ಬೆಂಗಳೂರು,ಆ.21- ಭಾರೀ ಮಳೆಯಿಂದ ಅತಿವೃಷ್ಟಿ, ಪ್ರವಾಹ ಉಂಟಾಗಿ ಜನಜೀವನ ತತ್ತರಿಸಿದರೂ ರಾಜ್ಯದ 225 ಕೆರೆಗಳಿಗೆ ನೀರೇ ಬಂದಿಲ್ಲ. ರಾಜ್ಯದ 3,669 ಸಣ್ಣ ಕೆರೆಗಳ ಪೈಕಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿರುವುದು 1315 ಕೆರೆಗಳು ಮಾತ್ರ. ಜುಲೈ ಮತ್ತು ಆಗಸ್ಟ್‍ನಲ್ಲಿ ರಾಜ್ಯದಲ್ಲಿ ಭಾರೀ ಮಳೆಯಾಗಿ ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವಂತಾಗಿತ್ತು.
ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ಸೂಫಾ, ವರಾಹಿ, ಜಲಾಶಯಗಳನ್ನು ಹೊರತುಪಡಿಸಿ ಉಳಿದ ಪ್ರಮುಖ ಜಲಾಶಯಗಳು ಗರಿಷ್ಠ ಪ್ರಮಾಣದಲ್ಲ ಭರ್ತಿಯಾಗಿವೆ. ಕೃಷ್ಣ, ಭದ್ರ, ತುಂಗಾಭದ್ರ, ಕಪಿಲಾ ಕಾವೇರಿ, ಹೇಮಾವತಿ ಸೇರಿದಂತೆ ಎಲ್ಲ ಪ್ರಮುಖ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು.
ಅಪಾರ ಬೆಳೆಹಾನಿ, ಆಸ್ತಿಪಾಸ್ತಿ ನಷ್ಟ, ಜೀವಹಾನಿ ಕೂಡ ಸಂಭವಿಸಿತ್ತು. ಆದರೂ ರಾಜ್ಯದ 225 ಕೆರೆಗಳಿಗೆ ಈತನಕ ನೀರೇ ಬಾರದಿರುವುದು ದುರದೃಷ್ಟಕರ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಬೆಳಗಾವಿಯ 44, ವಿಜಯಪುರದ 21, ವಿಜಯನಗರದ 25, ಕೊಪ್ಪಳ ಹಾಗೂ ರಾಯಚೂರಿನ ತಲಾ 23, ತುಮಕೂರಿನ 10, ಚಿತ್ರದುರ್ಗ 8, ದಾವಣಗೆರೆ 6, ಚಾಮರಾಜನಗರ 22, ಬಳ್ಳಾರಿ 9, ಗದಗ 11, ಬಾಗಲಕೋಟೆ 7, ಯಾದಗಿರಿ 4 ಸೇರಿದಂತೆ ಒಟ್ಟು 225 ಕೆರೆಗಳಿಗೆ ಮಳೆಯ ನೀರು ಬಂದೇ ಇಲ್ಲ.
ಕಲ್ಯಾಣ ಕರ್ನಾಟಕ ಭಾಗದಲ್ಲೇ ಭರ್ತಿಯಾಗದೆ ಕೆರೆಗಳು ಹೆಚ್ಚಿವೆ. 543 ಕೆರೆಗಳಿಗೆ ಶೇ.30ರಷ್ಟು ಕೂಡ ನೀರು ಬಂದಿಲ್ಲ. ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ವಿಜಯಪುರ, ಬಾಗಲಕೋಟೆ, ಬೀದರ್, ವಿಜಯನಗರ, ಕೊಪ್ಪಳ ಜಿಲ್ಲೆಗಳ ಕೆರೆಗಳಿಗೆ ಕಡಿಮೆ ನೀರು ಬಂದಿದೆ.
ರಾಜ್ಯದ ದಕ್ಷಿಣ ಒಳನಾಡಿನಲ್ಲಿ 893 ಕೆರೆಗಳು ಪೂರ್ಣವಾಗಿ ಭರ್ತಿಯಾಗಿದ್ದರೆ 522 ಕೆರೆಗಳು ಅರ್ಧಕ್ಕಿಂತ ಹೆಚ್ಚು ತುಂಬಿವೆ. ಉತ್ತರ ಒಳನಾಡಿನಲ್ಲಿ 422 ಕೆರೆಗಳು ಮಾತ್ರ ಭರ್ತಿಯಾಗಿದ್ದು, 582 ಕೆರೆಗಳಿಗೆ ಅರ್ಧಕ್ಕಿಂತ ಹೆಚ್ಚು ಭರ್ತಿಯಾಗಿವೆ.
ರಾಜ್ಯದಲ್ಲಿ 482 ಕೆರೆಗಳು ಅರ್ಧದಷ್ಟು ಭರ್ತಿಯಾಗಿವೆ. ಅರ್ಧಕ್ಕಿಂತ ಹೆಚ್ಚು ಭರ್ತಿಯಾಗಿರುವ 1104 ಕೆರೆಗಳಿವೆ. ಒಳನಾಡಿನಲ್ಲಿ ಸೆಪ್ಟೆಂಬರ್‍ನಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಉಳಿದ ಕೆರೆಗಳು ಹೆಚ್ಚಿನ ಪ್ರಮಾಣದ ನೀರು ಬರುವ ಸಂಭವವಿದೆ.