ಮಹಾಮಳೆಯಿಂದ ಮೂರಾಬಟ್ಟಿಯಾಯ್ತು ಉತ್ತರ ಕರ್ನಾಟಕ ಮಂದಿ ಬದುಕು..!

ಬೆಂಗಳೂರು,ಅ.16- ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯು ಭಾರ ಕುಸಿತದ ಪರಿಣಾಮ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಾಂಗಣ ರಾಜ್ಯಗಳಲ್ಲಿ ಕುಂಭದ್ರೋಣ ಮಳೆಯಿಂದ ಉತ್ತರ ಕರ್ನಾಟಕದಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಅಕ್ಷರಶಃ ಜನರ ದೈನಂದಿನ ಬದುಕು ಮೂರಾಬಟ್ಟೆಯಾಗಿದೆ.

ಮನೆ-ಮಠ, ಆಸ್ತಿ-ಪಾಸ್ತಿ, ಜಾನುವಾರು ಸೇರಿದಂತೆ ಬಹುತೇಕ ಎಲ್ಲವನ್ನೂ ಕಳೆದುಕೊಂಡಿರುವ ಸಾವಿರಾರು ಕುಟುಂಬಗಳು ದಾರಿ ಕಾಣದೆ, ಮುಂದೇನು ಎಂದು ತಲೆಮೇಲೆ ಕೈ ಹೊತ್ತು ಆಕಾಶದತ್ತ ಮುಖ ಮಾಡಿದ್ದಾರೆ. ಪರಿಸ್ಥಿತಿ ಕೈ ಮೀರುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಇಂದು ಈ ಭಾಗದ ಜಿಲ್ಲಾಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಕಾರಿಗಳು, ಸಿಇಒ, ಪ್ರಾದೇಶಿಕ ಆಯುಕ್ತರು ಸೇರಿದಂತೆ ಅಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿ ಕೆಲವು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಕಟ್ಟು ನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಈ ನಡುವೆ ಕಂದಾಯ ಸಚಿವ ಆರ್. ಅಶೋಕ್ ಕೂಡಾ ಇಂದು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ಕೊಟ್ಟು ಸಂತ್ರಸ್ಥರ ಆಳಲು ಆಲಿಸಿದರು.

ಭೀಮಾ ಮತ್ತು ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಅಪಾಯದ ಮಟ್ಟ ಹರಿಯುತ್ತಿವೆ. ಬಹುತೇಕ ಗ್ರಾಮಗಳು ಜಲಾವೃತವಾಗಿದ್ದು, ಹೊರಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಿದೆ.

ಸದ್ಯ ಕಲಬುರಗಿ, ರಾಯಚೂರು, ಯಾದಗಿರಿ, ಬೆಳಗಾವಿ , ಚಿಕ್ಕೋಡಿ ಸೇರಿದಂತೆ ಮತ್ತಿತರ ಕಡೆ ಸಂತ್ರಸ್ಥರ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರವಾಹದಲ್ಲಿ ಸಿಲಕಿರುವ ಸಂತ್ರಸ್ತರನ್ನು ರಕ್ಷಣೆ ಮಾಡಲು ಭಾರತೀಯ ವಾಯುಪಡೆ( ಐಎಎಫ್)ಗೆ ಸೇರಿದ ಹೆಲಿಕಾಪ್ಟರ್‍ಗಳನ್ನು ಬಳಸಿಕೊಳ್ಳುವಂತೆ ಸೂಚನೆ ಕೊಡಲಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಾಹಣಾ ತಂಡ (ಎನ್‍ಡಿಆರ್‍ಎಫ್), ರಾಜ್ಯ ವಿಪತ್ತು ನಿರ್ವಹಣಾ ತಂಡ(ಎಸ್‍ಡಿಆರ್‍ಎಫ್), ಸ್ಥಳೀಯ ಪೆÇಲೀಸರು ಕೂಡಾ ಕಾರ್ಯಚಾರಣೆಗೆ ಇಳಿದಿದ್ದಾರೆ. ಬೀದರ್ ವಾಯುನೆಲೆಯಲ್ಲಿ ಎರಡು ಐಎಎಫ್ ಹ್ಯಾಲಿಕಾಪ್ಟರ್‍ಗಳನ್ನು ಸರ್ವಸನ್ನದ್ದ ಸ್ಥಿತಿಯಲ್ಲಿಡುವಂತೆ ಸರ್ಕಾರ ನಿದೇರ್ಶನ ನೀಡಿದೆ.

