ವರುಣಾರ್ಭಟಕ್ಕೆ ತತ್ತರಿಸಿದ ತಮಿಳುನಾಡು, ಇನ್ನೂ 3 ದಿನ ರಣಮಳೆ ಎಚ್ಚರಿಕೆ

Social Share

ಚೆನ್ನೈ, ನ.3- ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ತಮಿಳುನಾಡು ತತ್ತರಿಸಿ ಹೋಗಿದೆ. ಭಾರೀ ಮಳೆಯಿಂದ ಸಾಕಷ್ಟು ಅವಾಂತರಗಳು ಸಂಭವಿಸಿದ್ದು, ಜನ-ಜಾನುವಾರುಗಳ ಸಾವು-ನೋವು ಕೂಡ ಉಂಟಾಗಿದೆ. ವರುಣನ ಆರ್ಭಟಕ್ಕೆ ತಮಿಳುನಾಡು ನಲುಗಿ ಹೋಗಿದೆ. ರಸ್ತೆಯಲ್ಲೆಲ್ಲ ನೀರು ನುಗ್ಗಿ ವಾಹನಗಳು ಸಂಚರಿಸದಷ್ಟು ಪರಿಸ್ಥಿತಿ ನಿರ್ಮಾಣವಾಗಿದೆ.

ಪಾದಚಾರಿಗಳು ಓಡಾಡದಂತಹ ಪರಿಸ್ಥಿತಿ ಉಂಟಾಗಿದೆ. ಮನೆಗಳು ಕುಸಿಯುತ್ತಿದ್ದು, ಜನವಸತಿ ಪ್ರದೇಶಕ್ಕೂ ಕೂಡ ನೀರು ನುಗ್ಗಿ ಜನರು ಪರದಾಡುವಂತಾಗಿದೆ.ಮಳೆಯ ಅಬ್ಬರಕ್ಕೆ ಈಗಾಗಲೇ ಏಳು ಜನ ಮೃತಪಟ್ಟಿದ್ದಾರೆ. ನಿನ್ನೆ ಬೆಳಗ್ಗೆಯಿಂದ ರಾತ್ರಿವರೆಗೆ ವರುಣನ ಆರ್ಭಟ ಜೋರಾಗಿದ್ದು, ತಮಿಳುನಾಡು ಜನರ ನೆಮ್ಮದಿ ಕೆಡಿಸಿದೆ. ಹಲವು ಪ್ರದೇಶಗಳಲ್ಲಿ ದಾಖಲೆಯ ಮಳೆ ಸುರಿದು ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಕಾಂಚಿಪುರಂ, ತಿರುವಳ್ಳುವೂರ್, ಚಂಗಲುಪಟ್ಟಿಯಲ್ಲಿ ಅಬ್ಬರದ ಮಳೆಯಾಗಿದೆ. ರಾಣಿಪೇಟ್, ಯಲ್ಲೂರು ಸೇರಿ ಉತ್ತರದ ಜಿಲ್ಲೆಗಳಲ್ಲಿ ಸಾಲು ಸಾಲು ಅವಾಂತರಗಳು ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಪುಲಿಯಾನ್ ತೋಪ್‍ನ ವಸತಿ ಕಟ್ಟಡ ಕುಸಿದು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಸತತ ಮಳೆಯಿಂದ ವಿದ್ಯುತ್ ಸ್ಪರ್ಶಿಸಿ ಮತ್ತೊಬ್ಬರು ಮೃತಪಟ್ಟಿದ್ದಾರೆ.

ಚೆನ್ನೈ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಚೆನ್ನೈ, ತಿರುವಳ್ಳುವೂರ್ ಸೇರಿದಂತೆ ಹಲವು ಕಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಚೆನ್ನೈ ನಗರದಲ್ಲಿ ಭಾರೀ ಮಳೆಯಿಂದ ಹಲವು ಕಡೆ ಮರಗಳು ಧರೆಗುರುಳಿ ಸಂಚಾರಕ್ಕೆ ಅಡಚಣೆಯಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಮನೆಗಳು ಜಲಾವೃತಗೊಂಡಿವೆ. ಅಂಡರ್‍ಪಾಸ್‍ಗಳಲ್ಲಿ ನೀರು ನಿಂತಿರುವುದರಿಂದ ಸಾಕಷ್ಟು ಸಮಸ್ಯೆಯಾಗಿದೆ.

ಮುಖ್ಯಮಂತ್ರಿ ಸ್ಟ್ಯಾಲಿನ್ ಅವರು ಎಲ್ಲ ಜಿಲ್ಲಾಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಳೆ ಬಗ್ಗೆ ಮಾಹಿತಿ ಪಡೆದು ಜನರಿಗೆ ಅಗತ್ಯ ನೀಡುವಂತೆ ಸೂಚನೆ ನೀಡಿದ್ದಾರೆ. ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ತಮಿಳುನಾಡು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಲ್ಲಿನ ಮಳೆಯ ಪರಿಣಾಮ ಕರ್ನಾಟಕದ ಮೇಲೆ ಬೀರಿದ್ದು, ಬೆಂಗಳೂರು, ಕೋಲಾರ, ಹೊಸೂರು ಭಾಗಗಳಲ್ಲೂ ಕೂಡ ಜಿಟಿಜಿಟಿ ಮಳೆಯಾಗುತ್ತಿದೆ. ಇನ್ನೂ ಎರಡು-ಮೂರು ದಿನಗಳು ಮಳೆ ಮುಂದುವರೆಯುವ ಪರಿಣಾಮ ತಮಿಳುನಾಡು ಜನರಿಗೆ ತೊಂದರೆ ತಪ್ಪುವುದಿಲ್ಲ.

ರಾಷ್ಟ್ರೀಯ ಶಿಕ್ಷಣ ನೀತಿ ಮುಂದಿನ ವರ್ಷ ಅನುಷ್ಠಾನ

Articles You Might Like

Share This Article