ಭಾರೀ ಮಳೆ : ರಾಮನಗರ-ಚನ್ನಪಟ್ಟಣ ಜಲಾವೃತ

Social Share

ಬೆಂಗಳೂರು,ಆ.29- ಮಧ್ಯರಾತ್ರಿಯಿಂದ ಇಂದು ಬೆಳಗ್ಗೆವರೆಗೆ ಸುರಿದ ಕುಂಭದ್ರೋಣ ಮಳೆಗೆ ರಾಮನಗರ, ಕನಕಪುರ, ಚನ್ನಪಟ್ಟಣ ತಾಲ್ಲೂಕುಗಳಲ್ಲಿ ಅವಾಂತರವೇ ಸೃಷ್ಟಿಯಾಗಿದ್ದು, ಜನರು ತತ್ತರಿಸುವಂತಾಗಿದೆ. ಭಾರೀ ಮಳೆಯಿಂದಾಗಿ ಬೆಂಗಳೂರು, ಮೈಸೂರು ರಸ್ತೆಯ ಹೆದ್ದಾರಿಯಲ್ಲಿ ನೀರು ತುಂಬಿದ್ದು, ಬಸ್ಸು, ಕಾರು ಸೇರಿದಂತೆ ಹಲವು ವಾಹನಗಳು ನೀರಿನಲ್ಲಿ ಮುಳುಗಿ ತೇಲುತ್ತಿದ್ದವು.

ರಾಮನಗರ ತಾಲ್ಲೂಕಿನ ಸಂಗಬಸವನದೊಡ್ಡಿ, ಬಸವನಪುರ ನಡುವಿನ ದಶಪಥ ರಾಷ್ಟ್ರೀಯ ಹೆದ್ದಾರಿಯ ಅಂಡರ್‍ಪಾಸ್‍ನಲ್ಲಿ ನೀರು ತುಂಬಿದ್ದು, ವಾಹನಗಳು ಮುಳುಗಡೆಯಾಗಿವೆ. ಎರಡೂ ಕಡೆಯೂ ಟ್ರಾಫಿಕ್‍ಜಾಮ್ ಉಂಟಾಗಿದ್ದು, ಕಿಲೋಮೀಟರ್ ಗಟ್ಟಲೇ ವಾಹನಗಳು ರಸ್ತೆಯಲ್ಲೇ ನಿಂತಿದ್ದವು. ಇಂದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ರಸ್ತೆಯಲ್ಲಿ ನೀರು ತುಂಬಿದ್ದರಿಂದ ವಾಹನಗಳನ್ನು ಬಿಟ್ಟು ಪ್ರಯಾಣಿಕರು ಹಾಗೂ ಜನರು ಹೊರಬಂದಿದ್ದಾರೆ. ವಡೇರಹಳ್ಳಿ ಬಳಿ ಕೂಡ ಭಾರೀ ಪ್ರಮಾಣದ ನೀರು ರಸ್ತೆಗೆ ನುಗ್ಗಿ ಅನಾಹುತವನ್ನೇ ಸೃಷ್ಟಿಸಿದೆ. ರಾಮನಗರದ ರೈಲು ನಿಲ್ದಾಣದ ಹಳಿಗಳ ಮೇಲೆ ಭಾರೀ ಪ್ರಮಾಣದ ನೀರು ನಿಂತಿದ್ದು, ರೈಲು ಸಂಚಾರವು ಅಸ್ತವ್ಯಸ್ತಗೊಂಡಿತ್ತು. ರೈಲ್ವೆ ನಿಲ್ದಾಣ ಬಳಿಯ ಅಂಡರ್‍ಪಾಸ್ ಮತ್ತು ಹಳ್ಳದಲ್ಲಿ ಭಾರೀ ಪ್ರಮಾಣದ ನೀರು ನಿಂತಿದ್ದರಿಂದ ಸಿಬ್ಬಂದಿ ಬೋಟ್ ಬಳಸಿ ಹಳ್ಳ ದಾಟಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಹಿಂಭಾಗದಲ್ಲಿ ಹಳ್ಳದಲ್ಲಿ ಪ್ರವಾಹ ರೀತಿಯಲ್ಲಿ ನೀರು ಕಂಡುಬಂದಿತು. ಈ ನಡುವೆ ಖಾಸಗಿ ಬಸ್ಸೊಂದು ಪರ್ಯಾಯ ಮಾರ್ಗದಲ್ಲಿ ಹೋಗಿ ಬಿಳಿಗುಂಬದ ಬಳಿ ನೀರಿನಲ್ಲಿ ಸಿಲುಕಿದೆ. ಬಸ್‍ನಲ್ಲಿದ್ದ 50 ಪ್ರಯಣಿಕರನ್ನು ಕಿಟಕಿ ಮೂಲಕ ಸ್ಥಳೀಯರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಮನಗರ, ಕನಕಪುರ, ಚನ್ನಪಟ್ಟಣ ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿಬಿದ್ದಿವೆ ಚಾಮುಂಡಿಪುರದ ಬಳಿ ಇರುವ ಬೋಳಪ್ಪನಹಳ್ಳಿ ಕೆರೆ ಏರಿ ಬಿರುಕುಬಿಟ್ಟಿದ್ದು, ಅಪಾಯದ ಆತಂಕ ಎದುರಾಗಿದೆ.