ಭಾರೀ ಪ್ರವಾಹದಿಂದ ಸುರಿಯುತ್ತಿರುವ ಮಳೆ ಇನ್ನೊಂದೆಡೆ ಕಟಾವಿಗೆ ಬಂದ ಪೈರು ಕಣ್ಮುಂದೆ ನೀರಿನಲ್ಲಿ ಕೊಚ್ಚಿ ಹೊಗುತ್ತಿರುವದನ್ನು ಕಂಡ ರೈತರು ಮಮ್ಮಲ ಮರುಗುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ನಾನಾ ರೀತಿಯ ಆಸೆ ಆಮಿಷಗಳನ್ನು ಒಡ್ಡುವ ಜನಪ್ರತಿನಿಗಳು ಮಾತ್ರ, ಇಂತಹ ಸಂದರ್ಭದಲ್ಲೂ ಕನಿಷ್ಟ ಪಕ್ಷ ಸಂತ್ರಸ್ಥರ ಬಗ್ಗೆ ಕಾಳಜಿ ವಹಿಸದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಕಲ್ಯಾಣ ಕರ್ನಾಟಕ ಭಾಗದ ಕಲಬುರುಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಮುಂಬೈ ಕರ್ನಾಟಕದ ಬೆಳಗಾವಿ ಸೇರಿದಂತೆ ಬಹುತೇಕ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿದ್ದು, ಬಹಳಷ್ಟು ಪ್ರದೇಶಗಳು ಜಲಾವೃತಗೊಂಡು ನಡುಗಡ್ಡೆಗಳಂತೆ ಗೋಚರಿಸುತ್ತಿವೆ.

ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಬಳಿಯ ಡೋಣಿ ನದಿಯ ನಡುಗಡ್ಡೆಯಲ್ಲಿ ಜನರು ಸಿಲುಕಿಕೊಂಡಿದ್ದು ಸಹಾಯಕ್ಕಾಗಿ ಪರದಾಡುತ್ತಿದ್ದಾರೆ. ಇದ್ದಿಲು ತಯಾರಿಸಲು ಬಂದಿರುವ ಮಹಾರಾಷ್ಟ್ರ ಮೂಲದ ಏಳು ಜನ ನಡುಗಡ್ಡೆಯಲ್ಲಿ ಸಿಲುಕಿದ್ದು, ಈ ಪೈಕಿ ಐವರು ಮಕ್ಕಳಿದ್ದಾರೆ ಎನ್ನಲಾಗಿದೆ.

ಪ್ರವಾಹ ಹೆಚ್ಚಾಗುತ್ತಿದ್ದಂತೆ ಹೊರಬರಲು ಸಾಧ್ಯವಾಗದೆ ಸ್ಥಳೀಯ ಅಕಾರಿಗಳಿಗೆ ಕರೆ ಮಾಡಿ ಸಹಾಯಯಾಚಿಸಿದ್ದರು. ಇದೀಗ ರಕ್ಷಣಾ ಕಾರ್ಯ ಮುಂದುವರೆದಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಪ್ರವಾಹಕ್ಕೆ ಸಿಲುಕಿ ರಕ್ಷಣೆಗಾಗಿ ಪರದಾಡುತ್ತಿದ್ದ ಸಂತ್ರಸ್ತರು ರವಾನಿಸಿದ್ದ ಆಡಿಯೋ ಸಂದೇಶ ಆಧರಿಸಿ ಮಳಖೇಡ ಮೊರಾರ್ಜಿ ಶಾಲೆಯಲ್ಲಿ ಸಿಲುಕಿದ್ದ 9 ಮಂದಿಯನ್ನು ನಡುರಾತ್ರಿಯಲ್ಲಿ ಎನ್‍ಡಿಆರ್‍ಎಫ್ ಹಾಗೂ ಪೊಲೀಸರು ರಕ್ಷಣೆ ಮಾಡಿದ್ದಾರೆ.

ಕಾಗಿಣಾ ದಂಡೆಯ ಮಳಖೇಡ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾಂಪೌಂಡ್ ಒಡೆದು ಮಳೆ ನೀರು ಒಳನುಗ್ಗಿದ ಪರಿಣಾಮವಾಗಿ ಶಾಲೆಯಲ್ಲಿ 9 ಮಂದಿ ಸಿಲುಕಿಕೊಂಡಿದ್ದರು. ಎಷ್ಟೇ ಪ್ರಯಾಸಪಟ್ಟರೂ ಹೊರಬರಲಾಗದ ಪರಿಸ್ಥಿತಿಯಲ್ಲಿದ್ದಾಗ ಒಬ್ಬ ಮಹಿಳೆ ತಮ್ಮ ಸಹಾಯಕ್ಕಾಗಿ ಧ್ವನಿ ಸಂದೇಶ ಕಳುಹಿಸಿ ಸಹಾಯಕ್ಕೆ ಅಂಗಲಾಚಿದ್ದಾರೆ.

ಇದನ್ನರಿತ ಸಾಮಾಜಿಕ ಕಾರ್ಯಕರ್ತ ರಾಜು ಕಟ್ಟಿ ಅಕಾರಿಗಳನ್ನು ಸಂಪರ್ಕಿಸಿದಾಗ ತಕ್ಷಣ ಸ್ಪಂದಿಸಿದ ಸೇಡಂ ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ ರಕ್ಷಣಾ ಪಡೆ ಮೂಲಕ ಕಾರ್ಯಾಚರಣೆಗೆ ನಡೆಸಿ ರಕ್ಷಿಸಲಾಗಿದೆ.ಅರ್ಚಕರು ಹಾಗು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 16 ಮಂದಿ ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಗೋಶಾಲೆಯಲ್ಲಿದ್ದ ಜÁನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಸೇಡಂ-ಚಿತ್ತಾಪುರದ ಸಂಪರ್ಕ ಕಡಿತವಾಗಿದೆ.

ಕಮಲಾಪುರ ಹತ್ತಿರವಿರುವ ಜವಳಗಾ, ಸೇಡಂ ತಾಲುಕಿನಲ್ಲಿರುವ ಸಮಖೇಡ್ ತಾಂಡಾ, ಚಿತಾಪುರ ತಾಲೂಕಿನ ಗುಂಡುಗುರ್ತಿ, ಮುತ್ತಗಾ, ಕಲಬುರಗಿ ತಾಲೂಕಿನ ಸೀತನೂರ್ ಮತ್ತು ಭೀಮಳ್ಳಿ ಗ್ರಾಮಗಳು ಸಂಪೂರ್ಣವಾಗಿ ಮುಳುಗಿಹೋಗಿವೆ.

ಕಲಬುರಗಿ ಮತ್ತು ಸೇಡಂ ನಗರಗಳಿಗೆ ಸಂಪರ್ಕ ಕಡಿದುಹೋಗಿದೆ. ಕಲಬುರಗಿ ನಗರದಲ್ಲೂ ಪೂಜÁ ಕಾಲೊನಿ, ಮತ್ತು ಸುಂದರ ನಗರ ಬಡಾವಣೆಗಳನ್ನು ನೀರು ಆವರಿಸಿದೆ. ಸುಂದರ ನಗರದ ಜಲಾವೃತಗೊಂಡಿದ್ದ ಮನೆಯೊಂದರಲ್ಲಿ ವಿದ್ಯುತ್ ಪ್ರವಹಿಸಿ, 96 ವರ್ಷದ ವೃದ್ಧೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಈಗಾಗಲೇ ಜೇವರ್ಗಿ, ಚಿತ್ತಾಪುರ, ಅಫ್ಜಲ್ಪುರ ಹಾಗೂ ಸೇಡಂ ತಾಲೂಕಿನ ಗ್ರಾಮಗಳು ಮುಳುಗಡೆಯಾಗಿವೆ. ನಂದರಗಿ, ದಿಕ್ಸಂಗಾ, ಬಂಕಲಗಾ, ಅಳ್ಳಗಿ ಗ್ರಾಮಗಳು ಜಲಾವೃತವಾಗಿವೆ. ನೂರಾರು ಮನೆಗಳಿಗೆ ನೀರು ನುಗ್ಗಿದೆ. ದಿಕ್ಸಂಗಾ ಗ್ರಾಮದಲ್ಲಿ ಐದು ಎತ್ತುಗಳು ಕೊಚ್ಚಿ ಹೋಗಿವೆ.

