲಾವೃತವಾಗಿವೆ.

ಕಾವೇರಿ ಜಲನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿದ್ದು, ಧನುಷ್‍ಕೋಟಿ, ಚಿಂಚನಕಟ್ಟೆ ಜಲಪಾತ ಮೈದುಂಬಿ ಹರಿಯುತ್ತಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಳಗಾವಿ, ಬೀದರ್, ಧಾರಾವಾಡ, ಹಾವೇರಿ, ಗುಲ್ಬರ್ಗ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.

Articles You Might Like

Share This Article