ಇದರಿಂದ ಸಣ್ಣ ನೀರಾವರಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕೆರೆ ಕೋಡಿ ಒಡೆದು ಕೆರೆಯಿಂದ ನೀರು ಹರಿಸುವ ಪ್ರಯತ್ನವನ್ನು ಮಾಡಿದ್ದಾರೆ. ರಾಮನಗರದ ಸೀರಳ್ಳ, ಅರ್ಕೇಶ್ವರ ಕಾಲೋನಿ, ಟಿಪ್ಪುನಗರ, ಮೋತಿನಗರ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿರುವ ವರದಿಯಾಗಿದೆ.

ರಂಗರಾಯದೊಡ್ಡಿ ಕರೆ ಕೋಡಿ ಬಿದ್ದು ಅಪಾರ ಪ್ರಮಾಣದ ನೀರು ನುಗ್ಗಿದ್ದರಿಂದ ಕನಕಪುರ ವೃತ್ತದ ರಸ್ತೆಯಲ್ಲೂ ನೀರು ತುಂಬಿತ್ತು. ಚನ್ನಪಟ್ಟಣದ ರಾಂಪುರ ಎಲೆಕೇರೆ ರಸ್ತೆಯಲ್ಲಿ ನೀರು ತುಂಬಿದ್ದು, ಸಂಚಾರಕ್ಕೆ ಅಡ್ಡಿಯಾಗಿತ್ತು. ಅಕ್ಕಪಕ್ಕದ ಬಡಾವಣೆಗಳಲ್ಲೂ ನೀರು ನುಗ್ಗಿ ಅಸ್ತವ್ಯಸ್ತವಾಗಿತ್ತು.

ಚಾಮರಾಜನಗರ ಜಿಲ್ಲೆಯಲ್ಲೂ ಮಳೆ ಆರ್ಭಟ ಮುಂದುವರೆದಿದ್ದು, ಯಳಂದೂರು ತಾಲ್ಲೂಕಿನ ಕೃಷ್ಣಯ್ಯನಕಟ್ಟೆ ಕೋಡಿ ಬಿದ್ದು ಜಲಪಾತವೇ ಸೃಷ್ಟಿಯಾಗಿತ್ತು. ಧಾರಾಕಾರ ಮಳೆಯಿಂದ ಅಪಾರ ಪ್ರಮಾಣದ ನೀರು ನುಗ್ಗಿ ಅನಾಹುತವಾಗುವುದರಲ್ಲದೆ ಬೆಳೆ ಹಾನಿ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಚಾಮರಾಜನಗರ ತಾಲ್ಲೂಕಿನ ಕಿರಗಸೂರು ಗಾಮಗಳ ಮನೆಗಳಿಗೆ ನೀರು ನುಗ್ಗಿದೆ. ಇದೇ ರೀತಿ ಆನೇಕಲ್, ಕನಕಪುರ, ಕಲಬುರಗಿ, ತುಮಕೂರು, ಕೋಲಾರ, ಮಂಡ್ಯ, ಧಾರವಾಡ, ಯಾದಗಿರಿ, ರಾಯಚೂರು, ಬಳ್ಳಾರಿ,ಕೊಳ್ಳೆಗಾಲ ಹಾವೇರಿ, ಗದಗ, ಕೊಡಗು ಮತ್ತಿತರ ಜಿಲ್ಲೆಗಳ ಕೆಲವು ಕಡೆ ಮಳೆಯಾದ ವರದಿಯಾಗಿದೆ.

Articles You Might Like

Share This Article