ಚಿಂಚೋಳಿ ತಾಲೂಕಿನಲ್ಲಿ ಇಡೀ ರಾತ್ರಿ ವರ್ಷಧಾರೆಯಾಗಿದೆ. ನಾಗಾಇದಾಲಾಯಿ ಗ್ರಾಮದ ಕೆರೆ ಒಡೆದು ಗ್ರಾಮಕ್ಕೆ ನೀರು ನುಗ್ಗಿದೆ. ದವಸ-ಧಾನ್ಯ ಕಳೆದುಕೊಂಡು ಜನ ಹೈರಾಣಾಗಿದ್ದಾರೆ.ಹುಳ್ಸಗುಡ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಅಫ್ಜಲ್ಪುರದ ಜೇವಗಿ (ಬಿ) ಗ್ರಾಮಸ್ಥರು ಊರನ್ನೇ ಖಾಲಿ ಮಾಡ್ತಿದ್ದಾರೆ. ಚಿತ್ತಾಪುರದ ಕಡಬೂರ ಗ್ರಾಮದಲ್ಲಿ 8 ಅಡಿಗೂ ಅಕ ನೀರು ಸಂಗ್ರಹವಾಗಿದೆ. ಮನೆಯ ಛಾವಣಿ ಮೇಲೆ ಕುಳಿತು ಜನ ದಿನ ಕಳೆಯುತ್ತಿದ್ದಾರೆ.

ಅನ್ನಕ್ಕಾಗಿ ಪರದಾಡ್ತಿದ್ದಾರೆ. ಮುತ್ತಗಾ ಗ್ರಾಮ ದ್ವೀಪದಂತಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 4,819 ಮನೆಗಳಿಗೆ ನೀರು ನುಗ್ಗಿದೆ. 1058 ಮನೆಗಳಿಗೆ ಭೀಕರ ಹಾನಿಯಾಗಿದೆ. 518 ಜಾನುವಾರುಗಳ ಜೀವಹಾನಿಯಾಗಿದೆ.ಭೀಮಾ ಒಡಲಿನಲ್ಲಿರುವ 148 ಗ್ರಾಮಗಳಿಗೆ ಮುಳುಗಡೆ ಭೀತಿ ಎದುರಾಗಿದೆ.ಅನೇಕ ಕಡೆ ರಸ್ತೆ ಮತ್ತು ಸೇತುವೆಗಳು ಕೊಚ್ಚಿಹೋಗಿವೆ. ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಮುಂಬೈ ಕರ್ನಾಟಕದಲ್ಲಿ ಜನಜೀವನ ಅಸ್ತವಸ್ಥವಾಗಿದೆ.

ಗಡಿ ಜಿಲ್ಲೆಯ ಬಹುತೇಕ ನದಿಗಳು ತುಂಬಿ ಹರಿಯತ್ತಿದ್ದು ಕೆಲಕಡೆ ಏಕಾಏಕಿ ಭಾರೀ ಮಳೆಯಾಗಿ ಅವಾಂತರ ಸೃಷ್ಟಿಯಾಗಿದೆ. ಬೆಳಗಾವಿ ನಗರ ಸೇರಿದಂತೆ ಸವದತ್ತಿ, ಬೈಲಹೊಂಗಲ, ಗೋಕಾಕ್, ಕಿತ್ತೂರು ಹಾಗೂ ಖಾನಾಪೂರ ತಾಲೂಕಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ.

ಜಲದಿಗ್ಭಂಧನ: ಸವದತ್ತಿ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಸೋಗಲ ಸೋಮೇಶ್ಚರ ಮಂದಿರದ ಮಂದಿನ ಜಲಧಾರೆಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಕೆಲಕಾಲ ಯಾತ್ರಾರ್ಥಿಗಳಿಗೆ ಜಲದಿಗ್ಭಂನ ಉಂಟಾಗಿತ್ತು.

