ಬೆಂಗಳೂರು, ಆ.30- ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ಅಕ್ಷರಶಃ ನಲುಗಿ ಹೋಗಿದೆ. ಹಬ್ಬದ ಸಡಗರಕ್ಕೆ ವರುಣ ಅಡ್ಡಿಯಾಗಿದ್ದಾನೆ. ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಲವು ಬಡಾವಣೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ.
ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ರಾತ್ರಿಯಿಡೀ ಜನ ಜಾಗರಣೆ ಮಾಡುವಂತಾಗಿದೆ. ಹಬ್ಬದ ಸಡಗರದಲ್ಲಿರಬೇಕಾದ ಜನ ಮನೆಗೆ ನುಗ್ಗಿದ ನೀರನ್ನು ಹೊರಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಯಿ ಲೇಔಟ್, ನಾಗವಾರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ರಸ್ತೆ ಸೇರಿದಂತೆ ಹಲವೆಡೆ ಭಾರೀ ಪ್ರಮಾಣದ ಮಳೆ ಬಿದ್ದ ಪರಿಣಾಮ ಹಲವು ಪ್ರದೇಶಗಳು ಜಲಾವೃತಗೊಂಡು ಜನ ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬೆಳ್ಳಂದೂರು ರಸ್ತೆಯಲ್ಲಿ ನೀರು ನಿಂತು ಕಿಲೋ ಮೀಟರ್‍ಗಟ್ಟಲೆ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಜಾಪುರ ರಸ್ತೆಯಲ್ಲಿನ ರೈಂಬೋ ಡ್ರೈವ್ ಲೇಔಟ್ ಸಂಪೂರ್ಣ ಜಲಾವೃತಗೊಂಡು ಬೋಟ್ ಬಳಕೆ ಮಾಡಿ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಸರ್ಜಾಪುರ ರಸ್ತೆ ಒಂದೇ ತಿಂಗಳಲ್ಲಿ ಮೂರನೆ ಬಾರಿ ಕೆರೆಯಂತಾಗಿದೆ.
ಬೆಳ್ಳಂದೂರು ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸವಾರರ ಪರದಾಟ ಹೇಳತೀರದಾಗಿದೆ. ನಾಗವಾರ ನಿವಾಸಿಗಳ ಗೋಳನ್ನು ಯಾರೂ ಕೇಳುವವರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.ಚಿಕ್ಕ ಮಕ್ಕಳು, ಮಹಿಳೆಯರು ಮಳೆ ನೀರಿನಲ್ಲಿ ಸಿಲುಕಿಕೊಂಡು ತೊಂದರೆಗೀಡಾಗಿದ್ದಾರೆ. ಮನೆಯ ನೀರನ್ನು ಹೊರಹಾಕುವಲ್ಲಿ ನಿರತರಾಗಿದ್ದಾರೆ.
ನಾಗವಾರ ಬಳಿ ರಾಜಕಾಲುವೆ ಪಕ್ಕ ಗೋಡೆ ಕುಸಿದು ಕೂದಲೆಳೆ ಅಂತರದಲ್ಲಿ ಎರಡು ಕುಟುಂಬಗಳು ದುರಂತದಿಂದ ಪಾರಾಗಿವೆ. ಮನೆಯಲ್ಲಿ ನಾಲ್ಕು ಪುಟ್ಟ ಮಕ್ಕಳೊಂದಿಗೆ ಗಂಡ-ಹೆಂಡತಿ ವಾಸವಾಗಿದ್ದು. ನಿನ್ನೆ ಜೋರಾದ ಮಳೆಯಿಂದಾಗಿ ಬೇರೆ ಮನೆಗೆ ಹೋಗಿ ಮಲಗಿದ್ದರು. ಬೆಳಗ್ಗೆ ಗೋಡೆ ಕುಸಿದು ಬಿದ್ದಿದೆ. ಹಲವಾರು ಬಾರಿ ಅಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಮಳೆ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ವರುಣ ತುತ್ತು ಅನ್ನಕ್ಕೂ ಕುತ್ತು ತಂದ ಎಂದು ವ್ಯಾಪಾರಿಗಳು ಶಪಿಸುತ್ತಿದ್ದುದು ಕಂಡುಬಂತು.ಮಾರುಕಟ್ಟೆಗೆ ತಂದಿದ್ದ ಹೂ, ಹಣ್ಣು, ಬಾಳೆದಿಂಡು ಸೇರಿದಂತೆ ಹಲವಾರು ಪದಾರ್ಥಗಳು ಕಣ್ಣೆದುರೇ ಕೊಚ್ಚಿಹೋದವು. ಸಾಲ-ಸೋಲ ಮಾಡಿ ವ್ಯಾಪಾರಕ್ಕೆ ತಂದಿದ್ದ ಹಣ್ಣು, ಹೂವುಗಳು ಕೊಚ್ಚಿ ಹೋಗಿವೆ ಎಂದು ವ್ಯಾಪಾರಿಗಳು ಅಲವತ್ತುಕೊಂಡರು.
ನಗರದಲ್ಲಿ ನಿನ್ನೆ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ಬಾಗಲೂರಿನಲ್ಲಿ 127.5ಮಿಮೀ, ದೊಡ್ಡಜಾಲ 90, ಬಂಡಿಕೊಡಿಗೇಹಳ್ಳಿ 82, ಕೆಜಿ ಹಳ್ಳಿ 83, ಸಿಂಗಸಂದ್ರ 78,ಮಾರೇನಹಳ್ಳಿ 77, ಎಚ್.ಗೊಲ್ಲಹಳ್ಳಿ 71.5, ಸಂಪಂಗಿರಾಮನಗರ 60.5, ಯಲಹಂಕ 60, ಕೋಣನಕುಂಟೆ 57, ಬೊಮ್ಮನಹಳ್ಳಿ 56, ಹೆಮ್ಮಿಗೇಪುರ 55, ಪೀಣ್ಯ ಕೈಗಾರಿಕಾ ಪ್ರದೇಶ 54, ನಾಯಂಡಹಳ್ಳಿ 54, ಅರಕೆರೆಯಲ್ಲಿ 48.5ಮಿಮೀನಷ್ಟು ಮಳೆಯಾಗಿದೆ.
ಇನ್ನೂ ಭಾರೀ ಮಳೆ ಮುಂದುವರೆಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ತಗ್ಗು ಪ್ರದೇಶದ ನಿವಾಸಿಗಳು ಆತಂಕದಲ್ಲಿ ದಿನ ದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವರುಣನ ಆರ್ಭಟಕ್ಕೆ ಗೌರಿ-ಗಣೇಶ ಹಬ್ಬದ ಸಡಗರ-ಸಂಭ್ರಮಕ್ಕೆ ತೀವ್ರ ಅಡ್ಡಿಯಾಗಿದೆ.







