ಕೆರೆಯಂತಾದ ಮಹದೇವಪುರ ರಸ್ತೆ, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ಬೆಂಗಳೂರು, ಜೂ.2- ನಗರದಲ್ಲಿ ಇತ್ತೀಚೆಗೆ ಮಳೆ ಸುರಿಯುತ್ತಲೇ ಇರುವುದರಿಂದ ಬಹಳಷ್ಟು ರಸ್ತೆಗಳು ಕೆರೆಯಂತಾಗಿವೆ. ಅದರಲ್ಲೂ ಮಹದೇವಪುರದ ರಸ್ತೆಗಳು ಕೆರೆಯಂತಾಗಿದ್ದು, ತ್ರಿಚಕ್ರ ವಾಹನ ಸವಾರರು ನೀರಿನಲ್ಲಿ ಸರಾಗವಾಗಿ ಹೋಗಲಾರದೆ ತಳ್ಳಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ವರ್ತೂರು ಕೋಡಿಯಲ್ಲಿ ಕಾಮಗಾರಿ ಸರಿಯಾಗಿ ಮಾಡದ ಕಾರಣ ರಸ್ತೆಯಲ್ಲಿ ನೀರು ಸರಾಗವಾಗಿ ಹರಿಯದೆ ನಿಂತಿರುವುದರಿಂದ ಕೆರೆಯಂತಾಗಿದೆ.

Rain-Bangalore

ವೈಟ್‍ಫೀಲ್ಡ್, ಹೊಸಕೋಟೆ ಮತ್ತು ಸರ್ಜಾಪುರ ರಸ್ತೆ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಮಳೆ ನೀರು ಮತ್ತು ಕೊಳಚೆ ನೀರಿನಿಂದ ಆವೃತವಾಗಿರುತ್ತದೆ. ರಾಮಗೊಂಡನಹಳ್ಳಿ, ಇಮಡಿಹಳ್ಳಿ ಭಾಗದ ರಾಜಕಾಲುವೆಗಳು ಒತ್ತುವರಿಯಾಗಿರುವುದರಿಂದ ಈ ಅವಾಂತರಕ್ಕೆ ಕಾರಣವಾಗಿದೆ.
ವರ್ತೂರು ಕೆರೆಗೆ ಮಳೆ ನೀರು ಹರಿದು ಹೋಗಬೇಕು. ಆದರೆ, ರಾಜಕಾಲುವೆಗಳ ಒತ್ತುವರಿ ಕಳಪೆ ಕಾಮಗಾರಿಯಿಂದಾಗಿ ನೀರು ರಸ್ತೆಯಲ್ಲೇ ನಿಂತು ಕೆರೆಯಂತಾಗುತ್ತದೆ. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಕಥೆ. ಹಾಗಾಗಿ ಸ್ಥಳೀಯರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ರಸ್ತೆಯಲ್ಲಿ ಗುಂಡಿಗಳಿದ್ದರಂತೂ ದ್ವಿಚಕ್ರ ವಾಹನ ಸವಾರರನ್ನು ಆ ದೇವರೇ ಕಾಪಾಡಬೇಕು. ಗುಂಡಿಗಳಲ್ಲಿ ಬಿದ್ದು ಸಾವು-ನೋವು ಸಂಭವಿಸುವ ಉದಾಹರಣೆಗಳು ನಗರದಲ್ಲಿ ನಡೆಯುತ್ತಲೇ ಇದ್ದರೂ ಜನಪ್ರತಿನಿಧಿಗಳು, ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ನಾಗರಿಕರು ದೂರಿದ್ದಾರೆ.

Sri Raghav

Admin