ಕಾಫಿ ನಾಡಿನಲ್ಲಿ ಮುಂಗಾರು ಮಳೆ ಆರ್ಭಟ, ಗೋಡೆ ಕುಸಿದು ಮಹಿಳೆ ಸಾವು

Spread the love

Rain--01
ಚಿಕ್ಕಮಗಳೂರು, ಜು.10- ಕಾಫಿ ನಾಡಿನಲ್ಲಿ ಮುಂಗಾರು ಮಳೆ ಧಾರಾಕಾರವಾಗಿ ಸುರಿಯುತ್ತಲೇ ಇದ್ದು, ಗಿರಿ ಶ್ರೇಣಿ ಮಾರ್ಗಗಳಲ್ಲಿ ರಸ್ತೆ ಮೇಲೆ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಜಾಗರ ಹೋಬಳಿಯಲ್ಲಿ 4 ಮನೆಗಳು ಮಳೆಯಿಂದಾಗಿ ಭಾಗಶಃ ಕುಸಿದು ಬಿದ್ದಿದೆ. ತೊಗರಿ ಹಂಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಂಬಿಹಳ್ಳಿ ವಾಸಿ ವನಜಾ ಮೇಲೆ ಗೋಡೆ ಕುಸಿದು ಮೃತಪಟ್ಟಿದ್ದಾರೆ.

ಕೊಟ್ಟಿಗೆಗೆ ಹಸು ಕಟ್ಟಲು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮುಳ್ಳಯ್ಯನ ಗಿರಿ, ಬಾಬಾ ಬುಡನ್ ಗಿರಿ , ಅತ್ತಿ ಗುಂಡಿ , ಕೋಳಗಾನೆ ಈ ಗ್ರಾಮಗಳಲ್ಲಿ ರಸ್ತೆ ಬದಿಯಲ್ಲಿ ಗುಡ್ಡದ ಮಣ್ಣು ಕುಸಿದಿದೆ. ಮಣ್ಣು ಕುಸಿದಿರುವ ಭಾಗದಲ್ಲಿ ವಾಹನ ಸಂಚರಿಸಲು ಕಷ್ಟ ಸಾಧ್ಯವಾಗಿದೆ. ಜಿಲ್ಲೆಯ ಮಲೆನಾಡು ಹಾಗೂ ಬಯಲು ಸೀಮೆ ಭಾಗದಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ. ಹಳ್ಳ-ಕೊಳ್ಳ , ಜಲಪಾತಗಳು ಮೈದುಂಬಿಕೊಳ್ಳುತ್ತಿದೆ.

ಶೃಂಗೇರಿ ತಾಲ್ಲೂಕಿನಲ್ಲಿ ಎಡ ಬಿಡದೇ ಸುರಿಯುತ್ತಿರುವ ಮಳೆ ಯಿಂದಾಗಿ ತಾಲ್ಲೂಕಿನ ಎಲ್ಲಾ ಹಳ್ಳ-ಕೊಳ್ಳಗಳು ಭರ್ತಿ ಯಾಗಿದೆ. ನಿನ್ನೆ ಒಂದೇ ದಿನ ಕೆರೆ ಕಟ್ಟೆಯಲ್ಲಿ 94 ಮಿ.ಮೀಟರ್, ಕಿಗ್ಗಾದಲ್ಲಿ 143.5 ಮಿ.ಮೀಟರ್, ಶೃಂಗೇರಿಯಲ್ಲಿ 134.2 ಮಿ.ಮೀಟರ್ ಮಳೆಯಾಗಿದೆ. ಶೃಂಗೇರಿ ದೇವಸ್ಥಾನದ ಅಕ್ಕ ಪಕ್ಕದ ರಸ್ತೆಗಳು ನೀರಿನಿಂದ ತುಂಬಿಕೊಂಡಿದೆ. ತಾಲ್ಲೂಕಿನ ಮರಟೆಹಳ್ಳ ತುಂಬಿ ರಸ್ತೆಗೆ ಹರಿದಿದ್ದು , ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಮೂಡಿಗೆರೆ ತಾಲ್ಲೂಕು ಕೊಟ್ಟಿಗೆಹಾರದಲ್ಲಿ ಎಡಬಿಡದೆ ಮಳೆಯಿಂದಾಗಿ ಪುವೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಹೊಳೆ ಕೂಡಿಗೆ ಗ್ರಾಮದ ನಿವಾಸಿಗಳು ಗ್ರಾಮಕ್ಕೆ ತಲುಪಲು ತೆಪ್ಪವನ್ನು ಬಳಸಬೇಕಾಗಿತ್ತು. ಶೃಂಗೇರಿ, ಕೊಪ್ಪ , ನರಸಿಂಹರಾಜಪುರ, ಮೂಡಿಗೆರೆ, ಕಳಸ ಈ ಭಾಗಗಳಲ್ಲಿ ಶಾಲಾ -ಕಾಲೇಜುಗಳಿಗೆ ಪರಿಸ್ಥಿತಿ ನೋಡಿ ರಜಾ ಘೋಷಿಸಲು ಜಿಲ್ಲಾಧಿಕಾರಿಗಳ ಅಲ್ಲಿನ ತಹಸೀಲ್ದಾರ್ ಹಾಗೂ ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ. ಹೀಗೆ ಮಳೆ ಮುಂದುವರೆದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ.

Facebook Comments

Sri Raghav

Admin