BREAKING : ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ, 8 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್..!

ಬೆಂಗಳೂರು,ಆ.29- ರಾಜ್ಯದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬಂಗಾಳ ಉಪಸಾಗರದ ಒಡಿಶಾ ಹಾಗೂ ಆಂಧ್ರಪ್ರದೇಶದ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ರಾಜ್ಯಾದ್ಯಂತ ಇಂದಿನಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಜಿಟಿಜಿಟಿ ಮಳೆಯಾಗುತ್ತಿದ್ದರೆ, ರಾಜ್ಯದ ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕ ಸೇರಿದಂತೆ ಮತ್ತಿತರ ಕಡೆ ಭಾರೀ ಮಳೆಯಾಗುತ್ತಿದ್ದು, ಮತ್ತೆ ಪ್ರವಾಹದ ಭೀತಿ ಎದುರಾಗಿದೆ.ಇಂದಿನಿಂದ ಸೆಪ್ಟೆಂಬರ್ 1ರವರೆಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಬಹುತೇಕ ಎಲ್ಲಾ ಕಡೆ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಹಾಗೂ ಒಳನಾಡು ಸೇರಿದಂತೆ 12 ಜಿಲ್ಲೆಗಳಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಮೈಸೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಷ್ಟೇ ಅಲ್ಲ, ಚಾಮರಾಜನಗರ, ಮೈಸೂರು, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಹಾಗೂ ಇಂದು ಮತ್ತು ನಾಳೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಕನ್ನಡ, ಚಾಮರಾಜನಗರ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಭಾರಿ ಹಾಗೂ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಹಾಗೂ ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಕೂಡ ಅಧಿಕ ಮಳೆಯಾಗುವ ಸಾಧ್ಯತೆ ಇದ್ದು, ಇಲ್ಲಿ ಈ ಎರಡು ದಿನಗಳು ಎಲ್ಲೋ ಅಲರ್ಟ್ ಘೋಷಿಸಲಾಗಿದ ಎಂದು ಅವರು ವಿವರಿಸಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮಳೆಯಾಗುವ ನಿರೀಕ್ಷೆಯಿದೆ.
ನೈರುತ್ಯ ಮುಂಗಾರಿನಿಂದಾಗಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಹೆಚ್ಚಾಗಿದೆ. ಅದರಂತೆಯೇ ಉತ್ತರ ಒಳನಾಡಿನಲ್ಲಿ ಕೂಡ ಬಹುತೇಕ ಕಡೆ ಮಳೆಯಾಗಿದೆ.

ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದ್ದು, ಆರೆಂಜ್ ಹಾಗೂ ಹಳದಿ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ಶಿವಮೊಗ್ಗ, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಕೋಲಾರ ಈ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಹೆಚ್ಚು ಮಳೆಯಾಗಲಿದೆ.

ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಾತ್ರವಲ್ಲದೇ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲೂ ಇಂದು ಮಳೆ ಸುರಿಯಲಿದೆ. ಬೀದರ್, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಇಂದು ಮೋಡ ಕವಿದ ವಾತಾವರಣವಿರಲಿದೆ. ಮುಖ್ಯವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಇಂದು ಮಳೆಯ ತೀವ್ರತೆ ಹೆಚ್ಚಾಗಲಿದೆ.

ಉಡುಪಿಯ ಬ್ರಹ್ಮಾವರದಲ್ಲಿ 13 ಸೆಂ.ಮೀ, ದಕ್ಷಿಣ ಕನ್ನಡದ ಸುಬ್ರಹ್ಮಣ್ಯಯಲ್ಲಿ 10 ಸೆಂ.ಮೀ, ಶಿವಮೊಗ್ಗದ ಆಗುಂಬೆಯಲ್ಲಿ 8 ಸೆಂ.ಮೀ., ಉಡುಪಿಯ ಕಾರ್ಕಳ, ಕೊಡಗಿನ ಭಾಗಮಂಡಲದಲ್ಲಿ ತಲಾ 7 ಸೆಂ.ಮೀ, ದಕ್ಷಿಣ ಕನ್ನಡದ ಮಣಿ, ಉತ್ತರ ಕನ್ನಡದ ಶಿರಾಲಿ, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ತಲಾ 6 ಸೆಂ.ಮೀ, ಮಂಗಳೂರು, ದಕ್ಷಿಣ ಕನ್ನಡದ ಸುಳ್ಯ, ಉತ್ತರ ಕನ್ನಡದ ಭಟ್ಕಳ, ಮಂಕಿ ಹಾಗೂ ಕದ್ರಾ, ಉಡುಪಿಯ ಕುಂದಾಪುರದಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ.

ಭಾಗಮಂಡಲ, ಶಿರಾಲಿ, ಕಾರವಾರ, ಭಟ್ಕಳ, ಆನೇಕಲ್, ಬುಕ್ಕಪಟ್ಟಣ, ಬಂಗಾರಪೇಟೆ, ಎಂಎಂ ಹಿಲ್ಸ್, ಬೆಂಗಳೂರು ಕೆಐಎಎಲ್ ಏರ್ಪೋರ್ಟ್, ಕೋಟ, ರಾಮದುರ್ಗ, ರಾಣೆಬೆನ್ನೂರು, ಅಡಕಿ, ಜ್ಞಾನಭಾರತಿ, ಉತ್ತರಹಳ್ಳಿ, ದೇವನಹಳ್ಳಿ, ಕೋಲಾರ, ಚಿಂತಾಮಣಿ, ಶ್ರೀರಂಗಪಟ್ಟಣ, ತುಮ್ರಿ, ಶಿರಾಳಕೊಪ್ಪ, ಮಾಗಡಿ, ಬೆಳ್ತಂಗಡಿ, ಧರ್ಮಸ್ಥಳ, ಮೂಡುಬಿದಿರೆ, ವಿಟ್ಲ, ಕೊಲ್ಲೂರು, ಭೀಮರಾಯನಗುಡಿ, ಬೈಲಹೊಂಗಲ, ಹಿರೆಕೆರೂರು, ಬಾದಾಮಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ, ಹೊಸದುರ್ಗ, ಕುಣಿಗಲ್, ಹೆಬ್ಬೂರು, ಶ್ರೀನಿವಾಸಪುರ, ಮಾಲೂರು, ಅರಕಲಗೂಡಿನಲ್ಲಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್‍ಎಎಲ್‍ನಲ್ಲಿ 30.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೆಂಗಳೂರು ನಗರ 30.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್‍ನಲ್ಲಿ 30.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

Sri Raghav

Admin