ಬೆಂಗಳೂರು, ಸೆ.1- ಬಿಜೆಪಿಯ ಭ್ರಷ್ಟಚಾರ ಮತ್ತು ದುರಾಡಳಿತದಿಂದ ಬೆಂಗಳೂರು ಬಹುಕೇತ ಮಳೆ ನೀರಿನಲ್ಲಿ ಮುಳುಗಿದ್ದು, ರಸ್ತೆಗಳು ಗುಂಡಿಗಳಿಂದ ಜನ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತ ನಾಡಿದ ಮಾಜಿ ಸಚಿವ ಕೃಷ್ಣ ಬೈರೇಗೌಡ, ಬಿಜೆಪಿಯವರು ಬೆಂಗಳೂರನ್ನು ಹಣ ಕಿತ್ತುಕೊಳ್ಳುವ ಮರದಂತೆ ಬಳಕೆ ಮಾಡುತ್ತಿದ್ದಾರೆ. ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ. ಹೀಗಾಗಿ ಬೆಂಗಳೂರಿಗರು ಸಮಸ್ಯೆ ಅನುಭವಿಸಬೇಕಿದೆ, ಅಂತರಾಷ್ಟ್ರೀಯ ಮಟ್ಟದಲ್ಲೂ ಐಟಿ ಸಿಟಿಯ ವರ್ಚಸ್ಸು ಕುಗ್ಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಿಡುಗಡೆಯಾದ ನೂರು ರೂಪಾಯಿ ಅನುದಾನದಲ್ಲಿ 50 ರೂ. ತಿಂದು, ಉಳಿದ ಐವತ್ತು ರೂಪಾಯಿಯಲ್ಲಿ ಯಾವ ಗುಣಮಟ್ಟದ ಕೆಲಸ ಮಾಡಲು ಸಾಧ್ಯ. ಭ್ರಷ್ಟಚಾರ ಇದೇ ರೀತಿ ಮುಂದುವರೆದರೆ ಮುಂದಿನ ಐದು ವರ್ಷದಲ್ಲಿ ಬೆಂಗಳೂರಿನ ಸ್ಥಿತಿ ಏನಾಗಲಿದೆ ಎಂದು ಅರ್ಥ ಮಾಡಿಕೊಳ್ಳಬೇಕು.
ಬಿಬಿಎಂಪಿ ಅನುದಾನದಲ್ಲಿ ಶೇ.80ನ್ನು ರಸ್ತೆ, ಪುಟ್ಪಾತ್ ದುರಸ್ಥಿತಿ, ಹೂಳು ತೆಗೆಯಲು ಬಳಕೆ ಮಾಡಲಾಗುತ್ತಿದೆ. ಇದು ಹಳೆ ಕಲ್ಲು-ಹೊಸ ಬಿಲ್ಲ ಎಂಬಂತಾಗಿದೆ. ದುಡ್ಡು ಹೊಡೆಯುವ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರಾಜಕಾಲುವೆ ಅಭಿವೃದ್ಧಿ ಸೇರಿದಂತೆ ಸಮಸ್ಯೆಯ ಶಾಶ್ವತ ಪರಿಹಾರದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ. ಶೇ.50ರಷ್ಟು ಕಮಿಷನ್ ಹೊಡೆಯುವ ಕಾಮಗಾರಿಗಳನ್ನು ಹೆಚ್ಚು ಮಾಡುತ್ತಿದ್ದಾರೆ. ಕೆಲವೆಡೆ ಕೆಲಸವನ್ನೇ ಮಾಡದೇ ಶೇ.100ರಷ್ಟು ಹಣವನ್ನು ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ಮೂರು ವರ್ಷದಲ್ಲಿ ಈ ಸರ್ಕಾರ ಒಂದೇ ಒಂದೆ ಮೇಲುಸೇತುವೆ, ಕೆಳಸೇತುವೆ ಮಾಡಿಲ್ಲ. ಮೂಲ ಸೌಲಭ್ಯ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿಲ್ಲ. ಬಿಡುಗಡೆಯಾದ ಎಲ್ಲಾ ಹಣವೂ ಬಿಜೆಪಿಯವರ ಜೇಬಿಗೆ ಹೋಗುತ್ತಿದೆ. ಬಿಜೆಪಿಯವರಿಗೆ ಬೆಂಗಳೂರು ಹಣ ಕೀಳುವ ಮರವಾಗಿದೆ. ಯಾವುದೇ ಶಾಶ್ವತ ಕಾಮಗಾರಿಗಳನ್ನು ಮಾಡದೆ ಇರುವುದರಿಂದ ಬೆಂಗಳೂರಿನ ಜನ ಮಳೆಯಿಂದ ಸಮಸ್ಯೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ಎಲ್ಲಿ ತೊಂದರೆಯಾಗಿದೆ ಎಂದು ಹೇಳು ವುದಕ್ಕಿಂತ, ಎಲ್ಲಿ ತೊಂದರೆಯಾಗಿಲ್ಲ ಎಂದು ಹೇಳು ವುದು ಸುಲಭ. ಏಕೆಂದರೆ ಎಲ್ಲಾ ಕಡೆ ತೊಂದರೆಯಾಗಿದೆ. ಲಕ್ಷಾಂತರ ಜನ ನೀರಿನಲ್ಲಿ ಮುಳುಗಿದ್ದಾರೆ, ಬಹುತೇಕ ಎಲ್ಲಾ ರಸ್ತೆಗಳಲ್ಲೂ ಗುಂಡಿಗಳು ಬಿದ್ದಿವೆ. ಪ್ರಧಾನಿ ಮೋದಿ ಅವರು ಬಂದಾಗ ರಸ್ತೆ ಅಭಿವೃದ್ಧಿಗೆ ಎರಡು ದಿನದಲ್ಲಿ 26 ಕೋಟಿ ಖರ್ಚು ಮಾಡಿದರು. ಅದರಲ್ಲೂ ಭ್ರಷ್ಟಚಾರ ನಡೆದಿತ್ತು. ಜನರ ಸಮಸ್ಯೆ ಪರಿಹಾರಕ್ಕೆ ಬಿಬಿಎಂಪಿ ಬಳಿ ಹಣವಿಲ್ಲವೇ ಎಂದು ಪ್ರಶ್ನಿಸಿದರು.
ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿ ಹೈಕಮಾಂಡ್ನ ಕೃಪಾಕಟಾಕ್ಷ ಇರುವುದರಿಂದ ರಾಜ್ಯ ಬಿಜೆಪಿ ನಾಯಕರು ಭ್ರಹ್ಮಾಂಡ ಭ್ರಷ್ಟಚಾರ ಮುಳುಗಿ ದ್ದಾರೆ. ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ ಯಾವ ಸಂಸ್ಥೆಗಳು ಬಿಜೆಪಿಯವರ ವಿರುದ್ಧ ತನಿಖೆ ಮಾಡುವುದಿಲ್ಲ. ಅವು ರಾಜಕೀಯಕ್ಕಷ್ಟೆ ಬಳಕೆಯಾಗುತ್ತಿವೆ. ಈ ಭಂಡ ಧೈರ್ಯ ಬಿಜೆಪಿ ಯವರನ್ನು ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಲು ಅನುವು ಮಾಡಿಕೊಟ್ಟಿದೆ. ಮೋದಿ ಅವರ ಪ್ರಾಯೋಜಕತ್ವದಲ್ಲಿಯೇ ಭ್ರಷ್ಟಚಾರ ನಡೆಯುತ್ತಿದೆ. ಗುತ್ತಿಗೆದಾರರ ಸಂಘ ದೂರು ಕೊಟ್ಟರೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಮುಖ್ಯಮಂತ್ರಿಯವರು ಭ್ರಷ್ಟಚಾರಕ್ಕೆ ದಾಖಲೆ ಕೇಳುತ್ತಿದ್ದಾರೆ. ಇನ್ನೂ ಮುಂದೆ ಲಂಚಕ್ಕೆ ರಶೀದಿ ನೀಡುವ ಕಾನೂನು ಜಾರಿ ಮಾಡಲಿ. ಬಿಜೆಪಿಯವರು ತೆಗೆದುಕೊಂಡ ಲಂಚಕ್ಕೆ ರಶೀದಿ ನೀಡಲಿ, ಇಲ್ಲವಾದರೆ ಭ್ರಷ್ಟಚಾರಕ್ಕೆ ಸಾಕ್ಷ್ಯ ಸಿಗುವುದು ಕಷ್ಟ. ಜನ ಕಷ್ಟದಲ್ಲಿದ್ದೇವೆ ಎಂದರೆ ಮುಖ್ಯಮಂತ್ರಿ ಅದಕ್ಕೂ ದಾಖಲೆ ಕೇಳಬಹುದು. ಬಿಜೆಪಿ ನಾಯಕರಿಗೆ ಅಧಿಕಾರದ ಮದ ತಲೆಗೆ ಹತ್ತಿದೆ, ಆ ದುರಹಾಂಕಾರದಲ್ಲಿ ಜನರ ಸಮಸ್ಯೆ ಗಳನ್ನು ನಿರ್ಲಕ್ಷ್ಯಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಅವಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಂದ ಬೆಂಗಳೂರು ಜಾಗತಿಕವಾಗಿ ಒಳ್ಳೆಯ ಹೆಸರು ಮಾಡಿತ್ತು, ಬಂಡವಾಳ ಹೂಡಿಕೆಯ ನಾಯಕತ್ವ ವಹಿಸಿತ್ತು. ದೇಶದ ಆದಾಯ ಹೆಚ್ಚಾಗಿತ್ತು. ಈಗ ಕೆಟ್ಟ ಹೆಸರು ಬಂದಿದೆ. ಬೆಂಗಳೂರಿನಲ್ಲಿ ಸಮಸ್ಯೆ ಹೆಚ್ಚಿವೆ, ಅದರಿಂದ ಮುಕ್ತರಾಗಲು ನಮ್ಮಲ್ಲಿಗೆ ಬನ್ನಿ ಎಂದು ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳು ಇಲ್ಲಿನ ಉದ್ಯಮಿಗಳನ್ನು ಆಹ್ವಾನಿಸುತ್ತಿವೆ. ಬಿಜೆಪಿಯ ನಾಯಕತ್ವದ ಕೊರತೆ ಮತ್ತು ದುರಾಡಳಿತದಿಂದ ಭಾರತದ ಮುಕಟವಾಗಿದ್ದ ಬೆಂಗಳೂರಿನ ಕೀರ್ತಿಯನ್ನು ಹಾಳಾಗಿದೆ. ಹಿಂದೆ ವಾಜಪೇಯಿ ಅವರಿಂದ ಹೊಗಳಿಸಿಕೊಂಡಿದ್ದ ಬೆಂಗಳೂರು ಮುಳುಗುತ್ತಿರುವ ನಗರವಾಗುತ್ತಿದೆ ಎಂದು ವಿಷಾದಿಸಿದರು.