# ಸಾರ್ವಜನಿಕರ ಆಕ್ರೋಶ :
ಎಡೆಬಿಡದೆ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಕಲಬುರಗಿ ಜನರ ಬದುಕು ತತ್ತರಿಸಿಹೋಗಿದ್ದರೂ, ಜಿಲ್ಲಾಡಳಿತ ಮತ್ತು ಜನ ಪ್ರತಿನಿಗಳು ನೆರವಿಗೆ ಬಂದಿಲ್ಲವೆಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೈದರಾಬಾದ್-ಕರ್ನಾಟಕ ಹೆಸರನ್ನು ಕಲ್ಯಾಣ ಕರ್ನಾಟಕ ಅಂತ ಬದಲಾಯಿಸಿದ್ದು ಬಿಟ್ಟರೆ ಈ ಭಾಗಕ್ಕೆ ಏನೂ ಮಾಡಿಲ್ಲವೆಂದು ಅವರು ಹೇಳುತ್ತಿದ್ದಾರೆ. ಹಾನಿ ಪ್ರದೇಶಗಳಿಗೆ ಮುಖ್ಯಮಂತ್ರಿಯಾಗಲಿ, ಯಾವುದೇ ಶಾಸಕರು ಕೂಡ ತಮ್ಮ ಕಷ್ಟ ಕೇಳಲು ಬಂದಿಲ್ಲವೆಂದು ಜನ ಹಿಡಿಶಾಪ ಹಾಕುತ್ತಿದ್ದಾರೆ.

# ರೆಡ್ ಅಲರ್ಟ್:
ಹವಾಮಾನ ಇಲಾಖೆ ನಾಳೆ ಸಹ ಭೀಕರ ಮಳೆಯಾಗುವ ಮುನ್ಸೂಚನೆ ನೀಡಿದ್ದು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹೆಚ್ಚುವರಿ ನೀರು ಬಿಡುಗಡೆ: ಶಿವಮೊಗ್ಗ ಜಿಲ್ಲೆಯ ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾದ ನಂತರ, ಅಕಾರಿಗಳು ಎಲ್ಲಾ ನಾಲ್ಕು ಕ್ರೆಸ್ಟ್ ಗೇಟ್‍ಗಳನ್ನು ತೆರೆಯುವ ಮೂಲಕ 8,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದಾರೆ.
ಈ ಋತುವಿನಲ್ಲಿ ಎರಡನೇ ಬಾರಿ ಬಲವಂತವಾಗಿ ಗೇಟ್ ಗಳನ್ನು ತೆರೆಯಲಾಗಿದೆ.

ನೀರಿನ ಮಟ್ಟ: ಬುಧವಾರ ಬೆಳಗ್ಗೆ ಭದ್ರಾ ಜಲಾಶಯದಲ್ಲಿ 185.11 ಟಿಎಂಸಿ ಅಡಿ ನೀರು ತುಂಬಿತ್ತು, ಜಲಾಶಯದ ಗರಿಷ್ಠ ಮಟ್ಟ 186 ಟಿಎಂಸಿಯಾಗಿದೆ. ಜಲಾಶಯದ ಒಳಹರಿವು 14,304 ಕ್ಯೂಸೆಕ್ ಮತ್ತು ಹೊರಹರಿವು 8,251 ಕ್ಯೂಸೆಕ್ ಆಗಿತ್ತು. ಸುಮಾರು 8,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದ್ದೇವೆ ಮತ್ತು ನೀರಿನ ಒಳಹರಿವನ್ನು ಪರಿಗಣಿಸಿ, ನಾವು 10,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬಹುದು ಎಂದು ಜಲಾಶಯದ ಕಾರ್ಯಕಾರಿ ಎಂಜಿನಿಯರ್ ಮಂಜುನಾಥ್ ಹೇಳಿದ್ದಾರೆ.

ಲಿಂಗನಮಕ್ಕಿ ಜಲಾಶಯಕ್ಕೆ ಭಾರೀ ಪ್ರಮಾಣದ ಮಳೆಯಾಗುತ್ತಿರುವ ಕಾರಣ ನದಿತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ಕೊಟ್ಟಿದೆ.ಹವಮಾನ ಇಲಾಖೆ ನೀಡಿರುವ ಮಾಹಿತಿಯಂತೆ ರಾಜ್ಯದ ಹಲವೆಡೆ ಇನ್ನು ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ಇದು ಜನರಿಗೆ ಇನ್ನಷ್ಟು ಆತಂಕ ಉಂಟು ಮಾಡಿದೆ.

Sri Raghav

Admin