ಬೆಂಗಳೂರು,ಜು.11-ಮಲೆನಾಡು, ಕರಾವಳಿ, ಕೊಡುಗು, ಶಿವಮೊಗ್ಗ ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಗುಡ್ಡ ಕುಸಿತ ಉಂಟಾಗಿ ರಸ್ತೆಗಳ ಸಂಚಾರ ಕಡಿತಗೊಂಡಿದೆ. ನದಿ ಹಳ್ಳಕೊಳ್ಳಗಳು ತುಂಬಿ ತುಳುಕುತ್ತಿದ್ದು, ನದಿಪಾತ್ರದ ಜನರು ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ.
ಶಿರಾಡಿಘಾಟ್, ಚಾರ್ಮುಡಿ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಗೊಳಿಸಲಾಗಿದೆ. ಕರಾವಳಿ, ಉತ್ತರಕನ್ನಡ, ದಕ್ಷಿಣ ಕನ್ನಡದಲ್ಲಿ ನಿರಂತರ ಮಳೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಮಡಿಕೇರಿಯಲ್ಲಿ ಮಳೆಯೊಂದಿಗೆ ದಟ್ಟ ಮಂಜು ಆವರಿಸಿದ್ದು, ರಸ್ತೆ ಕಾಣದೆ ವಾಹನ ಸವಾರರು ಪರದಾಡುತ್ತಿದ್ದಾರೆ. ಹಲವೆಡೆ ಗುಡ್ಡ ಕುಸಿದು ರಸ್ತೆಯ ಮೇಲೆ ರಾಶಿ ರಾಶಿ ಮಣ್ಣು ಬಿದ್ದಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.
ಉಡುಪಿ ಜಿಲ್ಲೆಯಲ್ಲೂ ನಿರಂತರ ಮಳೆಯಿಂದ ಹೊಲಗದ್ದೆಗಳು ಜಲಾವೃತಗೊಂಡಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಅವಾಂತರಕ್ಕೆ ಜನ ಹೈರಾಣಾಗಿದ್ದಾರೆ. ಕುಸ್ಕೂರು ಗ್ರಾಮದಲ್ಲಿ ಹೆಂಚಿನ ಮನೆ ಕುಸಿದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು , ಕೆಆರ್‍ಎಸ್ ಭರ್ತಿಯಾಗಿದೆ. ನದಿ ತೀರದ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿವೆ. ನದಿ ಬಳಿ ಪ್ರವಾಸಿಗರು ತೆರಳದಂತೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ.
ನಿಮಿಷಾಂಭ ದೇಗುಲ, ಸಂಗಮ ಸ್ನಾನಘಟ್ಟಕ್ಕೆ ಪ್ರವಾಸಿಗರ ನಿರ್ಬಂಧ ವಿಧಿಸಲಾಗಿದೆ. ಅತ್ತ ಬೀದರ್, ಕಲಬುರಗಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಹಾಸನದಲ್ಲಿ ಮಳೆ ಎಡೆಬಿಡದೆ ಸುರಿಯುತ್ತಿದ್ದು, ಸಕಲೇಶಪುರ, ಹಾಲೂರು, ಹಾಸನ, ಅರಕಲಗೂಡು ಬೇಲೂರಿನ ಶಾಲಾಕಾಲೇಜುಗಳಿಗೆ ರಜೆ ಮುಂದುವರೆಸಲಾಗಿದೆ. ಹೇಮಾವತಿ ಒಳಹರಿವು ಹೆಚ್ಚಳವಾಗಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲೂ ಸಹ ಮಳೆ ಮುಂದುವರೆದಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಸತತ ಮಳೆಯಿಂದ ಮಣಬೂರು ಸಮೀಪ ಭೂ ಕುಸಿತವಾಗಿದ್ದು, ಸಂಚಾರ ವ್ಯತ್ಯಯವಾಗಿದೆ. ಶೃಂಗೇರಿಯಲ್ಲಿ ಭಾರೀ ಮಳೆಯಿಂದ ಕಿರ್ಕೆ, ಶೃಂಗೇರಿ ಸಂಪರ್ಕ ಸ್ಥಗಿತಗೊಂಡಿದೆ.
ದಕ್ಷಿಣಕನ್ನಡದ ಬಂಟ್ವಾಳ ಪಂಜೀಕಲ್ ಬಳಿ ಮನೆಯ ಮೇಲೆ ಗುಡ್ಡ ಕುಸಿದಿದೆ. ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ . ಕಳೆದ ವಾರ ಇದೇ ಪ್ರದೇಶದಲ್ಲಿ ಗುಡ್ಡ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದರು.